ಕೃಷಿ ಡಿಪ್ಲೊಮಾ ಕೈಬಿಡುವ ಮುನ್ನ ಪರ್ಯಾಯ ಅಗತ್ಯ

ಸಂಪಾದಕೀಯ
Advertisement

ರಾಜ್ಯದಲ್ಲಿ ಈಗ ಎಲ್ಲ ಕೃಷಿ ವಿವಿಗಳಲ್ಲಿ ಡಿಪ್ಲೊಮಾ ಕೋರ್ಸ್‌ಗಳನ್ನು ಸ್ಥಗಿತಗೊಳಿಸಲಾಗುತ್ತಿದೆ. ಇದಕ್ಕೆ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಕೃಷಿ ಸಚಿವರೇ ಇದರ ಬಗ್ಗೆ ಇನ್ನೂ ಚರ್ಚೆ ನಡೆಸಬೇಕಿದೆ ಎಂದು ಹೇಳಿದ್ದಾರೆ. ಕೃಷಿ ವಿಷಯ ರಾಜ್ಯ ಸರ್ಕಾರಕ್ಕೆ ಸೇರಿದ್ದು. ಕೇಂದ್ರ ಸರ್ಕಾರ ನೀತಿಯನ್ನು ರೂಪಿಸಿ ಉಳಿದ ಕ್ರಮಗಳನ್ನು ಕೈಗೊಳ್ಳಲು ರಾಜ್ಯ ಸರ್ಕಾರಕ್ಕೆ ಬಿಡುತ್ತದೆ. ರಾಷ್ಟ್ರೀಯ ಶಿಕ್ಷಣ ನೀತಿಯ ಹಾಗೆ ರಾಷ್ಟ್ರೀಯ ಕೃಷಿ ಶಿಕ್ಷಣ ನೀತಿಯನ್ನು ರೂಪಿಸಲಾಗಿದೆ. ಇದರ ಬಗ್ಗೆ ವ್ಯಾಪಕ ಚರ್ಚೆ ನಡೆದಿಲ್ಲ. ಅದರಲ್ಲೂ ಜನಪ್ರತಿನಿಧಿಗಳು ಮಣ್ಣಿನ ಮಕ್ಕಳು ಎಂದು ಕರೆದುಕೊಳ್ಳುತ್ತಾರೆ. ಕೃಷಿ ಬಗ್ಗೆ ಅತ್ಯಂತ ಕಡಿಮೆ ಅವಧಿಯಲ್ಲಿ ವಿಧಾನಮಂಡಲಗಳಲ್ಲಿ ಚರ್ಚೆ ನಡೆಸುತ್ತಾರೆ. ಕೃಷಿ ವಿವಿಗಳು ದೇಶದಲ್ಲಿ ೭೪ ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿವೆ. ಕೃಷಿ ಶಿಕ್ಷಣವನ್ನು ನೋಡಿಕೊಳ್ಳಲು ರಾಷ್ಟ್ರೀಯ ಕೃಷಿ ಶಿಕ್ಷಣ ಮಂಡಳಿ (ಐಸಿಎಆರ್) ಇದೆ. ಆದರೆ ಇದಕ್ಕೆ ಇತರ ಮಂಡಳಿಗೆ ಇರುವ ಅಧಿಕಾರ ನೀಡಿಲ್ಲ. ವೈದ್ಯಕೀಯ ಶಿಕ್ಷಣ ಮಂಡಳಿ ಸೇರಿದಂತೆ ಹಲವು ಸಂಸ್ಥೆಗಳಿಗೆ ನಿಯಂತ್ರಣ ಅಧಿಕಾರ ನೀಡಲಾಗಿದೆ.
