ಕೆಜಿ ಏಲಕ್ಕಿಗೆ 10 ರೂ..!

ಏಲಕ್ಕಿ
Advertisement

ಬಳ್ಳಾರಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಡೆಸುತ್ತಿರುವ ನಿಲಯಗಳಲ್ಲಿ ಊಟ ಪೂರೈಸಲು ಬೇಕಾದ ಮಸಾಲೆ ಸಾಮಗ್ರಿ ಪೂರೈಕೆ ಮಾಡಲು ಕರೆದಿರುವ ಟೆಂಡರ್‌ನಲ್ಲಿ ಕೆಜಿ ಏಲಕ್ಕಿಯನ್ನು ೧೦ ರೂ., ಕೆಜಿ ಗಸಗಸೆಯನ್ನು ೨೫ ರೂ. ಬೆಲೆಯಲ್ಲಿ ಪೂರೈಕೆ ಮಾಡುವುದಾಗಿ ಗುತ್ತಿಗೆದಾರನೊಬ್ಬ ಬೆಲೆಪಟ್ಟಿ ಸಲ್ಲಿಕೆ ಮಾಡಿ ಅಧಿಕಾರಿಗಳನ್ನು ಗೇಲಿ ಮಾಡಿದ್ದಾನೆ.
ವರ್ಷಕ್ಕೆ ಸುಮಾರು ೫ ಕೆಜಿ ಏಲಕ್ಕಿ ಹಾಗೂ ೧೦ ಕೆಜಿ ಗಸಗಸೆ ಬೇಕೆಂಬ ಅಂದಾಜು ಇದೆ. ಇದನ್ನ ಪೂರೈಕೆ ಮಾಡಲು ಕರೆದ ಟೆಂಡರ್‌ನಲ್ಲಿ ಗುತ್ತಿಗೆದಾರ ತೀರಾ ಕಡಿಮೆ ಬೆಲೆ ಹಾಕಿರುವುದು ಅಧಿಕಾರಿಗಳನ್ನು ತಬ್ಬಿಬ್ಬುಗೊಳಿಸಿದೆ.
ಷರತ್ತುಗಳ ಪ್ರಕಾರ ಮಾರುಕಟ್ಟೆಯ ಬೆಲೆಗೆ ಸಮೀಪದ ಬೆಲೆಗೆ ಪೂರೈಕೆ ಮಾಡುವ ವಾಗ್ದಾನವನ್ನು ಟೆಂಡರ್ ಮೂಲಕ ಮಾಡುತ್ತಾರೆ. ಅದರಲ್ಲಿ ಇರುವ ಕನಿಷ್ಠ ದರದ ಟೆಂಡರ್‌ದಾರನಿಗೆ ಸಾಮಗ್ರಿ ಪೂರೈಕೆಮಾಡುವ ಅವಕಾಶ ಮಾಡಿಕೊಡಲಾಗುತ್ತದೆ. ಆದರೆ, ಈಗ ಅಧಿಕಾರಿಗಳಿಗೆ ಏನು ಮಾಡಬೇಕು ಎಂಬುದು ತಿಳಿಯದಂತೆ ಆಗಿದೆ.
ಇಲಾಖೆಯ ಹಿರಿಯ ಅಧಿಕಾರಿ ಒಬ್ಬರು ಪತ್ರಿಕೆಗೆ ಮಾಹಿತಿ ನೀಡಿ, ಈ ಹಿಂದೆ ಇದೇ ರೀತಿ ಕನಿಷ್ಠ ಬೆಲೆಯ ದರ ಪಟ್ಟಿ ಪೂರೈಕೆ ಮಾಡಿದವರಿಗೆ ಟೆಂಡರ್ ನೀಡಲಾಗಿತ್ತು. ಆದರೆ, ಅವರು ಅರ್ಧದಲ್ಲೇ ನಿಲ್ಲಿಸಿಹೋದರು. ಈ ಬಾರಿ ಸಹ ಹಾಗೆ ಆಗಬಾರದು ಎಂಬ ಕಾರಣಕ್ಕೆ ಟೆಂಡರ್‌ದಾರನನ್ನು ಬ್ಲಾಕ್‌ಲಿಸ್ಟ್‌ಗೆ ಹಾಕಲು ಶಿಫಾರಸು ಮಾಡಲು ನಿರ್ಧರಿಸಿದ್ದೇವೆ ಎಂದು ತಿಳಿಸಿದ್ದಾರೆ.