ಆಡಾಡ್ತಾ ಹ್ವಾದ ಕಂದಾ ಎಲ್ಯದಿಯೋ.. ಹೆಂಗದಿಯೋ.. ಯಪ್ಪಾ…!

Advertisement

ವಿಜಯಪುರ : ಮುಸುರೆ ಪಾತ್ರೆಗಳನ್ನು ತಿಕ್ಕುತ್ತಿದ್ದಳು…. ಅತ್ತ ಮತ್ತೊಂದು ಕಡೆ ಬೋರ್‌ವೆಲ್ಲನಲ್ಲಿ ತಂದೆ ಮತ್ತು ಇತರರು ಕೆಲಸ ಮಾಡುತ್ತಿದ್ದಾರೆ.
ಇದ್ದಕ್ಕಿದ್ದಂತೆಯೇ ತಾಯಿ ಲಕ್ಷ್ಯ ಆ ಕಡೆಗೆ ಹೋಗುತ್ತಿದ್ದಂತೆಯೇ ಆಡುತ್ತಿದ್ದ ಮಗು ಕಾಣಲಿಲ್ಲ… ಅವಳ ಜಂಘಾಬಲವೇ ಉಡುಗಿ ಹೋಗಿದೆ… ಚಿಟ್ಟನೇ ಚೀರಿಕೊಂಡಿದ್ದಾಳೆ. ಆ ಕಡೆ ಈ ಕಡೆ ಬಂದು ಓಡಾಡಿಕೊಂಡು ನೋಡಿದ್ದಾಳೆ.. ಈಗ ಇಲ್ಲಿಯೇ ಇರುವ ಮಗು ಎಲ್ಲಿ.. ದಿಗಿಲು ಹುಟ್ಟಿಕೊಂಡಿದೆ..
ಇವಳ ದನಿ ಕೇಳಿಸಿಕೊಂಡ ಅವರಿವರು ಬಂದಿದ್ದಾರೆ.. ಎಲ್ಲಿ ಎಲ್ಲಿ.. ಇಲ್ಲಿಯೇ ಆಟವಾಡುತ್ತಿದ್ದ ಒಬ್ಬನೇ ಒಬ್ಬ ಮಗ ಸಾತ್ವಿಕ ಎಲ್ಲಿ..? ಕಣ್ಣೆದುರಿನಲ್ಲಿಯೇ ಆಡುತ್ತಿದ್ದ ಮಗು ಕಾಣದೇ ಹೋಗಿದ್ದು ಲಚ್ಯಾಣದ ಹೊಲವೊಂದರಲ್ಲಿ… ೨೬೫ ಅಡಿ ಆಳದ ಕೊಳವೇ ಬಾವಿಯಲ್ಲಿ ಯಾರೋ ಬಂದು ಇಣುಕಿದ್ದಾರೆ. ಮಗುವಿನ ಕಾಲುಗಳು ಕಂಡಿವೆ. ಸ್ಥಳದಲ್ಲಿದ್ದವರೆಲ್ಲರಿಗೂ ಗಾಬರಿ.. ಮಗು ತಲೆಕೆಳಗಾಗಿ ಬಿದ್ದಿದೆ. ಅಪ್ಪ ಸತೀಶ ಮಜಗೊಂಡ, ಅಮ್ಮ ಪೂಜಾಳ ನೆರಳಾಟ ಸಂಬಂಧಿಕರ ಸಂಕಟ ಹೇಳತೀರದು…
ಅವರಿವರು ಸಂಬಂಧಿಸಿದವರಿಗೆ ಫೋನಾಯಿಸಿದ್ದಾರೆ. ಅಗ್ನಿಶಾಮಕ ದಳ ಸೇರಿದಂತೆ ಬೆಳಗಾವಿಯಿಂದ ಎಸ್‌ಡಿಆರ್‌ಎಫ್ ತಂಡ ಆಗಮಿಸಿದೆ. ಜಿಲ್ಲಾಮಟ್ಟದ ಅಧಿಕಾರಿಗಳು ಅಲ್ಲಿಯೇ ಬೀಡು ಬಿಟ್ಟಿದ್ದು ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ. ಮೂರು ಜೆಸಿಬಿಗಳಿಂದ ತಡರಾತ್ರಿಯವರೆಗೂ ಕಾರ್ಯಾಚರಣೆ ನಡೆದಿದೆ. ಏತನ್ಮಧ್ಯೆ ಕ್ಯಾಮೆರಾಗಳನ್ನು ತಂದು ಪರೀಕ್ಷೆ ಮಾಡಿದಾಗ ೧೭ ಅಡಿ ಆಳದಲ್ಲಿ ಮಗು ಸಿಕ್ಕಿ ಹಾಕಿಕೊಂಡಿದ್ದು ದೃಢಪಟ್ಟಿದೆ. ದೇವರಲ್ಲಿ ಭಾರ ಹಾಕಿದ್ದು, ಅವರಿವರು ತಂದೆ ತಾಯಿಗೆ ಸಮಾಧಾನ ಹೇಳುತ್ತಲೇ ಇದ್ದಾರೆ. ಆದರೆ ಹೆತ್ತ ಕರುಳಿಗೆ ಸಮಾಧಾನವಿಲ್ಲ. ಕೊಳವೆ ಬಾವಿಯೊಳಗಡೆ ಆಕ್ಸಿಜನ್ ಪೂರೈಕೆ ಮಾಡಲಾಗುತ್ತಿದೆ. ಅಧಿಕಾರಿಗಳು ಎರಡು ಗಂಟೆಗಳಲ್ಲಿ ಮಗುವನ್ನು ಸುರಕ್ಷಿತವಾಗಿ ತಂದು ಕೊಡುತ್ತೇವೆ ಎಂದು ಸಮಾಧಾನ ನೀಡಿದ್ದಾರೆ.