ಇಡೀ ಕೃಷಿ ಶಿಕ್ಷಣ ಕ್ಷೇತ್ರದಲ್ಲಿ ಏಕ್‌ದಂ ಕ್ರಾಂತಿಕಾರಿ ಬದಲಾವಣೆ ತಂದು ಬಿಡುತ್ತೇವೆ ಎಂದು ಅತ್ಯಂತ ಹುಮ್ಮಸ್ಸಿನಿಂದ ಹೋಗುವುದು ಸರಿಯಾದ ಕ್ರಮವಲ್ಲ. ಶಿಕ್ಷಣ ರಂಗದಲ್ಲಿ ಬದಲಾವಣೆ ನಿಧಾನವಾಗಿ ಬರುವುದು ಸಹಜ. ಅಲ್ಲದೆ ವಿದ್ಯಾರ್ಥಿಗಳು ಒಂದು ಶಿಕ್ಷಣ ವ್ಯವಸ್ಥೆಗೆ ಹೊಂದಿಕೊಂಡಿರುತ್ತಾರೆ. ಅದನ್ನು ಒಂದೇ ದಿನದಲ್ಲಿ ಬದಲಾಯಿಸಲು ಬರುವುದಿಲ್ಲ.
ಈಗ ಕೃಷಿ ವಿವಿಗಳಲ್ಲಿ ಬದಲಾವಣೆ ತರಲಾಗುತ್ತಿದೆ. ಕೃಷಿಪದವೀಧರರು ಹೆಚ್ಚು ಪ್ರಾಯೋಗಿಕ ಅನುಭವ ಪಡೆಯುವುದು ಅಗತ್ಯ. ವೈದ್ಯಕೀಯ ರಂಗದಲ್ಲಿ ಎಂಬಿಬಿಎಸ್‌ಗೆ ಸೇರಿದವರು ಮೊದಲದಿನದಿಂದಲೇ ರೋಗಿಯ ತಪಾಸಣೆ ಮತ್ತು ಶಸ್ತ್ರಚಿಕಿತ್ಸೆ ವಿಧಿವಿಧಾನಗಳನ್ನು ತಿಳಿದುಕೊಳ್ಳುತ್ತಾರೆ. ಕೃಷಿ ವಿವಿಗಳಲ್ಲಿ ಈ ರೀತಿ ಶಿಕ್ಷಣ ನೀಡುವ ವ್ಯವಸ್ಥೆ ಇಲ್ಲ. ರೈತರೇ ಬೇರೆ. ಕೃಷಿ ವಿವಿಗಳೇ ಬೇರೆ, ಕೃಷಿ ಸಂಶೋಧನೆಯೇ ಬೇರೆ ಎನ್ನುವಂತಾಗಿದೆ. ಇದರಿಂದ ಕೃಷಿ ಪದವಿ ಪಡೆದವರು ಐಎಎಸ್ ಮತ್ತು ಕೆಎಎಸ್‌ಗೆ ಹೋಗುವುದು ಸಾಮಾನ್ಯ ಸಂಗತಿಯಾಗಿದೆ. ಇದರಿಂದ ಕೃಷಿ ರಂಗದಲ್ಲಿ ಪರಿಣತರ ಕೊರತೆ ಮುಂದುವರೆದಿದೆ. ಇಂಥ ಪರಿಸ್ಥಿತಿಯಲ್ಲಿ ಕೃಷಿ ಡಿಪ್ಲೊಮಾಗಳನ್ನು ಕೈಬಿಡುವುದು ಸದ್ಯದ ಪರಿಸ್ಥಿತಿಯಲ್ಲಿ ಸರಿಯಾದ ಕ್ರಮವಲ್ಲ. ಗ್ರಾಮೀಣ ಪ್ರದೇಶದಿಂದ ಬಂದವರು ಕೃಷಿ ರಂಗದಲ್ಲಿ ಡಿಪ್ಲೊಮಾ ಪಡೆಯಲು ಬಯಸುತ್ತಾರೆ. ಇದು ಅವರಿಗೆ ಗ್ರಾಮೀಣ ಪ್ರದೇಶದಲ್ಲಿ ಸ್ವಯಂ ಉದ್ಯೋಗ ಕೈಗೊಳ್ಳಲು ಸಹಾಯ ಮಾಡುತ್ತದೆ. ಕೃಷಿ ನೇರವಾಗಿ ಗ್ರಾಮೀಣ ಅಭಿವೃದ್ಧಿಗೆ ಸಂಬಂಧಪಡುವುದರಿಂದ ಕೃಷಿ ಶಿಕ್ಷಣದಲ್ಲಿ ಬದಲಾವಣೆ ತರುವಾಗ ಎಚ್ಚರಿಕೆ ಹೆಜ್ಜೆಗಳನ್ನಿಡುವುದು ಅಗತ್ಯ. ಡಿಗ್ರಿ ಜತೆ ಡಿಪ್ಲೊಮಾ ಬೇಡ ಎಂದರೆ ಪರ್ಯಾಯ ವ್ಯವಸ್ಥೆ ಅಗತ್ಯ.
