ಕರ್ನಾಟಕದ ಅವಸ್ಥೆ

ಸಂಪಾದಕೀಯ
Advertisement

ಹೃದಯ ಶ್ರೀಮಂತಿಕೆ ಜೊತೆಗೆ ಸಂವೇದನಾಶೀಲತೆಗೆ ಹೆಸರಾಗಿರುವ ಕರ್ನಾಟಕ ನಿಗೂಢ ಕಾರಣಗಳಿಗಾಗಿ ರೂಪಾಂತರಗೊಳ್ಳುತ್ತಿರುವ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಸಮಾನಾಂತರವಾದ ತಿರುವು ಮುರುವು ದಾರಿಯಲ್ಲಿ ಸಾಗುತ್ತಿರುವುದು ನಿಜಕ್ಕೂ ನೋವಿನ ಕಥಾನಕ. ಕವಿರಾಜಮಾರ್ಗನ ದೃಷ್ಟಿಯಲ್ಲಿ ಕನ್ನಡ ಹಾಗೂ ಕನ್ನಡಿಗರ ಆಸ್ಮಿತೆ, ಕೂಡಿಬಾಳುವ ಮನೋಧರ್ಮದ ಜಾಗದಲ್ಲಿ ಪ್ರತಿಯೊಂದು ಬಾಬಿಗೂ ಕಚ್ಚಾಟಕ್ಕೆ ಕಾಲ್ಕೆರೆದು ಮುಂದಾಗುತ್ತಿರುವ ಬೆಳವಣಿಗೆ ವಿಕಸಿತ ಕರ್ನಾಟಕದ ಇನ್ನೊಂದು ರೂಪವಾಗಿದ್ದರೆ ತಾಯ್ತನದ ಕನ್ನಡಿಗರು ಮರುಗುವುದು ಖಂಡಿತ. ರಾಜಕೀಯ ವಿಚಾರವನ್ನು ಪ್ರತ್ಯೇಕವಾಗಿಟ್ಟು ನೋಡಿದರೂ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಜರುಗುತ್ತಿರುವ ಬೆಳವಣಿಗೆಗಳು ಸಮಾಜವನ್ನು ಉದ್ದುದ್ದವಾಗಿ ಒಡೆಯುತ್ತಿರುವ ಪರಿಸ್ಥಿತಿಯ ಹಿಂದಿರುವುದು ವೈಚಾರಿಕತೆಯ ಹೆಸರಿನಲ್ಲಿ ಬಲವಂತ ಸ್ವರೂಪದ ಅಜ್ಞಾನದ ಆಚಾರವಂತಿಕೆ. ಅಪ್ಪಟ ವೈಚಾರಿಕತೆಯ ಬಗ್ಗೆ ಯಾರ ತಕರಾರು ಇರಲಾರದು. ಕಲ್ಯಾಣದ ಗುರಿ ಮುಟ್ಟಲು ನಾನಾ ಮಾರ್ಗಗಳು ಇರುವಂತೆ ವೈಚಾರಿಕತೆಯೂ ಕೂಡಾ ಸಮಾಜದ ವಿಕಸನಕ್ಕೆ ನಾನಾ ರೀತಿಯ ಆಚಾರ ವಿಚಾರಗಳನ್ನು ಬೆರೆಸಿಕೊಂಡು ಕಾರ್ಯಸೂಚಿ ರೂಪಿಸಿಕೊಳ್ಳುವುದು ಸಹಜವೇ. ಆದರೆ, ಖಚಿತ ವೈಚಾರಿಕತೆಯ ಅರಿವೇ ಇಲ್ಲದೇ, ಬೇರೆಯವರ ಬಗ್ಗೆ ಕಕ್ಕುಲತೆಯೇ ಇಲ್ಲದವರು ಸ್ವಯಂಘೋಷಿತ ಮುಖಂಡರಾಗಿ ಎಲ್ಲಾ ಕ್ಷೇತ್ರಗಳಲ್ಲೂ ಅಟ್ಟಹಾಸ ಮಾಡುತ್ತಿರುವ ಬೆಳವಣಿಗೆಯ ಪರಿಣಾಮವೇ ಕರ್ನಾಟಕಕ್ಕೆ ಈಗ ಬಂದಿರುವ ಅವಸ್ಥೆ.
