ಕನ್ನಡಿಗರ ವಿರೋಧಿ ಭಾವನೆ ಮೋದಿ ಸರ್ಕಾರದ ಡಿಎನ್‌ಎ ದಲ್ಲಿದೆ

Advertisement

ದಾವಣಗೆರೆ: ಕರ್ನಾಟಕದ ವಿರೋಧಿ ಭಾವನೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರದ ಡಿ.ಎನ್.ಎ.ದಲ್ಲೇ ಇದೆ. ರಾಜ್ಯದಲ್ಲಿ ಆವರಿಸಿರುವ ಬರಗಾಲದ ಪರಿಹಾರ ಕೇಳಿದರೆ ಇವರು ಕೊಟ್ಟಿದ್ದು ಚೊಂಬು ಮಾತ್ರ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಜನತೆಯಿಂದ ಜಿಎಸ್ ಟಿ ಪಟೆಯುವ ಕೇಂದ್ರ ಸರ್ಕಾರ ಲರ್ನಾಟಕದ ಜನರ ಕಾಳಜಿಯನ್ನೇ ಮರೆತಿದೆ. ಬರ ಪರಿಹಾರ ಬಿಡುಗಡೆ ಮಾಡದ್ದಕ್ಕಾಗಿ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ ಜನತೆ ಬಿಜೆಪಿ – ಜೆಡಿಎಸ್‌ಗಳಿಗೆ ತಕ್ಕ ಶಾಸ್ತಿ ಮಾಡಲಿದ್ದಾರೆ ಎಂದು ಹೇಳಿದ್ದಾರೆ.

ರಾಜ್ಯ ಸರ್ಕಾರ ತೀವ್ರ ಬರ ಪರಿಸ್ಥಿತಿ ಎದುರಿಸುತ್ತಿದೆ.ಮುಖ್ಯಮಂತ್ರಿ ಹಾಗೂ ಸಚಿವರು ಹಲವು ಬಾರಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡರೂ, ಕೊನೆಗೆ ಪ್ರತಿಭಟನೆ ನಡೆಸಿದರೂ ಪರಿಹಾರ ಬಿಡುಗಡೆ ಮಾಡಲಿಲ್ಲ. ನಂತರ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿ, ನ್ಯಾಯಾಲಯ ತರಾಟೆಗೆ ತೆಗೆದುಕೊಂಡ ನಂತರ ಈಗ 3,545 ಕೋಟಿ ರೂ. ಮಾತ್ರ ಬಿಡುಗಡೆ ಮಾಡಿದೆ ಎಂದು ಹೇಳಿದರು.

ರಾಜ್ಯಕ್ಕೆ ಬರ ಆವರಿಸಿದರೂ ಕೇಂದ್ರ ಸರ್ಕಾರ ಎನ್.ಡಿ.ಆರ್.ಎಫ್. ಮೂಲಕ 18,174 ಕೋಟಿ ರೂ. ಪರಿಹಾರ ಬಿಡುಗಡೆ ಮಾಡದೇ ದ್ವೇಷದ ರಾಜಕೀಯ ಮಾಡುತ್ತಿದೆ. ರಾಜ್ಯಕ್ಕೆ ಇನ್ನೂ 14,720 ಕೋಟಿ ರೂ.ಗಳನ್ನು ಬಿಡುಗಡೆ ಮಾಡಬೇಕಿದೆ. ನಾವೇನು ಭಿಕ್ಷೆ ಬೇಡುತ್ತಿಲ್ಲ. ಈ ಪರಿಹಾರ ರಾಜ್ಯದ ಜನತೆ ಹಾಗೂ ರೈತರ ಹಕ್ಕು. ಕರ್ನಾಟಕದ ಜನತೆ ಹಾಗೂ ರೈತರು ತೆರಿಗೆ ಮೂಲಕ ಎನ್.ಡಿ.ಆರ್.ಎಫ್.ಗೆ ಹಣ ನೀಡಿರುತ್ತಾರೆ. ರಾಜ್ಯ ವಿಕೋಪ ಎದುರಿಸಿದಾಗ ಈ ಹಣ ನೀಡುವುದು ಕೇಂದ್ರ ಸರ್ಕಾರದ ಕರ್ತವ್ಯ ಎಂದು ಸುರ್ಜೇವಾಲಾ ಹೇಳಿದರು.

14,720 ಕೋಟಿ ರೂ.ಗಳ ಪೈಕಿ ಪ್ರತಿಯೊಂದು ಪೈಸೆ ಬಿಡುಗಡೆ ಮಾಡುವವರೆಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ ಕರ್ನಾಟಕಕ್ಕೆ ಬರಬಾರದು. ಅವರಿಗೆ ಮತ ಕೇಳುವ ನೈತಿಕ ಹಕ್ಕಿಲ್ಲ ಎಂದರು.

