ಕಣ್ಣಾಲಿ ತುಂಬಿಸುವ ಕೆರೆಬೇಟೆ

Advertisement

ಚಿತ್ರ: ಕೆರೆಬೇಟೆ
ನಿರ್ದೇಶನ: ರಾಜ್ ಗುರು
ನಿರ್ಮಾಣ: ಜನಮನ ಸಿನಿಮಾಸ್
ತಾರಾಗಣ: ಗೌರಿಶಂಕರ್, ಬಿಂದು ಶಿವರಾಂ, ಸಂಪತ್, ಗೋಪಾಲಕೃಷ್ಣ ದೇಶಪಾಂಡೆ, ಹರಿಣಿ ಮುಂತಾದವರು.

ರೇಟಿಂಗ್ಸ್ 3.5

ಗಣೇಶ್ ರಾಣೆಬೆನ್ನೂರು
ಆತ ಪೆರೋಲ್ ಮೇಲೆ ಹೊರ ಬಂದಿರುತ್ತಾನೆ. ಕೋಪಿಷ್ಠ, ಮುಂಗೋಪಿ… ಆದರೆ ಅಮ್ಮ, ಪ್ರೇಯಸಿ ಎಂದರೆ ಪ್ರಾಣ ಕೊಡಲು ಸಿದ್ಧ. ಹೆಸರು ಕೆರೆಮನೆ ನಾಗ (ಗೌರಿ ಶಂಕರ್). ತನ್ನ ತಂಟೆಗೆ ಬಂದವರನ್ನು ಸುಮ್ಮನೆ ಬಿಡುವ ಆಸಾಮಿಯೇ ಅಲ್ಲ.
ಇಂತಿಪ್ಪ ನಾಗನಿಗೆ ಪ್ರೀತಿ ಟಿಸಿಲೋಡೆಯುತ್ತದೆ. ಆದರೆ ಆ ಪ್ರೇಮವನ್ನು ಆತ ಎಷ್ಟು ಜೋಪಾನ ಮಾಡಿಕೊಳ್ಳುತ್ತಾನೆ ಎಂಬುದಕ್ಕೆ ಸಿನಿಮಾದಲ್ಲಿ ಬರುವ ಕೆಲವು ಸನ್ನಿವೇಶಗಳೇ ಸಾಕ್ಷಿ. ಚಿತ್ರದಲ್ಲಿ ಸೆಂಟಿಮೆಂಟ್, ಲವ್, ಆಕ್ಷನ್ ಎಲ್ಲವನ್ನೂ ಹದವಾಗಿ ಬೆರೆಸಲಾಗಿದೆ.
ಮಲೆನಾಡಿನ ಪರಿಸರ, ಭಾಷೆಯ ಸೊಗಡು, ಸುತ್ತಮುತ್ತಲ ಸಂಪ್ರದಾಯಗಳನ್ನು ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ರಾಜ್ ಗುರು. ಹೀಗಾಗಿ ಆರಂಭದಿಂದ ಅಂತ್ಯದವರೆಗೂ ಚಿತ್ರಕಥೆಯ ಓಘ ಕಾಪಾಡಿಕೊಂಡಿದ್ದಾರೆ. ಕೆಲವೊಂದು ಫ್ಲ್ಯಾಶ್ ಬ್ಯಾಕ್ ದೃಶ್ಯಗಳು ಅನವಶ್ಯಕ ಎನಿಸಿದರೂ ಕೊನೆಗೆ ಸಣ್ಣ ಸಣ್ಣ ತಪ್ಪುಗಳನ್ನು ಮರೆಸುವಂತೆ ಮಾಡುವುದು ಕೊನೆಯ ಘಟ್ಟ. ಕ್ಲೈಮ್ಯಾಕ್ಸ್ ಹೊತ್ತಿಗೆ ಕಣ್ಣಾಲಿಗಳನ್ನು ಒದ್ದೆ ಮಾಡಬಲ್ಲ ತಾಕತ್ತು ಕಥೆಗಿದೆ ಎಂಬುದನ್ನು ನಿರೂಪಿಸಿದ್ದಾರೆ ನಿರ್ದೇಶಕ ರಾಜ್ ಗುರು.
ಇಲ್ಲಿ ತಾರಾಗಣದಷ್ಟೇ ತಾಂತ್ರಿಕ ಬಳಗಕ್ಕೂ ಒತ್ತು ನೀಡಲಾಗಿದೆ. ಹೀಗಾಗಿ ಎಲ್ಲರೂ ಭರ್ಜರಿ ಸ್ಕೋರ್ ಮಾಡಿದ್ದಾರೆ. ನಾಯಕ ಗೌರಿಶಂಕರ್ ಕೆಲವೊಮ್ಮೆ ವಿಲನ್ ರೂಪದಲ್ಲಿ… ಕೆಲವೊಮ್ಮೆ ಕಥಾನಾಯಕನಾಗಿ ಆವರಿಸಿಕೊಳ್ಳುತ್ತಾರೆ. ಕೆರೆಬೇಟೆಯ ದೃಶ್ಯ, ಅನುರಾಗದ ಹಾದಿಯಲ್ಲಿರುವಾಗ ಹಾಗೂ ನಾಯಕಿಯನ್ನು ಹಿಂಸಿಸುವ ದೃಶ್ಯಗಳ ಮೂಲಕ ಗೌರಿಶಂಕರ್ ನಟನೆಯ ನಾನಾ ಮಜಲುಗಳ ದರ್ಶನವಾಗಿದೆ. ನಾಯಕಿ ಬಿಂದು ಸಹ ಜಿದ್ದಿಗೆ ಬಿದ್ದಂತೆ ನಟಿಸಿದ್ದಾರೆ. ಮೊದಲ ಚಿತ್ರದಲ್ಲೇ ಅವರದ್ದು ಗಮನಾರ್ಹ ನಟನೆ. ಇನ್ನು ಗೋಪಾಲ್ ಕೃಷ್ಣ ದೇಶಪಾಂಡೆ, ಸಂಪತ್, ಹರಿಣಿ ಮೊದಲಾದವರು ಪಾತ್ರವನ್ನು ಜೀವಿಸಿದ್ದಾರೆ. ಗಗನ್ ಬಡೇರಿಯಾ ಸಂಗೀತ ಹಾಗೂ ಕೀರ್ತನ್ ಪೂಜಾರಿ ಕ್ಯಾಮೆರಾ ಕೈಚಳಕ ಚಿತ್ರಕ್ಕೆ ಜೀವಾಳಗಳಲ್ಲೊಂದು.