ಕೃಷ್ಣಾ ರಾಷ್ಟ್ರೀಯ ಯೋಜನೆ ಕನಸು ನನಸಾದೀತೆ?

Advertisement

ಬಿ. ಅರವಿಂದ
ಹುಬ್ಬಳ್ಳಿ:
ವಿಶೇಷ ಆರ್ಥಿಕ ವಲಯ ಹಾಗೂ ರೈಲ್ವೆ ಯೋಜನೆಗಳ ಬಗ್ಗೆ ಕೇಂದ್ರ ಸರ್ಕಾರ ಗುರುವಾರದ ಬಜೆಟ್‌ನಲ್ಲಿ ಯಾವ ಘೋಷಣೆಗಳನ್ನು ಮಾಡಲಿದೆ? ತುಂಬ ದಿನಗಳಿಂದ ಕಾಯುತ್ತಿರುವ ಕೃಷ್ಣಾ ರಾಷ್ಟ್ರೀಯ ಯೋಜನೆ ಕನಸು ನನಸಾದೀತೆ? ಮಹದಾಯಿಗೆ ಎದುರಾಗಿರುವ ಕೇಂದ್ರ ಪರಿಸರ ಸಚಿವಾಲಯ ಆಕ್ಷೇಪಣೆ ನಿವಾರಣೆಯಾದೀತೆ? ಗೋವಾ ಸಲ್ಲಿಸಿರುವ ತಕರಾರು ಅರ್ಜಿಯನ್ನು ಹಿಂಪಡೆಯುವಂತೆ ಮಾಡಲು ಕೇಂದ್ರ ಮುಂದಾಗುವುದೇ ಎನ್ನುವ ಪ್ರಶ್ನೆಗಳು ಉತ್ತರ ಕರ್ನಾಟಕದಲ್ಲಿ ಮೂಡಿವೆ.
ಜನಪರ ಘೋಷಣೆಗಳು ಏನೇ ಇದ್ದಿರಬಹುದು. ಇವೆರಡು ಅಂಶಗಳ ಕುರಿತ ಖಚಿತ ನಿಲುವು ಪ್ರಕಟವಾದಲ್ಲಿ ಪ್ರಾದೇಶಿಕ ಅಸಮಾನತೆ ಮತ್ತು ನಿರುದ್ಯೋಗದ ಬಿಸಿ ಅನುಭವಿಸುತ್ತಿರುವ ಈ ನೆಲಕ್ಕೆ ಭರವಸೆಯ ಬೆಳ್ಳಿ ಕಿರಣ ಕಾಣಲಿದೆ. ಆದ್ದರಿಂದಲೇ ಮೋದಿ ಸರ್ಕಾರ ಚುನಾವಣೆ ಎದುರಿಸುವ ಮುನ್ನ ಮಂಡಿಸುತ್ತಿರುವ ಬಜೆಟ್ ಬಗ್ಗೆ ಹೆಚ್ಚು ಕುತೂಹಲ ಮೂಡಿದೆ.
ದಕ್ಷಿಣ ಭಾರತದಲ್ಲಿ ಚೆನ್ನೈ-ಬೆಂಗಳೂರು-ಮುಂಬೈ ಕೈಗಾರಿಕಾ ಕಾರಿಡಾರ್ ಮೋದಿ ಸರ್ಕಾರ ಗುರುತಿಸಿರುವ ಅತಿ ಮಹತ್ವದ ಔದ್ಯಮಿಕ ಪ್ರಕ್ರಿಯೆ. ಎನ್‌ಡಿಎ ಎರಡನೇ ಅವಧಿಯಲ್ಲಿ ಘೋಷಿತವಾಗಿರುವ ಇದು ವಿಶೇಷ ಆರ್ಥಿಕ ವಲಯ(ಎಸ್‌ಇಝಡ್) ಸೇರಿದಂತೆ, ಎಫ್‌ಎಂಸಿಜಿ ಹಾಗೂ ಇನ್ನಿತರ ಬಗೆಯ ಉದ್ಯಮಗಳನ್ನು ಪೋಷಿಸುವುದಕ್ಕೆ ಪೂರಕವಾಗಿದೆ.
ಮುಂಬೈ-ಬೆಂಗಳೂರು-ಚೆನ್ನೈ ಕೈಗಾರಿಕಾ ಕಾರಿಡಾರ್‌ನ ಅತಿ ಹೆಚ್ಚು (ಶೇ. ೬೦ರಷ್ಟು ಎಂಬುದು ಪ್ರಾಥಮಿಕ ಅಂದಾಜು) ಭೂಪ್ರದೇಶವನ್ನು ಉತ್ತರ ಕರ್ನಾಟಕ ಒಳಗೊಂಡಿದೆ. ಇದರ ವ್ಯಾಪ್ತಿಯಲ್ಲಿ ಬೆಳಗಾವಿ, ಧಾರವಾಡ, ಹಾವೇರಿ ಜಿಲ್ಲೆಗಳು ಬರುತ್ತವೆ. ಅಲ್ಲದೇ ನಿಪ್ಪಾಣಿ, ಸಂಕೇಶ್ವರ, ಚನ್ನಮ್ಮನ ಕಿತ್ತೂರು, ಬೇಲೂರು, ಅಮರಗೋಳ, ಇಟಿಗಟ್ಟಿ, ತಾರೀಹಾಳ, ಶಿಗ್ಗಾವಿ, ಮೋಟೆಬೆನ್ನೂರು, ರಾಣೆಬೆನ್ನೂರು ಹೀಗೆ ಸರಣಿ ಸ್ಥಳಗಳು ಈ ಕಾರಿಡಾರ್‌ನ ಪ್ರಯೋಜನ ಪಡೆಯಲು ಕಾಯುತ್ತಿವೆ.
ಸದ್ಯ ಹತ್ತರಗಿಯ ಎಸ್‌ಇಝಡ್ ವ್ಯಾಪ್ತಿಯಲ್ಲಿ ಏಕಸ್‌ನ ಭಾರತೀಯ ಉತ್ಪಾದನಾ ಕೇಂದ್ರ ಇರುವುದನ್ನು ಹೊರತುಪಡಿಸಿದರೆ, ಇಡೀ ಕಾರಿಡಾರ್‌ನ ಉತ್ತರ ಕರ್ನಾಟಕ ವ್ಯಾಪ್ತಿಯಲ್ಲಿ ಒಂದೇ ಒಂದು ಹೇಳಿಕೊಳ್ಳುವಂತಹ ಔದ್ಯಮಿಕ ಚಟುವಟಿಕೆ ಮೈದಳೆದಿಲ್ಲ. ಧಾರವಾಡದ ಮುಮ್ಮಿಗಟ್ಟಿ ಬಳಿ ಘೋಷಿತವಾಗಿರುವ ಕರ್ನಾಟಕ ಸರ್ಕಾರದ ಎಫ್‌ಎಂಸಿಜಿಯೂ ಕುಂಟುತ್ತಿದೆ.