ಆತಂಕ ತರುವ ಕಾರ್ಡಿಯಾಕ್ ನ್ಯೂರೋಸಿಸ್: ಏನು, ಎತ್ತ?

Advertisement

ಓರ್ವ ಸೈಕ್ಯಾಟ್ರಿಸ್ಟ್ (ಮನೋರೋಗ ತಜ್ಞ) ಶಾರೀರಿಕ ರೋಗಗಳ ವೈದ್ಯನೂ ಹೌದು! ಮಾನಸಿಕ ಕಾಯಿಲೆಗಳ ಮನೋ ವೈದ್ಯನೂ ಹೌದು!
ಎಂದಿನಂತೆ ತಮ್ಮ “ಕೌನ್ಸಲಿಂಗ್ ಸೆಶನ್”ಗಳನ್ನು ಓರ್ವ ಮನೋ ವೈದ್ಯರು ಮುಗಿಸಿದಾಗ ಮಧ್ಯ ರಾತ್ರಿ ೧೨ ಗಂಟೆ. ಕರ್ತವ್ಯ ಮುಗಿಸಿ ಆಸ್ಪತ್ರೆಯ ನಾಲ್ಕನೇ ಮಹಡಿಯಲ್ಲಿದ್ದ ತಮ್ಮ ಮನೆಗೆ ಆಗಮಿಸಿ, ವಿಶ್ರಾಂತಿ ಪಡೆಯಲು ಅವರು ಅಣಿಯಾಗುತ್ತಿದ್ದರು. ರಾತ್ರಿಯ ಭೋಜನವೂ ಆಗಿರಲಿಲ್ಲ. ಆಸ್ಪತ್ರೆಯಿಂದ ನರ್ಸ್ ಆತಂಕದಿಂದ ಫೋನಾಯಿಸಿ “ಸರ್, ಕೂಡಲೇ ಬನ್ನಿ, ಓರ್ವ ೨೮ ವಯಸ್ಸಿನ ಯುವಕ ಬಂದಿದ್ದಾರೆ, ವಿಪರೀತ ಬೆವರುತ್ತಿದ್ದಾರೆ, ಎದೆ ನೋವು ಕೂಡಾ ಇದೆ. ಒಂದಿನಿತೂ ಕುಳಿತುಕೊಳ್ಳುತ್ತಿಲ್ಲ, ಅತ್ಯಂತ ಗಾಬರಿಯಿಂದ ಓಡಾಡುತ್ತಿದ್ದಾರೆ, ಪೇಚಾಡುತ್ತಿದ್ದಾರೆ, ಒಂದು ಸಲ ವಾಂತಿಯೂ ಆಯಿತು” ಎಂದ ಕೂಡಲೇ ಕೆಳಗಿಳಿದು ಬಂದರು. ಯುವಕನ ರಕ್ತದೊತ್ತಡ, ಸಕ್ಕರೆ ಪ್ರಮಾಣ ಸಹಜ ಸ್ಥಿತಿಯಲ್ಲಿದ್ದವು.
ಇ.ಸಿ.ಜಿ ಮಾಡಿ ವರದಿ ವೀಕ್ಷಿಸಿದರು. ರೋಗಿಗೆ ಆಶ್ವಾಸನೆ ನೀಡಿದರು, “ರಮೇಶ, ನಿಮಗೆ ಹೃದಯಘಾತ ಆಗಿಲ್ಲ. ನಿಮ್ಮ ಇ.ಸಿ.ಜಿ ಸಂಪೂರ್ಣ ನಾರ್ಮಲ್. ಪ್ರಾಯಶಃ, ನನ್ನ ಇ.ಸಿ.ಜಿಯೂ ಇಷ್ಟು ನಾರ್ಮಲ್ ಇರಲಿಕ್ಕಿಲ್ಲ” ಎಂದು ನಗೆಯಾಡಿದರು. “ನಿಮಗೆ ಕಾರ್ಡಿಯಾಕ್ ನ್ಯೂರೋಸಿಸ್ ಆಗಿದೆ” ಎಂದು ಹೇಳಿ ಅಗತ್ಯವಿರುವ ಚುಚ್ಚು ಮದ್ದು, ಮಾತ್ರೆ ನೀಡಿ ಅವರನ್ನು ಮನೆಗೆ ಕಳುಹಿಸಿದರು.
ಏನಿದು ಕಾರ್ಡಿಯಾಕ್ ನ್ಯೂರೋಸಿಸ್?
ಮರು ದಿನ ಮುಂಜಾನೆ ಈ ರೋಗಿ ಮನೋ ವೈದ್ಯರಿಗೆ ಕರೆ ಮಾಡಿ ಕೃತಜ್ಞತೆ ಅರ್ಪಿಸಿದರು. ವೈದ್ಯರು ಕೇಳಿದರು, “ರಮೇಶ, ಈ ಎದೆ ನೋವು ನಿಮಗೆ ಪ್ರಾರಂಭವಾದದ್ದು ಹೇಗೆ?”
