ಕುವೆಂಪು ಸೃಜಿಸಿದ ದ್ರೋಣಾಚಾರ್ಯ

Advertisement

ಡಾ. ಜಿ. ಕೃಷ್ಣಪ್ಪ
ಕುವೆಂಪು ಅವರು ‘ಬೆರಳ್‌ಗೆ ಕೊರಳ್’ ನಾಟಕದ ‘ಟಿಪ್ಪಣಿಕೆ’ಯಲ್ಲಿ ಅದರ ರಚನೆಯ ಆಂತರ್ಯ ಕುರಿತು ‘ಗುರುಶಿಷ್ಯ ಸಂಬಂಧವಾದ ತತ್ವ, ಕರ್ಮತತ್ತ್ವ ಮತ್ತು ಸಮರ್ಪಣಾ ರೂಪವಾದ ಯಜ್ಞ ತತ್ತ್ವಗಳು ಇಲ್ಲಿ ಪ್ರತಿಮಾ ವಿಧಾನದಿಂದ ಧ್ವನಿತವಾಗಿವೆ’ ಎಂದು ತಿಳಿಸಿದ್ದಾರೆ. ಅವರ ಅಮೋಘ ಕಲ್ಪನೆಯಲ್ಲಿ ಅರಳಿರುವ ದ್ರೋಣಾಚಾರ್ಯ ಪಾತ್ರವು ಚಾತುರ್ವರ್ಣ ಆಚರಣೆಯಿಂದ ಮುಕ್ತವಾದುದಾಗಿದೆ.
ಏಕಲವ್ಯನು ಗುರು ದ್ರೋಣಾಚಾರ್ಯರು ತನ್ನ ಕಾಡಿನ ನೆಲೆಗೆ ಬರುವರೆಂದು ಉಪವಾಸ ವ್ರತಧಾರಿಯಾಗಿ ನಿರೀಕ್ಷಿಸುವನು. ತನ್ನ ತಾಯಿಗೆ ತಾನು ಅವರ ಶಿಷ್ಯನಾದ ಘಟನೆ ವಿವರಿಸಿ ವರ್ಗ ವರ್ಣರಹಿತ ಗುರು ಮಹಿಮೆಯನ್ನು ಹೀಗೆ ತಿಳಿಸುವನು :
‘ಅಮ್ಮ ನನ್ನ ತಂದೆಯಿಂದ ದ್ರೋಣರ ಮಹಿಮೆ ತಿಳಿದು ಅವರಲ್ಲಿ ಬಿಲ್ಲುವಿದ್ಯೆ ಕಲಿಯಲು ಹೋಗಬೇಕೆಂದು ಆಸೆ ವ್ಯಕ್ತಪಡಿಸಿದೆ. ಅವರು ‘ಬ್ರಾಹ್ಮಣರು, ಬೇಡರಿಗೆ ಉಪಾಧ್ಯಾಯ ವೃತ್ತಿ ಕೈಗೊಳ್ಳಲು ಒಪುö್ಪವುದಿಲ್ಲ’ ಎಂದು ಹೇಳಿದರು. ಆದರೆ ನಾನು ಗುರುವನ್ನು ಒಲಿಸಿ ವಿದ್ಯೆ ಕಲಿಯುವ ಆಸೆ ವ್ಯಕ್ತಪಡಿಸಿ ಹಸ್ತಿನಾಪುರಕ್ಕೆ ಹೋದೆ. ಆ ನಗರದಲ್ಲಿ ಗುರುಪುತ್ರ ಅಶ್ವತ್ಥಾಮನನ್ನು ಕಂಡೆ. ಆತನಿಗೆ ನನ್ನಲ್ಲಿ ಸ್ನೇಹಭಾವ ಉಂಟಾಯಿತು. ತನ್ನ ತಂದೆಯ ಬಳಿಗೆ ಕರೆದೊಯ್ದ. ನಾನು ಶೂದ್ರನಾದರೂ ಗುರುಗಳು ತಿರಸ್ಕರಿಸಲಿಲ್ಲ. ಮಗನಿಗೆ ‘ನಮ್ಮ ಶಿಷ್ಯರಲ್ಲಿ ಈತನೂ ಒಬ್ಬ. ನಿನಗೆ ಕಿರಿಯವನೆಂದು ತಿಳಿದುಕೊ’ ಎಂದು ಹೇಳಿದರು. ಆಗ ನನಗೆ ಐರಾವತದ ದಂತದೊಂದಿಗೆ ಸೆಣಸುವ ಕೋಡು ಮೂಡಿತು.
