ಅಪಾರ ಕೀರ್ತಿಗೆ ಸಂಕಲ್ಪದ ದಾರಿ

Advertisement

ಚುನಾವಣೆಯ ಸಂದರ್ಭದಲ್ಲಿ ಮತಯಾಚನೆಗೆ ಮುಖ್ಯವಾಗುವುದು ಚುನಾವಣಾ ಪ್ರಣಾಳಿಕೆ. ಯಾಕೆಂದರೆ ಪ್ರಣಾಳಿಕೆಯಲ್ಲಿ ಸಂಬಂಧಿಸಿದ ಪಕ್ಷದ ಕನಸಿನ ಜೊತೆಗೆ ಅದನ್ನು ನನಸು ಮಾಡುವ ವಿಧಾನ. ಇದನ್ನು ಒಪ್ಪುವುದು, ಬಿಡುವುದು ಬೇರೆ ಪ್ರಶ್ನೆ.
ಈ ಕನಸಿನ ಸುತ್ತ ನಡೆಯುವ ಚರ್ಚೆಗೆ ಪ್ರಚಾರದ ನಿರ್ಣಾಯಕ ಅಂಶ. ದೇಶವನ್ನು ಸುದೀರ್ಘಕಾಲ ಆಳಿ ಈಗ ೧೦ ವರ್ಷಗಳಿಂದ ಪ್ರತಿಪಕ್ಷದ ಸ್ಥಾನದಲ್ಲಿರುವ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ೨೫ ಗ್ಯಾರಂಟಿಗಳ್ನು ಒಳಗೊಂಡಿರುವ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿರುವ ಬೆನ್ನಹಿಂದೆಯೇ ಅಧಿಕಾರಾರೂಢ ಭಾರತೀಯ ಜನತಾ ಪಕ್ಷ ಸಂಕಲ್ಪಪತ್ರದ ಹೆಸರಿನಲ್ಲಿ ದೀರ್ಘ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿ ಚರ್ಚೆಗೆ ಗ್ರಾಸ ಒದಗಿಸಿದೆ.
ಸುಮಾರು ೮ ಕೋಟಿ ಜನರಿಗೆ ಉಚಿತ ಆಹಾರಧಾನ್ಯ ಒದಗಿಸುವುದು, ಒಂದೇ ದೇಶ ಒಂದೇ ಚುನಾವಣೆ, ಮಹಿಳೆಯರ ಕಲ್ಯಾಣಕ್ಕೆ ಬಹುಹಂತದ ಯೋಜನೆ, ಸರ್ಕಾರಿ ನೇಮಕಾತಿಯಲ್ಲಿ ಅಕ್ರಮ ನಿವಾರಣೆಗೆ ಕ್ರಮವೂ ಸೇರಿದಂತೆ ಹಲವು ಭರವಸೆಗಳನ್ನು ಒಳಗೊಂಡಿರುವ ಈ ಸಂಕಲ್ಪಪತ್ರದಲ್ಲಿ ವಿಶಿಷ್ಟ ಹಾಗೂ ವಿಭಿನ್ನ ಈತಿಯಲ್ಲಿ ಪ್ರಣಾಳಿಕೆಯನ್ನು ಮೋದಿ ಗ್ಯಾರಂಟಿ ಎಂದು ಬಣ್ಣಿಸಲಾಗಿದೆ. ದೇಶದ ಎರಡು ಪ್ರಧಾನ ಪಕ್ಷಗಳ ಪ್ರಣಾಳಿಕೆ ಸಹಜವಾಗಿಯೇ ಸಾರ್ವಜನಿಕ ಚರ್ಚೆಗೆ ವಸ್ತು.
ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ವಾಸ್ತವ ಬದುಕನ್ನು ಆಧರಿಸಿದ್ದು ಎಂಬ ವಿಶ್ಲೇಷಣೆಯನ್ನು ನಿರಾಕರಿಸುವಂತಿಲ್ಲ. ಏಕೆಂದರೆ ಕಾಂಗ್ರೆಸ್ ಪಕ್ಷದ ಮತದಾರರು ಸರ್ವೇಸಾಮಾನ್ಯವಾಗಿ ಮುಖ್ಯವಾಹಿನಿಯಿಂದ ಹೊರಗೆ ಇರುವಂಥರಿಗೆ ಬದುಕಿನ ಬಂಡಿ ಎಳೆಯುವುದೇ ದೊಡ್ಡ ಸವಾಲು.
