ಅಯೋಧ್ಯೆಯ ರಾಮನಿಗೆ ರಜತ ಪಲ್ಲಕ್ಕಿ, ಕಾಷ್ಠ ತೊಟ್ಟಿಲು ಅರ್ಪಣೆ

Advertisement

ಉಡುಪಿ: ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ಮಾರ್ಗದರ್ಶನದಲ್ಲಿ ಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ನಡೆಯುತ್ತಿರುವ ಮಂಡಲೋತ್ಸವ ಸಂದರ್ಭದಲ್ಲಿ ಮಂಗಳವಾರ ಕಾಶೀ ಮಠಾಧೀಶ ಶ್ರೀ ಸಂಯಮೀಂದ್ರತೀರ್ಥ ಸ್ವಾಮೀಜಿ ಕೊಡುಗೆಯಾಗಿ ಬಾಲರಾಮನಿಗೆ ಸಿದ್ಧಪಡಿಸಿದ ರಜತ ಪಲ್ಲಕ್ಕಿಯನ್ನು ಬುಧವಾರ ಅರ್ಪಣೆ ಮಾಡಲಾಯಿತು. ಉಡುಪಿ ಸ್ವರ್ಣ ಜ್ಯುವೆಲ್ಲರ್ಸ್ನಲ್ಲಿ ಆಕರ್ಷಕ ಪಲ್ಲಕ್ಕಿಯನ್ನು ಸಿದ್ಧಪಡಿಸಲಾಗಿತ್ತು.
ಇದೇ ಸಂದರ್ಭದಲ್ಲಿ ಮಾಜಿ ಶಾಸಕ ಕೆ. ರಘುಪತಿ ಭಟ್ ಗುಜರಾತಿನಿಂದ ತರಿಸಲಾದ ಆಕರ್ಷಕ ಕಾಷ್ಠ ಶಿಲ್ಪವುಳ್ಳ ತೊಟ್ಟಿಲನ್ನು ಅರ್ಪಿಸಿದರು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಇಂದಿನ ಕಲಶ ಸೇವೆ ನಡೆಸಿದರು. ಮಂಡಲೋತ್ಸವ ದಿನದಿಂದ ದಿನಕ್ಕೆ ವೈಭವಯುತವಾಗಿ ನಡೆಯುತ್ತಿದ್ದು, ಮೈಸೂರಿನ ಶ್ರೀ ರಾಮಲೀಲಾ ತಂಡದವರಿಂದ ನಗರಸಂಕೀರ್ತನೆ ನಡೆಯಿತು. ಸುಮಾರು ೩ ಲಕ್ಷಕ್ಕೂ ಅಧಿಕ ಮಂದಿ ಭಕ್ತರು ಶ್ರೀರಾಮ ದರ್ಶನ ಪಡೆದರು ಎಂದು ಪೇಜಾವರ ಮಠದ ಪ್ರಕಟಣೆ ತಿಳಿಸಿದೆ.