ಕರಾವಳಿಯ ರಾಜ ಬೀದಿಯಲ್ಲಿ ಮೋದಿ ದರ್ಬಾರ್

Advertisement

ಮಂಗಳೂರು: ಲೋಕಸಭಾ ಚುನಾವಣೆಗೆ ಇನ್ನು ಕೆಲವೇ ದಿನಗಳು ಉಳಿದಿರುವಾಗ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ಹಾಗೂ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಪರ ಪ್ರಧಾನಿ ನರೇಂದ್ರ ಮೋದಿಯವರು ಭಾನುವಾರ ಸಂಜೆ ಮಂಗಳೂರಿನ ರಾಜ ಬೀದಿಯಲ್ಲಿ ರೋಡ್ ಶೋ ನಡೆಸುವ ಮೂಲಕ ಮತಯಾಚಿಸಿದರು.
ಸಂಜೆ ೭.೨೫ಕ್ಕೆ ನಗರಕ್ಕೆ ಆಗಮಿಸಿದ ಮೋದಿಯವರು ನಗರದ ನಾರಾಯಣ ಗುರು ವೃತ್ತದಲ್ಲಿರುವ ಸಾಮಾಜಿಕ ಕ್ರಾಂತಿಯ ಹರಿಕಾರ ಬ್ರಹ್ಮಶ್ರೀ ನಾರಾಯಣಗುರು ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ರೋಡ್ ಶೋ ಆರಂಭಿಸಿದರು. ಹೂವುಗಳಿಂದ ಅಲಂಕರಿಸಿದ್ದ ತೆರೆದ ವಾಹನದಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಕಿಕ್ಕಿರಿದು ಸೇರಿದ್ದ ಜನಸ್ತೋಮದತ್ತ, ಅಭಿಮಾನಿಗಳತ್ತ ಕೈಬೀಸುತ್ತಾ ನಗೆ ಬೀರಿ ಸಾಗಿದ ಪ್ತಧಾನಿ ಕಡಲ ತಡಿಯ ಬಿಜೆಪಿ ಕಾರ್ಯಕರ್ತರಲ್ಲಿ ಹುರುಪು ತುಂಬಿದರು.
ಮೋದಿಯನ್ನು ಕಣ್ತುಂಬಿಕೊಳ್ಳಲು ಸಂಜೆ ೬ ಗಂಟೆಯ ವೇಳೆಗೆ ಜನ ಸೇರಿದ್ದರು, ಮೋದಿ ಆಗಮನವಾಗುತ್ತಿದ್ದಂತೆಯೇ ’ಜೈ ಜೈ ಮೋದಿ… ಜೈಶ್ರೀರಾಂ, ಆಬ್ ಕೀ ಬಾರ್ ಚಾರ್ ಸೌ ಪಾರ್’ ಘೋಷಣೆ ಮುಗಿಲು ಮುಟ್ಡಿತ್ತು. ಕೇಸರಿ ಪೇಟಾ, ಕೇಸರಿ ಶಾಲು, ಕೇಸರಿ ಟೋಪಿ ಧರಿಸಿದ್ದ ಅಭಿಮಾನಿಗಳಿಗೆ ನೆಚ್ಚಿನ ನಾಯಕನಿಗೆ ಜೈಕಾರ ಹಾಕಿದಷ್ಟೂ ಮನ ತಣಿಯಲಿಲ್ಲ. ಮತ್ತೆ ಮತ್ತೆ ಜೈಕಾರ ಕೂಗಿದರು. ರಸ್ತೆ ಪಕ್ಕದಲ್ಲಿ ತಾಸುಗಟ್ಟಲೆ ಕಾದು ಕುಳಿತಿದ್ದ ಅಭಿಮಾನಿಗಳು ನೆಚ್ಚಿನನಾಯಕನ ಕಂಡು ಪುಳಕಿತರಾದರು.
ಕೈಯಲ್ಲಿ ಹೊಳೆಯುವ ಕಮಲದ ಚಿಹ್ನೆ ಹಿಡಿದುಕೊಂಡಿದ್ದ ಮೋದಿ ತೆರೆದ ವಾಹನದಲ್ಲಿ ಸಾಗುತ್ತಿದ್ದಂತೆಯೇ ಬಿಜೆಪಿ ಕಾರ್ಯಕರ್ತರು ಮತ್ತು ಸಾರ್ವಜನಿಕರು ಪ್ರಧಾನಿ ಮೋದಿ ಅವರ ಮೇಲೆ ನಿರಂತರ ಪುಷ್ಪ ವೃಷ್ಟಿ ಗೈದರು. ಮೋದಿ ಅವರು ಕೆಲವು ಬಾರಿ ಜನರತ್ತ ಹೂವಿನ ಎಸಳುಗಳನ್ನು ಎಸೆದು ಸಂಭ್ರಮ ಮೂಡಿಸಿದರು.
ಹೂ ತಡೆದ ಕ್ಯಾಪ್ಟನ್..
ಸೇನೆಯಲ್ಲಿ ಕರ್ತವ್ಯ ಸಲ್ಲಿಸಿ ನಿವೃತ್ತಿ ಪಡೆದಿದ್ದ ಕ್ಯಾ. ಬ್ರಿಜೇಶ್ ಚೌಟ ಪ್ರಧಾನಿಯತ್ತ ಬರುತ್ತಿದ್ದ ಭಾರಿ ಪ್ರಮಾಣದ ಹೂವುಗಳ ರಾಶಿಯನ್ನು ತಡೆದರು.
ಮೋದಿಯವರಿಗೆ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲು, ಅಭ್ಯರ್ಥಿಗಳಾದ ಕ್ಯಾ. ಬ್ರಿಜೇಶ್ ಚೌಟ, ಕೋಟ ಶ್ರೀನಿವಾಸ ಪೂಜಾರಿ ಮಾಲಾರ್ಪಣೆ ಗೈದು ಸ್ವಾಗತಿಸಿದರು. ಉಭಯ ಜಿಲ್ಲೆಗಳ ಶಾಸಕರುಗಳಿದ್ದರು.
೭.೪೦ಕ್ಕೆ ಆರಂಭವಾದ ರೋಡ್ ಶೋ ಲಾಲ್‌ಭಾಗ್, ಬಳ್ಳಾಲ್‌ಭಾಗ್, ಮಹಾತ್ಮಗಾಂಧಿ ರಸ್ತೆ, ಪಿವಿಎಸ್, ಮಂಜೇಶ್ವರ ಗೋವಿಂದ ಪೈ ವೃತ್ತದ ತನಕ ಸುಮಾರು ೨ ಕಿ. ಮೀ. ಸಾಗಿ ೮.೪೩ಕ್ಕೆ ಸಮಾರೋಪಗೊಂಡಿತು.
ಬಳಿಕ ಮೋದಿಯವರು ಗೋವಿಂದ ಪೈ ವೃತ್ತದಿಂದ ಕಾರಿನ ಹೊರಗೆ ನಿಂತು ಜನರತ್ತ ಕೈ ಬೀಸಿ ಎಸ್‌ಸಿಡಿಸಿಸಿ ಬ್ಯಾಂಕ್ ತನಕ ಸಾಗಿದರು. ನಂತರ ಪ್ರಧಾನಿಯವರ ವಾಹನ ಬಿಗಿ ಭದ್ರತೆಯಲ್ಲಿ ಮುಂದೆ ಸಾಗಿತು. ಇಲ್ಲಿಂದ ಪ್ರಧಾನಿಯವರು ಕೇರಳದ ಕೊಚ್ಚಿಗೆ ತೆರಳಿದರು.