‘ಅಮ್ಮ, ನನ್ನ ಬಿಲ್ಲಿನ ಪರಿಣತೆ ಕಂಡು ಬಿಂಕಗುಳಿ ಅರ್ಜುನ ಅಸೂಯಾಪರನಾದ. ‘ಶೂದ್ರನೊಡನೆ ತಮಗೆ ಸಮಾನತೆ ಸಲ್ಲದು’ ಎಂದು ಕೋಪಗೊಂಡು ಕೀಳಾಗಿ ನುಡಿದ. ಆಚಾರ್ಯರು ‘ಶೂದ್ರನಾದರೇನು ಸಮರ್ಥನಿದ್ದಾನೆ. ಮುಂದೆ ನಿಮ್ಮ ಸೇವೆಗೆ ನಿಲ್ಲುತ್ತಾನೆ. ಪರಾಕ್ರಮಿಯಾದವನು ಸೇವೆಯಲ್ಲಿರಲು ನೀವು ಬಲಿಷ್ಠರಾಗುವಿರಿ’ ಎಂದು ಉಪದೇಶಿಸಿದರು. ಅವರ ಹಿತವಚನ ಕಡೆಗಣಿಸಿ ನನ್ನನ್ನು ಹೊರಗಟ್ಟಿದರು.
‘ಅಮ್ಮ ಆಗ ಗುರುವು ನೊಂದುಕೊಂಡು ‘ಏಕಲವ್ಯ’ ಎಂದು ಹೆಸರಿಟ್ಟು ಕರೆದು ‘ನೀನು ನಮ್ಮ ಮನೆಯಲ್ಲಿ ಒಬ್ಬ ವ್ಯಕ್ತಿಯಾಗಿರು. ನನ್ನನ್ನು ವಿದ್ಯೆ ಕಲಿಸುವ ಎಡೆಗೆ ಕರೆತರುತ್ತ, ದೂರದಲ್ಲಿ ನಿಂತು ಎಷ್ಟು ಸಾಧ್ಯವೊ ಅಷ್ಟನ್ನು ಕಂಡು ಕಲಿ. ಮಿಕ್ಕದ್ದನ್ನು ಮನೆಯಲ್ಲಿ ಅಶ್ವಾತ್ಥಾಮನೊಡನೆ ಕಲಿ’ ಎಂದು ಧೈರ್ಯತುಂಬಿ ವಿದ್ಯೆ ಕಲಿಸಿದರು. ಬಿಲ್ಲುವಿದ್ಯೆಯೊಡನೆ ಸಂಸ್ಕೃತ ಭಾಷೆ ಕಲಿಸಿದ ಸಮದರ್ಶಿ ಅವರು. ವಿದ್ಯೆ ಪೂರೈಸುವಷ್ಟರಲ್ಲಿ ಅಪ್ಪನು ವ್ಯಾಘ್ರನಿಂದ ಗಾಯಗೊಂಡ ಸುದ್ದಿ ಕೇಳಿಬಂದೆ. ಅವರು ಸತ್ತದ್ದರಿಂದ ನಾನು ನಿನ್ನನ್ನು ಬಿಟ್ಟು ಹೋಗಲಾರದೆ ಇಲ್ಲಿಯೆ ಉಳಿದೆ.’
ಈ ನಾಟಕದಲ್ಲಿ ಕುವೆಂಪು ಅವರು ದ್ರೋಣಾಚಾರ್ಯ ಮತ್ತು ಪುತ್ರ ಅಶ್ವತ್ಥಾಮರ ಸಂಭಾಷಣೆಯಲ್ಲಿ ನೀಡಿರುವ ‘ಕೂಳ್‌ಮಿಣಿ’ ಪದ ಇಡೀ ಮಾನವಕುಲದ ಅನ್ನ ಆಧಾರಿತ ಸಂಕಷ್ಟ ಬದುಕಿನ ಸೂಕ್ಷ÷್ಮ ವಿಶ್ಲೇಷಣೆಯಾಗಿದೆ. ಆಳುವವರ ಹಿಡಿತಕ್ಕೆ ಸಿಕ್ಕಿ ಗುಹ್ಯ ಸಂಕಟಕ್ಕೆ ಒಳಗಾದ ಗುರು ದ್ರೋಣಾಚಾರ್ಯರ ಆಂತರ್ಯದ ಒಳಬೇಗುದಿಯನ್ನು ಕವಿಯು ಕಲ್ಪಿಸಿ ಚಿತ್ರಿಸಿರುವ ರೀತಿಯು ಭಾರತೀಯ ಮಹಾಭಾರತ ಪಾತ್ರಗಳ ಮರುಸೃಷ್ಟಿಯಲ್ಲಿ ನವನವೀನವೂ ವಿಶಿಷ್ಟವೂ ಆಗಿದೆ.
ಅಪ್ಪ ಮಗನ ಸಂಭಾಷಣೆ ಹೀಗಿದೆ:
ಅಶ್ವತ್ಥಾಮ – (ಕುಪಿತನಾಗಿ)
ಆ ಅರಸು ಮಕ್ಕಳ್ ಕೂಳ್ಗೆ ಆಳಾಗಿ
ಬಾಳ್‌ಗೋಣನೊಡ್ಡುತಿರ್ಪಿರಿ ನರಕನಕ್ರದ ಬಾಯ್ಗೆ!
ದ್ರೋಣ – (ಗಂಭೀರ ವಾಣಿಯಿಂದ ಸಾವಧಾನವಾಗಿ)
ಬರಿಯ ಜೋಳದ ಪಾಳಿಯಲ್ತು, ವತ್ಸ.
ಕೂಳ್‌ಮಿಣಿಯ ಪಿಡಿದಿರ್ಪುದಾ ಬಿದಿಯ ಕಯ್!
ಬಾಲ್ಯದಿಂದ ಹಾಲಿಗಾಗಿ ಅನ್ನಕ್ಕಾಗಿ ಪರಿತಪಿಸಿದ ಅಶ್ವತ್ಥಾಮನು ತಂದೆಗೆ–ರಾಜರ ಮಕ್ಕಳ ಕೂಳಿಗೆ ಆಳಾಗಿ, ಈಗ ನರಕದ ಮೊಸಳೆಯ ಬಾಯಿಗೆ ನಿಮ್ಮ ಬಾಳಿನ ಗೋಣನ್ನು ಅರ್ಪಿಸುತ್ತಿರುವಿರಿ–ಎಂದು ವಾಸ್ತವ ಸತ್ಯವನ್ನು ತಿಳಿಸುತ್ತಾನೆ. ಆಗ ಅವರು ಮಗನ ನುಡಿಗೆ ಒಪ್ಪಿಗೆ ಸೂಚಿಸುವಂತೆ ಮಾತನಾಡುತ್ತಾರೆ. ಮಗನಿಗೆ ಬರಿಯ ಜೋಳದ ಪಾಳಿ(ಅನ್ನದ ಋಣ)ಯಲ್ಲ ಎಂದು ಹೇಳಿ, ಆ ವಿಧಿಯು ಕೂಳಿನ ಹಗ್ಗವನ್ನು ಹಿಡಿದು ಪಾಶವಾಗಿ ಕತ್ತು ಬಿಗಿದು ಸಾಯಿಸುತ್ತಿದೆ ಎಂಬ ತಮ್ಮ ಕ್ಷಣಕ್ಷಣದ ನರಳಾಟವನ್ನು ವ್ಯಕ್ತಪಡಿಸುತ್ತಾರೆ. ಆ ನುಡಿ ಕಾವ್ಯ ಸಹೃದಯನನ್ನು ಹಲವು ಭಾವದ ಚಿಂತನೆಗೆ ಒಳಗುಮಾಡಿ, ಅವನು ದ್ರೋಣಾಚಾರ್ಯರ ಹಿರಿದಾದ ವ್ಯಕ್ತಿತ್ವವನ್ನು ಅರಿಯುವಂತೆ ಮಾಡುತ್ತದೆ. ಕುವೆಂಪು ಅವರು ಸೃಷ್ಟಿಸಿ ಪ್ರಯೋಗಿಸಿರುವ ‘ಕೂಳ್‌ಮಿಣಿ’ ಪದ ದ್ರೋಣಾಚಾರ್ಯರ ಸಂಕೀರ್ಣ ಭಾವ ತುಮುಲದ ರೂಪಕ.