“ಸಾರ್, ನಾನು ನಿನ್ನೆ ವರ್ಕ ಔಟ್ ಮಾಡಲು ಜಿಮ್‌ಗೆ ಹೋಗಿದ್ದೆ. ರಭಸವಾಗಿ ವೇಟ್ ಲಿಪ್ಟಿಂಗ್ ಮಾಡುತ್ತಿದ್ದಾಗ ತತ್‌ಕ್ಷಣ ನೆನಪಾಯಿತು, ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತಿರುವಾಗ ಮಡಿದ ಈರ್ವ ಸೆಲಿಬ್ರಿಟಿಗಳು, ಪುನೀತ್ ರಾಜಕುಮಾರ ಹಾಗೂ ಹಾಸ್ಯ ನಟ ರಾಜು ಶ್ರೀವಾಸ್ತವ. ನಾನೂ ಅವರಂತೆಯೇ ಸಾಯಬಹುದು ಎಂದು ಗಾಬರಿ ಪ್ರಾರಂಭವಾಗಿ, ಎದೆ ನೋವು, ವಿಪರೀತ ಬೆವರು ಆರಂಭವಾಯಿತು” ಎಂದರು ರಮೇಶ. ಮನೋ ವೈದ್ಯರು ಅವನ ಕಾಯಿಲೆಯ ಗುಟ್ಟನ್ನು ಅರಿತುಕೊಂಡರು.
“ಕಾರ್ಡಿಯಾಕ್ ನ್ಯೂರೋಸಿಸ್” ಎಂಬುದು ಒಂದು ರೀತಿಯ ಮಾನಸಿಕ ಕಾಯಿಲೆ. ಇದು ರೋಗಿಗಳಿಗೆ ವಿಪರೀತ ಶಾರೀರಿಕ ತೊಂದರೆ ಹಾಗೂ ಮನೋ ಕ್ಲೇಷ ತಂದೀತು. ಇವರ ಎದೆ ನೋವು ನಿಜವಾದ ಹೃದಯಾಘಾತಕ್ಕಿಂತಲೂ ಹೆಚ್ಚಿನ ತೀವ್ರತೆಯಲ್ಲಿ ಕಾಣಿಸಿಕೊಳ್ಳಬಹುದು. ನಿಶ್ಯಕ್ತಿ, ಏದುಸಿರು, ನಿದ್ರಾಹೀನತೆ, ಬೆಚ್ಚಿ ಬೀಳಿಸುವಷ್ಟು ಬೆವರು, ಎದೆಯಲ್ಲಿ ಡವ ಡವ, ವಿಪರೀತ ಭಯ, ಆತಂಕ, “ಇನ್ನೇನು ಪ್ರಾಣ ಪಕ್ಷಿ ಹಾರಿ ಹೋಗುವದು” ಎಂಬ ಭೀಕರವಾದ ವಿಚಾರಗಳು ರೋಗಿಗೆ ಅತ್ಯಂತ ಶಾರೀರಿಕ ಕ್ಲೇಷ ತರಬಲ್ಲವು. ಇಂತಹ ರೋಗಿಗಳಿಗೆ ಮನೋ ವೈದ್ಯರಿಂದ ಕೌನ್ಸಲಿಂಗ್, ಆತಂಕ ಮತ್ತು ಖಿನ್ನತೆ ನಿವಾರಣೆಯ ಮದ್ದುಗಳು, ಪರಿಸರದಲ್ಲಿ ಬದಲಾವಣೆ, ರೋಗಿಯ ಬಂಧುಗಳಿಗೆ ಆಪ್ತ ಸಮಾಲೋಚನೆ ಅಗತ್ಯ. ಇಂತಹ ರೋಗಿಗಳಿಗೆ ಯಾವ ವೈದ್ಯರೂ ಪದೇ ಪದೇ ಇ.ಸಿ.ಜಿ ಮಾಡುವದು ಬೇಡ, ಅದು ಅನಗತ್ಯ ಹಾಗೂ ಅಪಾಯಕಾರಿ!

– ಡಾ. ಅಲೋಕ ವಿನೋದ ಕುಲಕರ್ಣಿ
ಮನೋ ದೈಹಿಕ ತಜ್ಞ

(ಮೊ – ೯೯೮೬೨೯೬೧೫೪)