ಇದಕ್ಕೆ ಅನುಗುಣವಾಗಿ ಕಾಂಗ್ರೆಸ್ ಪಕ್ಷ ಹಲವು ಯೋಜನೆಗಳ ಮೂಲಕ ಈ ವರ್ಗದವರ ಬದುಕಿನದಾರಿಯನ್ನು ಹಸನು ಮಾಡುವ ಗುರಿ ಹೊತ್ತಿರುವುದು ಸಹಜವಾಗಿಯೇ ಕಾಂಗ್ರೆಸ್ ಪಕ್ಷದ ವೈಚಾರಿಕತೆಯ ಪ್ರತಿಬಿಂಬಂತಿದೆ. ಇನ್ನು ಭಾರತೀಯ ಜನತಾ ಪಕ್ಷ ನೇತೃತ್ವದ ನರೇಂದ್ರ ಮೋದಿ ಸರ್ಕಾರ ಕಳೆದ ೧೦ ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವುದರಿಂದ ಆಡಳಿತದ ಮೌಲ್ಯಮಾಪನ ಮಾಡಿಕೊಳ್ಳುವ ಜೊತೆಗೆ ಮುಂದಿನ ಯೋಜನೆಗಳ ವಿಸ್ತೃತ ರೂಪದ ವಿವರಣೆ ಇದೆ. ಇದೇ ಪ್ರಣಾಳಿಕೆಯಲ್ಲಿ ಪ್ರಸ್ತಾಪಗೊಂಡಿರುವ ವಿಕಸಿತ ಭಾರತ ಎಂಬ ನುಡಿಗಟ್ಟಿನ ವಿವರಣೆ. ಏಕರೂಪ ಧಾರ್ಮಿಕ ಸಂಹಿತೆಯ ಜೊತೆಗೆ ಪೌರತ್ವ ಶಾಸನದ ಜಾರಿಯ ಅನಿವಾರ್ಯತೆಯನ್ನು ಒತ್ತಿಹೇಳಿರುವ ಪ್ರಣಾಳಿಕೆ. ಒಂದರ್ಥದಲ್ಲಿ ಭಾವನಾತ್ಮಕವೂ ಹೌದು. ಯಾಕೆಂದರೆ ಭವಿಷ್ಯ ಭಾರತ ನಿರ್ಮಾಣ ಮಾಡುವ ನಿಟ್ಟಿನಲ್ಲಿ ರೂಪಿಸಬೇಕಾದ ಅಗತ್ಯ ವಾತಾವರಣಕ್ಕೆ ಪೂರಕವಾದ ನೆಲೆಗಟ್ಟನ್ನು ಸ್ಥಾಪಿಸುವ ವಿವರ ಪ್ರಸ್ತಾಪವಾಗುವಾಗ ಬಿಜೆಪಿ ಬಹುವಾಗಿ ಒತ್ತಿಹೇಳುವ ಉಜ್ವಲ ಪರಂಪರೆಯ ಮಹತ್ವವನ್ನು ಕಾಣಬಹುದು. ಅದೇನೆ ಇರಲಿ, ದೇಶದ ೨ ಪ್ರಮುಖ ಪಕ್ಷಗಳು ಮುಂದಿಟ್ಟಿರುವ ಪ್ರಣಾಳಿಕೆ ಆಧರಿಸಿ ಮತದಾರರು ಮತ ಚಲಾಯಿಸಿದಾಗ ಮಾತ್ರ ಜನಾದೇಶಕ್ಕೆ ಒಂದು ರೀತಿಯ ಪುರಸ್ಕಾರ ಒದಗುತ್ತದೆ. ಮುಖ ನೋಡಿ ಮಣೆಹಾಕುವ ಮತದಾನದ ಸವೆದ ಜಾಡನ್ನು ಕೈಬಿಟ್ಟು ಗುಣನೋಡಿ ಮತಕೊಡುವ ಪ್ರವೃತ್ತಿ ಮತದಾರರಲ್ಲಿ ಚಿಗುರಿದರೆ ಆಗ ಭವ್ಯ ಭಾರತದ ಅಪಾರ ಕೀರ್ತಿ ಜಗದಗಲ ಮುಗಿಲಗಲ ಎಂಬಂತೆ ಎಲ್ಲೆಡೆ ಹಬ್ಬಲು ರಾಜಮಾರ್ಗ ತಾನಾಗಿಯೇ ಒದಗುತ್ತದೆ.