ಕೃಷಿ ನಮ್ಮ ಸಮಾಜಕ್ಕೆ ಅತ್ಯಂತ ಹಳೆಯ ವೃತ್ತಿ. ನಾಗರಿಕತೆ ಬೆಳೆದಂತೆ ಅದೂ ಬೆಳೆದಿದೆ. ನಮ್ಮ ರೈತನಷ್ಟು ಅತ್ಯುತ್ತಮ ಅರ್ಥಶಾಸ್ತ್ರಜ್ಞ ಬೇರೆಯವರಿಲ್ಲ. ರೈತ ತನಗೆ ಉಪಯೋಗವಾಗದ ಯಾವ ಪ್ರಯೋಗವನ್ನೂ ಕೈಗೊಳ್ಳುವುದಿಲ್ಲ. ಈಗ ಕೃಷಿ ಅತ್ಯಂತ ಹೆಚ್ಚು ಯಂತ್ರಗಳನ್ನು ಅವಲಂಬಿಸಿದೆ. ಕೃಷಿ ಕಾರ್ಮಿಕರು ದೊರಕುವುದೇ ಕಷ್ಟವಾಗಿದೆ. ಇದರಿಂದ ಕೃಷಿ ದುರುಪಯೋಗವಾಗುತ್ತಿದೆ. ಹೀಗಾಗಿ ಕೃಷಿಕರ ಬೇರೆ ವೃತ್ತಿಯ ಕಡೆ ಕಣ್ಣುಹಾಯಿಸುವಂತಾಗಿದೆ. ಕೃಷಿ ಲಾಭದಾಯಕ ಮಾಡಲು ಕೃಷಿ ಶಿಕ್ಷಣ ನೆರವಾಗುವಂತೆ ಮಾಡುವುದೇ ನಮ್ಮ ಗುರಿಯಾಗಬೇಕು. ಆಧುನಿಕತೆಯ ಹೆಸರಿನಲ್ಲಿ ಕೃಷಿ ದುಬಾರಿಯಾಗಬಾರದು. ಈಗಲೂ ನಮ್ಮ ದೇಶದಲ್ಲಿ ಕೃಷಿಯೆ ಅತಿ ಹೆಚ್ಚು ಜನರಿಗೆ ಉದ್ಯೋಗ ನೀಡುತ್ತಿದೆ. ಇದಕ್ಕೆ ಕೃಷಿ ಶಿಕ್ಷಣ ಶಕ್ತಿ ತುಂಬುವ ಕೆಲಸ ಕೈಗೊಳ್ಳಬೇಕು. ಅದಕ್ಕೆ ಡಿಗ್ರಿ, ಡಿಪ್ಲೊಮಾ ಮತ್ತು ಸರ್ಟಿಫಿಕೇಟ್ ಕೋರ್ಸ್ಗಳನ್ನು ಬಳಸಿಕೊಳ್ಳುವುದು ಅಗತ್ಯ.