ಮಗನನ್ನು ಬೀಡಿಗೆ ತೆರಳಲು ಹೇಳಿ ದ್ರೋಣಾಚಾರ್ಯರು ಕಾಡಿನ ಮಧ್ಯದ ನಿರ್ಜನವಾದ ಒಂದು ಬಂಡೆಯ ತುದಿಯಲ್ಲಿ ಕುಳಿತುಕೊಳ್ಳುತ್ತಾರೆ. ಶಾಂತಿಸುಧೆಯನ್ನು ಸವಿಯುತ್ತ ಸ್ವವಿಮರ್ಶೆಗೆ ಒಳಗಾಗುತ್ತಾರೆ. ತಾನು ಬಂದಿರುವ ದುರುದ್ದೇಶಕಾರ್ಯಕ್ಕೆಲ್ಲ ಮೂಲ ಕಾರಣ ತನ್ನ ಅಹಂಕಾರ. ದ್ರುಪದನೊಂದಿಗಿನ ಹಗೆ ಸಾಧಿಸಲು ಅರ್ಜುನನನ್ನು ಸಾಧನವಾಗಿಸಿಕೊಂಡೆ. ಅವನನ್ನು ಗೆದ್ದು ನನ್ನ ಪಾದದ ಬಳಿ ಕೆಡವು ಎಂದು ಹೇಳಿದೆ. ಹಾಗೆ ಮಾಡಿ ನನ್ನೆದೆಯ ಬಿಂಕದ ದೆವ್ವಕ್ಕೆ ಎಡೆಕೊಟ್ಟು ಅರ್ಜುನನ ಹಂಗಿಗೆ ಒಳಗಾದೆ. ಈ ಮೂರು ಲೋಕಗಳಲ್ಲಿ ನಿನ್ನನ್ನು ಮೀರಿಸುವವರಿಲ್ಲ ಎನ್ನುವಂತೆ ನಿನಗೆ ಬಿಲ್ಲು ವಿದ್ಯೆ ಕಲಿಸುವೆ ಎಂದು ವಚನ ನೀಡಿದೆ. ಅದನ್ನೆ ಪಟ್ಟುಹಿಡಿದು-ಒಪ್ಪಿಗೆ ಇಲ್ಲದ ನನ್ನನ್ನು ಈ ಹೀನ ಕೆಲಸಕ್ಕೆ ದೂಡಿದ್ದಾನೆ. ಅವನಿಗೆ ಕೀರ್ತಿಶನಿ ಹಿಡಿದಿದೆ. ಅವನ ಮತ್ಸರದ ಅಗ್ನಿಗೆ ಏಕಲವ್ಯನನ್ನು ಆಹುತಿ ನೀಡಬೇಕಾಗಿದೆ – ಎಂದು ಜುಗುಪ್ಸೆಗೊಳಗಾಗಿ ಚಿಂತಾಮಗ್ನರಾಗುತ್ತಾರೆ.
