ಅಧಿಕೃತ ಪಟ್ಟಿ ಬಿಡುಗಡೆ ಆದಾಗಲೇ ಅಭ್ಯರ್ಥಿ ಹೆಸರು ಬಹಿರಂಗ

Advertisement

ಚಿತ್ರದುರ್ಗ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಫೋಕ್ಸೋ ಪ್ರಕರಣ ವಿಚಾರವಾಗಿ ಗೃಹ ಸಚಿವ ಪರಮೇಶ್ವರ್ ಹೇಳಿಕೆಯಲ್ಲಿ ದೂರು ನೀಡಿದ ಮಹಿಳೆ ಮಾನಸಿಕ ಅಸ್ವಸ್ಥೆ ಎಂದಿರುವುದರಿಂದ ಇದಕ್ಕೆ ಪ್ರಾಮುಖ್ಯತೆ ನೀಡುವ ಅವಶ್ಯಕತೆ ಇಲ್ಲ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಚಿತ್ರದುರ್ಗದಲ್ಲಿ ಶುಕ್ರವಾರ ಮಾದಾರ ಚೆನ್ನಯ್ಯ ಗುರುಪೀಠಕ್ಕೆ ಭೇಟಿ‌ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ದೂರು ದಾಖಲಾದ ತಕ್ಷಣ ಕ್ರಮ ಕೈಗೊಳ್ಳಲಾಗದು, ಜವಬ್ದಾರಿಯಿಂದ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಈಗಾಗಲೇ ಗೃಹ ಸಚಿವ ಡಾ. ಜಿ.ಪರಮೇಶ್ವರ್ ಹೇಳಿಕೆ‌ ನೀಡಿದ್ದಾರೆ. ಅವರು ಹೇಳಿಕೆ ಕೊಟ್ಟಿರುವುದು ಸರಿಯಾಗಿದೆ. ದೂರು ನೀಡಿದ ಮಹಿಳೆ ಈ ಹಿಂದೆ ಅನೇಕರ ಮೇಲೆ ಇದೇ ರೀತಿ ದೂರು ಕೊಟ್ಟಿದ್ದರೆಂದು ಹೇಳಿದ್ದಾರೆ. ರಾಜಕೀಯದಲ್ಲಿ ಹೆಸರಿಗೆ ಕಳಂಕ‌ ತರುವ ಪ್ರಯತ್ನ ನಡೆಯುತ್ತವೆ. ಆದರೆ ಈ ಪ್ರಕರಣ ದಾಖಲಿಸಿದ ಹಿಂದೆ ಯಾವುದೇ ಸದುದ್ದೇಶ ಇಲ್ಲ. ಚುನಾವಣೆ ವೇಳೆ ಈ ರೀತಿ ಪ್ರಯತ್ನ ನಡೆಯುತ್ತಿರುತ್ತವೆ ಎಂದರು.
ಬಿಜೆಪಿ ಎಲ್ಲಾ ನಿಷ್ಠಾವಂತರಿಗೆ ಟಿಕೆಟ್ ನೀಡಿದೆ. ಪಾರ್ಲಿಮೆಂಟರಿ ಬೋರ್ಡ್‌ನಲ್ಲಿ ಚರ್ಚಿಸಿ ಅಭ್ಯರ್ಥಿಗಳ ಆಯ್ಕೆ ಮಾಡಲಾಗಿದೆ ಎಂದು ಹೇಳಿದ ಅವರು, ಮಾದಾರ ಚನ್ನಯ್ಯಶ್ರೀಗಳನ್ನು ಕಣಕ್ಕಿಳಿಸುವ ಬಗ್ಗೆ ನಾನು ಚರ್ಚಿಸಿಲ್ಲ. ನಾಳೆ ನಾಡಿದ್ದರಲ್ಲಿ ಉಳಿದ ಅಭ್ಯರ್ಥಿಗಳ ಹೆಸರು ಪ್ರಕಟ ಆಗಲಿದೆ ಎಂದರು. ಸಂಸದ ಎ.ನಾರಾಯಣಸ್ವಾಮಿಗೆ ಟಿಕೆಟ್ ತಪ್ಪುವ ವಿಚಾರ ಊಹಾಪೋಹ. ಬಿಜೆಪಿ ಅಧಿಕೃತ ಪಟ್ಟಿ ಬಿಡುಗಡೆ ಆದಾಗಲೇ ಅಭ್ಯರ್ಥಿ ಹೆಸರು ಬಹಿರಂಗ ಆಗಲಿದೆ. ಕೆ ಎಸ್ ಈಶ್ವರಪ್ಪ ಬೆಂಬಲಿಗರ ಸಭೆ ಹಾಗೂ ಹಾವೇರಿ, ದಾವಣಗೆರೆಯಲ್ಲಿ ಭಿನ್ನಮತ ವಿಚಾರವಾಗಿ ನಾವು, ವರಿಷ್ಠರು ಅವರ ಜತೆ ಮಾತಾಡಿದ್ದೇವೆ ಶೀಘ್ರವೇ ಎಲ್ಲವೂ ಸರಿ ಹೋಗುತ್ತದೆ ಎಂದು ಹೇಳಿದರು.