ನಾಳೆ ನರೇಂದ್ರ ಮೋದಿ ಅವರು ಕರ್ನಾಟಕಕ್ಕೆ ಬರಲಿದ್ದು, ದಾವಣಗೆರೆ ಸಮಾವೇಶದಲ್ಲೂ ಪಾಲ್ಗೊಳ್ಳಲಿದ್ದಾರೆ. ಈ ವೇಳೆ ಅವರು ರಾಜ್ಯದ ಜನರಿಂದ ಗೋ ಬ್ಯಾಕ್ ಮೋದಿ ಪ್ರತಿಭಟನೆ ಎದುರಿಸಲಿದ್ದಾರೆ ಎಂದು ಸುರ್ಜೇವಾಲಾ ತಿಳಿಸಿದರು.

ಬಿಜೆಪಿ ಹಾಗೂ ಜೆಡಿಎಸ್‌ಗಳ ಲೋಕಸಭಾ ಚುನಾವಣಾ ಅಭ್ಯರ್ಥಿಗಳೂ ಸಹ ತಮ್ಮ ನಿಲುವು ಸ್ಪಷ್ಟಪಡಿಸಬೇಕು. ಅವರು ಕನ್ನಡಿಗರ ಪರವಾಗಿದ್ದಾರೋ ಅಥವಾ ಕನ್ನಡ ವಿರೋಧಿ ಡಿಎನ್‌ಎ ಹೊಂದಿರುವವರನ್ನು ಬೆಂಬಲಿಸುತ್ತಾರೋ ತಿಳಿಸಬೇಕು ಎಂದು ಆಗ್ರಹಿಸಿದರು.

ಪೂರ್ಣ ಪ್ರಮಾಣದ ಬರ ಪರಿಹಾರ ಬಿಡುಗಡೆ ಮಾಡದೇ ಇರುವ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ಮುಂದಿನ ವಿಚಾರಣೆ ನಡೆಯುವಾಗ ಪ್ರಬಲ ವಾದ ಮಂಡಿಸಲಿದ್ದೇವೆ. ಇದೇ ವೇಳೆ, ಚುನಾವಣೆಯಲ್ಲಿ ಜನತಾ ನ್ಯಾಯಾಲಯದ ಎದುರೂ ಪ್ರಸ್ತಾಪಿಸುತ್ತೇವೆ. ಮುಖ್ಯಮಂತ್ರಿಗಳಿಂದ ಹಿಡಿದು ಅಭ್ಯರ್ಥಿಗಳ ವರೆಗೆ ಎಲ್ಲರೂ ಕೇಂದ್ರ ಸರ್ಕಾರದ ಧೋರಣೆ ಬಗ್ಗೆ ಜನರಿಗೆ ತಿಳಿಸಲಿದ್ದೇವೆ. ರಾಜ್ಯದ ಜನತೆಗೆ ಈ ಅನ್ಯಾಯ ಹಾಗೂ ಸೇಡಿನ ರಾಜಕೀಯಕ್ಕೆ ತಕ್ಕ ಶಾಸ್ತಿ ಮಾಡಲಿದ್ದಾರೆ ಎಂದರು.

ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್‌ಗೆ 27 ಸ್ಥಾನ ಸಿಗುವ ವಿಶ್ವಾಸವಿದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಒಂದು ಸ್ಥಾನ ಮಾತ್ರ ಪಡೆದಿತ್ತು. ಈ ಬಾರಿ ಪರಿಸ್ಥಿತಿ ಉಲ್ಟಾ ಆಗಲಿದೆ. ಬಿಜೆಪಿ ಒಂದು ಸ್ಥಾನಕ್ಕೆ ಸೀಮಿತವಾಗಲಿದೆ ಎಂದವರು ಭವಿಷ್ಯ ನುಡಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಮುಖ್ಯ ಸಚೇತಕ ಸಲೀಂ ಅಹಮದ್ ಶಾಸಕರಾದ ಶಾಮನೂರು ಶಿವಶಂಕರಪ್ಪ, ದೇವೇಂದ್ರಪ್ಪ, ಡಿ.ಜಿ.ಶಾಂತನಗೌಡ್ರು, ಕೆ.ಎಸ್. ಬಸವಂತಪ್ಪ, ಲತಾ ಮಲ್ಲಿಕಾರ್ಜುನ್, ಶಿವಗಂಗ ಬಸವರಾಜ್, ಮಾಜಿ ಶಾಸಕರಾದ ಎಸ್. ರಾಮಪ್ಪ, ಜಲಜಾನಾಯ್ಕ, ಮುಖಂಡರಾದ ಅಸಗೋಡು ಜಯಸಿಂಹ, ಡಿ. ಬಸವರಾಜ್, ದಿನೇಶ್ ಶೆಟ್ಟಿ, ಮಲ್ಲಿಕಾರ್ಜುನ್ ಮತ್ತಿತರರು ಉಪಸ್ಥಿತರಿದ್ದರು.