ಆತ್ಮಶೋಧಕ್ಕೊಳಗಾದ ಗುರು: ದ್ರೋಣಾಚಾರ್ಯರಿಗೆ ತಾನು ಏಕಲವ್ಯನಿಂದ ಗುರು ಕಾಣಿಕೆಯಾಗಿ ಪಡೆಯಬೇಕೆಂದಿರುವ ಬಲಗೈ ಹೆಬ್ಬೆರಳ ಬಗ್ಗೆ ತುಂಬಾ ವ್ಯಥೆಯಾಗಿದೆ. ಅದು ದುರಭಿಸಂಧಿ (ದುರುದ್ದೇಶ) ಎಂಬ ಅರಿವಿದೆ. ಅದನ್ನು ನಾಟಕಕಾರರು ಗುರುವಿನ ಮನದ ಶೋಧಿತ ಭಾವಾಭಿವ್ಯಕ್ತಿಯಾಗಿ – ತಾನು ಕತ್ತಲಾಶ್ರಯಕ್ಕೆ ಒಳಗಾಗಿರುವುದನ್ನು, ಶಿಷ್ಯನಾದ ಏಕಲವ್ಯ ಬೆಳಕಿನ ಹೊಳಪಾಗಿ ಶೋಭಿಸುತ್ತಿರುವುದನ್ನು – ಗೂಬೆಯ ವರ್ತನೆಯ ರೂಪಕದಲ್ಲಿ ಚಿತ್ರಿಸಿರುವ ರೀತಿ ಅನನ್ಯವಾಗಿದೆ.
ಏಕಲವ್ಯನು ಪರ್ವತಾರಣ್ಯ ಚೇತನವೇ ಮೈಗೊಂಡಂತೆ ಬರುತ್ತಿರುವುದನ್ನು ಕಂಡು ದ್ರೋಣಾಚಾರ್ಯರು ಹೀಗೆ ತಮ್ಮನ್ನು ತಾವು ವಿಮರ್ಶಿಸಿಕೊಳ್ಳುತ್ತಾರೆ:
‘ನನ್ನೆರ್ದೆಯ ಕಳ್ತಲೆಯ ಗವಿಯ
ದುರಭಿಸಂಧಿಯ ಪಾಪ ಘೂಕಾಕ್ಷಿ ತಾನ್
ಅವನೆರ್ದೆಯ ಸರಳಗೌರವ ದೀಪ್ತಿಗಳ್ಕಿ
ಕಣ್ ಮುಚ್ಚಿದುದು, ನಾಣ್ಚಿ ಕುಗ್ಗಿದೋಲ್.’
ಬೆರಳ್‌ಗೆ ಕೊರಳ್
ಏಕಲವ್ಯನು ಬಿಲ್ಲು ಬಾಣಗಳೊಂದಿಗೆ ಬಂದು ಗುರುವನ್ನುದ್ದೇಶಿಸಿ ‘ನೀನು ಆಜ್ಞಾಪಿಸಿದಂತೆ ಬಿಲ್ಲಿನ ಜಾಣ್ಮೆ ತೋರಿಸುವೆ’ ಎಂದು ಹೇಳುವನು. ಆಗ ಆ ಶ್ರೇಷ್ಠ ಗುರು-ತನ್ನದು ಏನೂ ಇಲ್ಲ ಎಂಬ ಭಾವದಲ್ಲಿ ನಮ್ಮ ಭಕ್ತಿಗೆ ಮೆಚ್ಚುವ ಸಚ್ಚಿದಾನಂದನೇ ಪರಮಗುರು – ಎಂದು ಹೇಳುವುದು ಆದರ್ಶ ಗುರುವಿನ ನಡೆಯಾಗಿ ಗುರುತನವನ್ನು ಪ್ರಕಾಶಿಸಿದೆ.
‘ನಮ್ಮ ಭಕ್ತಿಗೆ ಮೆಚ್ಚುವಾ ಸಚ್ಚಿದಾನಂದಮೆ
ಜಗದ್ಗುರು, ಏಕಲವ್ಯ ಬೇರೆಗುರುವುಂಟೇ?
