ಇಂಡಿಪೆಂಡೆಂಟ್ ಇರಪಣ್ಣ

Advertisement

ಯಾವುದೇ ಚುನಾವಣೆ ಬರಲಿ ಇರಪಣ್ಣ ಚುನಾವಣೆಗೆ ಸ್ಪರ್ಧಿಸುತ್ತಾನೆ. ಎಲೆಕ್ಷನ್ನಿಗೆ ಮೂರು ತಿಂಗಳು ಮೊದಲೇ ಪ್ರಬಲ ಪಕ್ಷದವರ ಕೈ ಹಿಡಿದು.. ನಾನು ನಿಮ್ಮ ಪಕ್ಷಕ್ಕೆ ಸೇರಿಕೊಳ್ಳುತ್ತಾನೆ. ನಂತರ ಒಬ್ಬರನ್ನೂ ಬಿಡದೇ ಎಲ್ಲರಿಗೂ.. ಮೊನ್ನೆ ಸೇರಿದ ಪಕ್ಷದಿಂದ. ನನಗೇ ಟಿಕೆಟ್ ಎಂದು ಹೇಳಿದ್ದಾರೆ. ದಯವಿಟ್ಟು ನಿಮ್ಮ ಬೆಂಬಲ ಇರಲಿ ಎಂದು ಕೈ ಮುಗಿಯುತ್ತಾನೆ. ಜನರಿಗೆ ಏನಾಗಬೇಕು? ಹೌದಾ ಎಂದು ಸುಮ್ಮನಾಗುವುದಿಲ್ಲ. ಅವರು ಒಬ್ಬರಿಗೆ ಹೇಳುತ್ತಾರೆ… ಒಬ್ಬರು ಇನ್ನೊಬ್ಬರಿಗೆ ಹೀಗೆ ಎಲ್ಲ ಕಡೆ ಸುದ್ದಿಯಾಗುತ್ತದೆ. ಇದರಿಂದ ನಿಜವಾದ ಟಿಕೆಟ್ ಪಡೆಯುವ ಕ್ಯಾಂಡಿಡೇಟ್‌ಗೆ ದಿಗಿಲು ಹತ್ತಿ. ಸೀದಾ ಇರಪಣ್ಣನ ಕಡೆ ಬಂದು ಏನಪ್ಪಾ ನಿನ್ಕಥೆ ಅಂದಾಗ.. ಅಯ್ಯೋ ದಿನಾಲೂ ಡೆಲ್ಲಿಯಿಂದ ಕಾಲ್‌ಬರುತ್ತವೆ. ನೀನೇ ನಿಲ್ಲು ಇರಪಣ್ಣ ಅಂತಾರೆ… ನಾನು ಬೇಡ ಸ್ವಾಮೀ ಮೊದಲಿನಿಂದ ಅವರಿಗೇ ಟಿಕೆಟ್ ಎಂದು ಘೋಷಣೆಯಾಗಿದೆ ಅವರಿಗೆ ಕೊಡಿ ಅಂತ ಹೇಳಿದ್ದೇನೆ ಅಂದಾಗ ನಿಜವಾದ ಆಕಾಂಕ್ಷಿ ಅಯ್ಯೋ ಇರಪಣ್ಣ ಅಂದು… ನೋಡು ಈ ಬಾರಿ ನಾನು… ಮುಂದಿನಬಾರಿ ನೀನು ಎಂದು ಹೇಳಿ ದಕ್ಷಿಣೆ ಕೊಟ್ಡು ಕೈ ಜೋಡಿಸಿದಾಗ…. ನನ್ನ ಮುಜುಗರಕ್ಕೆ ತಳ್ಳಿದಿರಿ ಎಂದು ಎಲೆ ಅಡಿಕೆ ದಕ್ಷಿಣೆ ಇಸಿದುಕೊಂಡು ಪೆಟ್ಟಿಗೆಯಲ್ಲಿಡುತ್ತಾನೆ. ಮೂರು ದಿನ ತೀರ್ಥಯಾತ್ರೆಗೆ ಹೋಗಿಬಂದು..ನಾನು ಆ ಪಕ್ಷ ತೊರೆದಿದ್ದೇನೆ ಎಂದು ಜಾಹೀರಾತು ನೀಡುತ್ತಾನೆ. ನಾಳೆಯೇ ಇಂಡಿಪೆಂಡೆಂಟಾಗಿ ನಾಮಪತ್ರ ಎಂದು ಘೋಷಿಸುತ್ತಾನೆ.
ಇನ್ನೊಂದು ಪಕ್ಷದ ಅಭ್ಯರ್ಥಿ ಎದೆ ಢವಢವ ಅನ್ನುತ್ತದೆ. ಆತನೂ ಬಂದು ಅಡಿಕೆ ಎಲೆ ಅದರಮೇಲೆ ಸಾಕಷ್ಟು ದಕ್ಷಿಣೆ ಇಟ್ಟು ಕೊಡುತ್ತಾನೆ. ಇದು ಕೇವಲ ಒಂದೇ ಚುನಾವಣೆ ಅಲ್ಲ. ಪಂಚಾಯ್ತಿ ಚುನಾವಣೆಯಿಂದ ಹಿಡಿದು ಎಂಪಿ ಚುನಾವಣೆವರೆಗೂ ಇರಪಣ್ಣ ಏನೇನೋ ಹೇಳಿ ಕೊನೆಗೆ ಇಂಡಿಪೆಂಡೆಂಟ್ ಆಗಿ ನಿಂತು ದಕ್ಷಿಣೆ ಪಡೆಯುತ್ತಾನೆ. ಜನರಿಗೆ… ಅಭ್ಯರ್ಥಿಗಳಿಗೆ… ಪಕ್ಷದವರಿಗೆ ಇರಪಣ್ಣನ ಕರಾಮತ್ತು ಗೊತ್ತಾಗಿದೆ. ಎಲ್ಲರೂ ಆತನನ್ಮು ಇಂಡಿಪೆಂಡೆಂಟ್ ಇರಪಣ್ಣ ಎಂದು ಕರೆಯುತ್ತಾರೆ.. ಇಷ್ಟು ವರ್ಷಗಳಿಂದ ಇಂಡಿಪೆಂಡೆಂಟ್ ಆಭ್ಯರ್ಥಿಯಾಗುತ್ತೇನೆ ಎಂದು ಹೇಳಿ.. ಹೇಳಿ.. ಭರ್ಜರಿ ಶ್ರೀಮಂತನಾಗಿದ್ದಾನೆ…. ಇದೇ ಟ್ರಿಕ್ಕು ರಾಜ್ಯದಾದ್ಯಂತ ಮಾಡಲು ಯೋಚಿಸಿದ್ದಾನೆ. ಇಂಡಿಪೆಂಡೆಂಟ್ ಎಂಬ ಹೆಸರಲ್ಲಿ ಪಕ್ಷದ ರಿಜಿಸ್ಟ್ರೇಷನ್ ಮಾಡಿಸಲು ಯೋಚಿಸುತ್ತಿದ್ದಾನೆ. ಮುಂದಿನ ಚುನಾವಣೆಯಲ್ಲಿ ಇಂಡಿಪೆಂಡೆಂಟ್ ಪಕ್ಷ ಉದಯವಾಗಬಹುದು….