ಕಾಮ ಮನುಷ್ಯನ ಸ್ವಾಭಾವಿಕ ಲಕ್ಷಣ. ಕಾಮವೆಂಬುದು ಕೇವಲ ಲೈಂಗಿಕತೆಗೆ ಮಾತ್ರ ಸೀಮಿತವಾಗುವ ಶಬ್ದವಲ್ಲ. ಅರಿಯದ ಸಂಗತಿಯನ್ನು ಕುತೂಹಲದ ಕಣ್ಣುಗಳಲ್ಲಿ ತಿಳಿಯಲು ಮುಂದಾಗುವ ಕಾಮದ ಒಂದು ಮುಖ ಲೈಂಗಿಕತೆ ಅಷ್ಟೆ. ಜ್ಞಾನವೆಂಬುದು ಸಂಪೂರ್ಣ ತೃಪ್ತಿ ನೀಡುವುದು ಅದರಿಂದ ಪೂರ್ಣ ಅರಿವು ಪಡೆದಾಗ ಮಾತ್ರ. ಇದರಲ್ಲಿ ಅಲ್ಪ ತೃಪ್ತರಿರುವಂತೆ ಕಾಮದ ವಿಚಾರದಲ್ಲೂ ಅಲ್ಪ ತೃಪ್ತರು ಇಣುಕು ಕಾಮಿಗಳ ರೂಪದಲ್ಲಿ ಅಟ್ಟಹಾಸ ಮೆರೆಯುತ್ತಿರುವ ಪ್ರಕರಣಗಳ ಪೈಕಿ ಬೆಳಕಿಗೆ ಬರುತ್ತಿರುವುದು ಕೇವಲ ಬೆರಳೆಣಿಕೆಯಷ್ಟು ಮಾತ್ರ. ಎಲ್ಲಾ ಕ್ಷೇತ್ರಗಳಲ್ಲಿ ಇಂತಹ ಘಟನಾವಳಿಗಳು ಜರುಗುತ್ತಿದ್ದರೂ ನೋಡಿದರೂ ನೋಡದಂತೆ ತೆಪ್ಪಗಿರುವ ನಾಜೂಕಯ್ಯಗಳ ವರ್ತನೆಯ ಪರಿಣಾಮವೆಂದರೆ ಇಣುಕು ಕಾಮಿಗಳು ರಕ್ತಬೀಜಾಸುರನ ವಂಶದಂತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ಗಾಬರಿಯ ಸಂಗತಿ. ಈ ಘಟನಾವಳಿಗೆ ರಾಜಕಾರಣದ ಲೇಪ ಹಚ್ಚಿದರೆ ಸತ್ಯಕ್ಕೆ ಸಾವು ಖಂಡಿತ. ಹಾಗೆಯೇ ಅರೆ ಸುಳ್ಳುಗಳು ವಿಜೃಂಭಿಸಿ ಏನೇನೂ ಅರಿಯದವರು ಮುಖಂಡರ ರೂಪ ಪಡೆಯುವುದು ಕೂಡಾ ಅಷ್ಟೇ ಖಂಡಿತ.
ಲೈಂಗಿಕ ಹಗರಣಗಳಲ್ಲಿ ಮಠಾಧೀಶರೂ ಪಾತ್ರಧಾರರಾಗಿರುವುದು ದಿಗ್ಭ್ರಮೆಯ ಸಂಗತಿ. ನ್ಯಾಯಾಲಗಳಲ್ಲಿಯೂ ಕೂಡಾ ಮಠಾಧೀಶರ ಲೈಂಗಿಕ ಪುರಾಣ ಪ್ರಕರಣಗಳ ಮೂಲಕ ಚರ್ಚೆಗೆ ಬಂದಿರುವುದರಿಂದ ಸಾರ್ವಜನಿಕ ನ್ಯಾಯಾಲಯದಲ್ಲಿ ಇಂತಹ ಅಕ್ರಮ ಕೃತ್ಯಗಳು ಸಂವಾದದ ರೀತಿಯಲ್ಲಿ ಈಗಲೂ ಪ್ರಸ್ತಾಪವಾಗಿರುವ ಸಂದರ್ಭದಲ್ಲಿಯೇ ಸುಪ್ರೀಂಕೋರ್ಟಿನ ನಿರ್ದೇಶನದ ಮೇರೆಗೆ ಮಠಾಧೀಶರೊಬ್ಬರು ನ್ಯಾಯಾಲಯಕ್ಕೆ ಶರಣಾಗಿರುವುದು ಕರ್ನಾಟಕ ಎದುರು ದಾರಿಯಲ್ಲಿ ಸಾಗುತ್ತಿದೆ ಎಂಬುದರ ದಿಕ್ಸೂಚಿ. ಮಠಾಧೀಶರ ಜೈಲು ವಾಸದ ಬೆಳವಣಿಗೆಯನ್ನು ಸಾರ್ವಜನಿಕರು ಜೀರ್ಣಿಸಿಕೊಳ್ಳುವ ಸಂದರ್ಭದಲ್ಲಿಯೇ ಹಾಸನದ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ದಾಖಲಾಗಿರುವ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗಾಗಿ ವಿಶೇಷ ತನಿಖಾ ಪಡೆಯನ್ನು ರಚಿಸಿರುವುದು ಸರ್ಕಾರದ ಸಾಮಯಿಕ ನಿರ್ಧಾರ. ಏಕೆಂದರೆ, ಸಾರ್ವಜನಿಕವಾಗಿ ಮುಗಿಲು ಮುಟ್ಟುವ ರೀತಿಯಲ್ಲಿ ಈ ಪ್ರಕರಣದ ಬಗ್ಗೆ ಆಕ್ರೋಶಗಳು ಹಾಗೂ ಹಕ್ಕೊತ್ತಾಯಗಳು ಭುಗಿಲೆದ್ದಾಗ ಜನತಂತ್ರ ಪದ್ಧತಿಗೆ ಗೌರವ ಕೊಡುವ ರೀತಿಯಲ್ಲಿ ಸರ್ಕಾರ ಎಸ್‌ಐಟಿ ರಚಿಸಿ ತನಿಖೆ ಚುರುಕುಗೊಳಿಸಿರುವುದು ಒಳ್ಳೆ ಬೆಳವಣಿಗೆ. ಈ ತನಿಖೆ ಶೀಘ್ರವಾಗಿ ಮುಗಿದು ಸತ್ಯಾಸತ್ಯತೆಗಳು ಹೊರಬೀಳುವವರೆಗೆ ಅತಿರಂಜಿತ ಅಭಿಪ್ರಾಯಗಳ ಮಂಡನೆಗೆ ಸಾರ್ವಜನಿಕರು ಕೊಂಚ ನಿಗ್ರಹ ಪರಿಪಾಲಿಸುವುದು ಸಾಧುವಾದ ಮಾರ್ಗ. ಏಕೆಂದರೆ, ತನಿಖಾ ಸದಸ್ಯರು ಕೂಡಾ ಮನುಷ್ಯ ಮಾತ್ರದವರು. ಈ ಅಭಿಪ್ರಾಯಗಳು ತನಿಖೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಇನ್ನು ರಾಜಕೀಯವಾಗಿ ಆರೋಪಿ ಪ್ರಜ್ವಲ್ ವಿರುದ್ಧ ಜೆಡಿಎಸ್ ಉಚ್ಚಾಟನೆಯ ಕ್ರಮ ಜರುಗಿಸಿರುವುದು ಒಂದು ರೀತಿಯಲ್ಲಿ ಯೋಗ್ಯ ಮಾರ್ಗವಾದರೂ ಇದು ಪಕ್ಷಕ್ಕೆ ಸೀಮಿತವಾದ ವಿಷಯವಾದದ್ದರಿಂದ ಹೆಚ್ಚಿನ ವಿಶ್ಲೇಷಣೆ ಈ ಸಂದರ್ಭದಲ್ಲಿ ಅನಗತ್ಯ ಎನ್ನಬಹುದೇನೋ.