ನಿನ್ನೆಯಷ್ಟೇ ಕೊಳವೇ ಬಾವಿ ಕೊರೆಸಿತ್ತು.: ಸಾಮಾನ್ಯವಾಗಿ ಈ ಭಾಗದಲ್ಲಿ ಬೇಸಿಗೆಯಲ್ಲಿಯೇ ಕೊಳವೆ ಬಾವಿಯನ್ನು ಕೊರೆಸುತ್ತಾರೆ. ಅಂದರೆ ನೀರಿನ ಲಭ್ಯತೆ ಈ ಸಮಯದಲ್ಲಿಯೇ ಅಂದಾಜಾಗಿ ಸಿಗುತ್ತದೆ ಎಂಬ ಭರವಸೆ ಇಲ್ಲಿನ ರೈತರದ್ದು. ೧೦ ಕೊಳವೆ ಬಾವಿಯನ್ನು ಕೊರೆಸಿದ್ದರೂ ನೀರು ಕಂಡಿರಲಿಲ್ಲ. ಆದರೆ ಮಂಗಳವಾರ ೨೬೫ ಅಡಿ ಆಳಕ್ಕೆ ಕೊರೆಸಿದ ಕೊಳವೆ ಬಾವಿಯಲ್ಲಿ ಅರ್ಧ ಇಂಚು ನೀರು ಬಿದ್ದಿತ್ತು. ಇಂದು ಏರ್ ಪಾಸ್ ಆಗಲಿ ಎಂದು ಬಿಟ್ಟಿದ್ದು, ಕೇಸಿಂಗ್ ಇಳಿಸುವ ಕಾರ್ಯಕ್ಕೆ ಅಣಿಯಾಗುತ್ತಿದ್ದರೆಂದು ತಿಳಿದು ಬಂದಿದೆ. ತಂದೆ ಸತೀಶ ಮತ್ತು ಇತರರು ಮತ್ತೊಂದು ಕಡೆಗೆ ಕೆಲಸ ಮಾಡುತ್ತಿದ್ದಾರೆ. ಅಮ್ಮ ಮುಸುರೇ ಪಾತ್ರೆಗಳನ್ನು ತಿಕ್ಕಿ ಹೊಲದಲ್ಲಿನ ಮನೆಯ ಒಳಗಡೆ ಹೋಗಿದ್ದಾಳೆ. ಅಷ್ಟರಲ್ಲಿಯೇ ಆಟವಾಡುತ್ತಿದ್ದ ಮಗುವು ಕಾಣದಾಗಿದೆ. ಈಗ ತಡರಾತ್ರಿಯವರೆಗೂ ಕಾರ್ಯಾಚರಣೆ ನಡೆಸಿದ್ದಾರೆ. ಜೀವಂತವಾಗಿಯೇ ಮಗುವನ್ನು ಹೊರತೆಗೆಯುವ ವಿಶ್ವಾಸವನ್ನು ಕಾರ್ಯಾಚರಣೆಯಲ್ಲಿರುವವರು ಹೊಂದಿದ್ದಾರೆನ್ನಲಾಗುತ್ತಿದೆ. ಮಗುವನ್ನು ಕಾಣದೇ ಇರುವ ತಾಯಿ ಪೂಜಾ ಮತ್ತು ತಂದೆ ಸತೀಶ ಅವರ ದುಗುಡಕ್ಕೆ ಸಮಾಧಾನ ಹೇಳುತ್ತಿದ್ದಾರೆ.