ನರಗುರು ನಿಮಿತ್ತ ಮಾತ್ರನ್’
ಏಕಲವ್ಯನ ಬಿಲ್ಲು ವಿದ್ಯಾ ಪರಿಣತಿಯ ಪ್ರಯೋಗದಲ್ಲಿ ದೋಷ ಹುಡುಕಿ ಶಿಕ್ಷಿಸುವ ಉದ್ದೇಶದಿಂದ ದ್ರೋಣಾಚಾರ್ಯರು – ಮುಗಿಲಾಚೆ ಸಂತಸದಲ್ಲಿ ವಿಹರಿಸುತ್ತಿರುವ ಪೊಂಗುಳಿಗೆ ಶಬ್ದವೇದಿ ವಿದ್ಯೆಯನ್ನನುಸರಿಸಿ ಬಾಣ ಪ್ರಯೋಗಿಸಲು ಹೇಳುವರು. ಆಗ ಏಕಲವ್ಯನು ‘ಗುರುವೇ, ನೀನು ಈ ವಿದ್ಯೆ ನೀಡಿರುವುದು ಅಪರಾಧವಿಲ್ಲದ ಸಾಧುವನ್ನು ಕೊಲ್ಲಲು ಅಲ್ಲ. ಮಂತ್ರಾಧಿ ದೇವತೆಗಳು ಮುನಿಯುತ್ತಾರೆ. ಜೊತೆಗೆ ದಿವ್ಯ ವಿದ್ಯಾಬಲದಿಂದ ಪಾಪಕಾರ್ಯವನ್ನು ಮಾಡಲು ಧರ್ಮ ಮತ್ತು ಪ್ರಕೃತಿ ಸಹಜ ನ್ಯಾಯಮಾರ್ಗದಲ್ಲಿ ನಡೆಯದಿರಲು ಉಗ್ರರಾಗುತ್ತಾರೆ. ವಿದ್ಯಾಶಕ್ತಿ ನನ್ನಿಂದ ದೂರವಾಗುತ್ತದೆ. ಆತ್ಮಹಾನಿಯಿಂದ ಸರ್ವನಾಶವಾಗುತ್ತದೆ’ ಎಂದು ಹೇಳುವನು.
ಆಗ ಗುರುಗಳು ‘ನೀನು ಬದುಕಿ ನನ್ನನ್ನು ಬದುಕಿಸಿದೆ! ಈ ಪರೀಕ್ಷೆ ನಿನಗಷ್ಟೆ ಅಲ್ಲ, ನನಗೂ ಸಹ! ನೀನು ಎಲ್ಲಿಯಾದರೂ ಎಚ್ಚರತಪ್ಪಿ, ಧರ್ಮವನ್ನು ತಪ್ಪಿ ನಡೆದಿದ್ದರೆ ನನ್ನಾಶೆ ಫಲಿಸುತ್ತಿತ್ತು. ಅಂತಹ ವಂಚನೆಯಿಂದ ಹೊರಗುಳಿದು ನೀನು ನನ್ನನ್ನೂ ವಂಚಕತ್ವದಿಂದ ಪಾರುಗಾಣಿಸಿ ಪೊರೆದೆ’ ಎಂದು ನಿಟ್ಟುಸಿರಿನೊಡನೆ ಹೇಳುವರು.
ಕೊನೆಗೆ ವನವಿದ್ಯೆಗೆ ಉಸಿರಾದ ಏಕಲವ್ಯನ ಬಲಗೈ ಹೆಬ್ಬೆರಳನ್ನು ಗುರುದಕ್ಷಿಣೆಯಾಗಿ ಪಡೆಯುವರು. ಏಕಲವ್ಯನು ರಕ್ತ ಸೋರುವ ಗಾಯಕ್ಕೆ ಮದ್ದಿಕ್ಕಿ ಬರಲು ಹೋಗುವನು.
ದ್ರೋಣಾಚಾರ್ಯರು ಎದ್ದು ಬಂದು ಮಡುನಿಂತ ನೆತ್ತರನ್ನು ಅದರ ನಡುವಿದ್ದ ಬೆರಳ ತುಂಡನ್ನು ನೋಡುವರು. ಆ ಕೆನ್ನೀರ ಕನ್ನಡಿಯಲ್ಲಿ ತನ್ನ ಬಿಂಬವನ್ನು ಕಾಣುವರು. ಕಷ್ಟದಿಂದ ವಿರಳಾಕ್ಷರ ಹೊಮ್ಮಿಸುತ್ತ ನುಡಿಯುವರು:
‘ಬೆರಳ್‌ಗೆ ಕೊರಳ್
ವತ್ಸಾ, ನಿನ್ನ ಬೆರಳ್‌ಗೆ ನನ್ನ ಕೊರಳ್!’