ಹುಬ್ಬಳ್ಳಿಯ ನೇಹಾ ಹಿರೇಮಠ್ ಕೊಲೆ ಪ್ರಕರಣ ಇತ್ತೀಚೆಗೆ ಕರ್ನಾಟಕ ಕಂಡಿರುವ ಮತ್ತೊಂದು ಘೋರ ಪ್ರಕರಣ. ತನಿಖೆಯು ಪ್ರಗತಿಯ ದಾರಿಯಲ್ಲಿರುವುದರಿಂದ ಈ ಬಗ್ಗೆ ಹೆಚ್ಚಿನ ವ್ಯಾಖ್ಯಾನ ಸೂಕ್ತವಾಗಲಾರದು. ಸಾಂಸ್ಕೃತಿಕ ಕ್ಷೇತ್ರದಲ್ಲಂತೂ ಮಹಾಪರಾಕ್ರಮಿಗಳಂತೆ ವೈಚಾರಿಕತೆಯ ಕತ್ತಿ ಹಿಡಿದು ಎರಡು ಬಣಗಳವರು ಅಕ್ಷರ ಹಾಗೂ ಮಾತಿನ ಹೋರಾಟದಲ್ಲಿ ಮುಳುಗಿರುವುದು ಸಮಾಜ ದಿಕ್ಕೆಟ್ಟ ಸ್ಥಿತಿಗೆ ತಿರುಗಲು ಕಾರಣ ಎಂಬುದನ್ನು ಮರೆಯುವಂತಿಲ್ಲ. ನಿಜಕ್ಕೂ ಇದು ಒಂದು ದುರವಸ್ಥೆಯ ಸ್ಥಿತಿ. ಸಮಾಜಶಾಸ್ತ್ರಜ್ಞರು ಅಭಿಪ್ರಾಯಪಡುವಂತೆ ಸಮಾಜ ಸುಧಾರಣೆಯ ಮಾರ್ಗಗಳು ಅವ್ಯವಸ್ಥೆಯ ಮೂಲಕ ಕುವ್ಯವಸ್ಥೆ ತಲೆದೋರಿದ ಮೇಲೆ ಬಹುಶಃ ವ್ಯವಸ್ಥೆಯ ರೂಪುರೇಷೆಗಳಲ್ಲಿ ಅನುಭವ ಹಾಗೂ ಜಾಣ್ಮೆಯ ಆಧಾರದ ಮೇರೆಗೆ ರೂಪಿಸಬಹುದು. ಈಗ ಕರ್ನಾಟಕ ಸಾಮಾಜಿಕವಾಗಿ ಅವ್ಯವಸ್ಥೆಯ ಸ್ಥಿತಿಯಲ್ಲಿಯಲ್ಲಿದೆಯೋ ಅಥವಾ ಕುವ್ಯವಸ್ಥೆಯ ಸ್ಥಿತಿಗೆ ಇಳಿಯುತ್ತಿದೆಯೋ ಗೊತ್ತಿಲ್ಲ. ಸಮಾಜದಲ್ಲಿ ಇಲ್ಲದ್ದನ್ನು ರಾಜಕೀಯ ಕ್ಷೇತ್ರದಲ್ಲಿ ಹುಡುಕುವುದು ಮೂರ್ಖತನದ ಪರಮಾವಧಿ. ಏಕೆಂದರೆ, ರಾಜಕಾರಣವೂ ಕೂಡಾ ಸಮಾಜದ ಸೃಷ್ಟಿ. ಹೀಗಾಗಿ ಕರ್ನಾಟಕದ ಸರ್ವಾಂಗೀಣ ವ್ಯವಸ್ಥಿತ ಕಲ್ಯಾಣಕ್ಕೆ ಈಗ ಆಗಬೇಕಾದದ್ದು ಎಲ್ಲರನ್ನೂ ಒಳಗೊಳ್ಳುವ, ಒಳಗೊಂಡು ಸಂಭಾಳಿಸಿಕೊಳ್ಳುವ, ಸಂಭಾಳಿಸಿಕೊಂಡು ಮುನ್ನಡೆಯುವ ಮನೋಧರ್ಮ. ಲೋಕಸಭಾ ಚುನಾವಣೆಯ ಉರಿಬಿಸಿಲಿನ ನಡುವೆ ಇಂತಹ ಅವಸ್ಥೆ ಕಣ್ಣು ಹಾಗೂ ಒಳಗಣ್ಣಿಗೆ ರಾಚುತ್ತಿದ್ದರೂ ತೆಪ್ಪಗೆ ಏನೂ ಆಗಿಯೇ ಇಲ್ಲ ಎಂಬಂತಿರುವುದು ನಾಡಕಟ್ಟುವ ಮಾರ್ಗವಾಗಲಾರದು. ಬಹುಶಃ ಅದು ನಾಡಿನ ನಡ ಮುರಿಯುವ ಕೃತ್ಯ ಎಂದೆನಿಸಿಕೊಳ್ಳುವುದು ಸಹಜ.