ಐವರಿಗೆ ಪೆವಿಲಿಯನ್‌ ʼರೂಟ್‌ʼ ತೋರಿಸಿದ ಬುಮ್ರಾ

0
76

ಲಾರ್ಡ್ಸ್: ಬುಮ್ರಾ ಮತ್ತೆ ಮಾರಕ ದಾಳಿ ಮುಂದುವರಿಸಿದ್ದಾರೆ. ಇಂಗ್ಲೆಂಡ್‌ ವಿರುದ್ಧದ ಮೂರನೇ ಟೆಸ್ಟ್‌ ಪಂದ್ಯದ ಎರಡನೇ ದಿನದಾಟದಲ್ಲಿ ಜಸ್‌ಪ್ರೀತ್ ಬುಮ್ರಾ 5 ವಿಕೆಟ್‌ಗಳನ್ನು ಉರುಳಿಸುವ ಮೂಲಕ ಇಂಗ್ಲೆಂಡ್‌ ತಂಡವನ್ನು 387 ರನ್‌ಗಳಿಗೆ ಆಲೌಟ್‌ ಮಾಡುವಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ.

ಇಂಗ್ಲೆಂಡ್‌ನ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 3ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಮೊದಲ ದಿನದ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 251 ರನ್ ಗಳಿಸಿತ್ತು. ಇಂದು ಆಟ ಮುಂದುವರಿಸಿದ ಆಂಗ್ಲರ ಪಡೆ ಇಂದು ಕೇವಲ 136 ರನ್‌ಗಳಿಗೆ ತನ್ನ ಉಳಿದ 6 ವಿಕೆಟ್‌ಗಳನ್ನು ಕಳೆದುಕೊಂಡಿದೆ.

ಗುರುವಾರ ಒಂದು ವಿಕೆಟ್‌ ಪಡೆದುಕೊಂಡಿದ್ದ ಜಸ್‌ಪ್ರೀತ್ ಬುಮ್ರಾ ಇಂದು ಆರಂಭದಲ್ಲಿ ಸ್ಟೋಕ್ಸ್​ (44) ಅವರನ್ನು ಕ್ಲೀನ್ ಬೋಲ್ಡ್ ಮಾಡಿ ಸಂಭ್ರಮಿಸಿದರು. ಇದರ ಬೆನ್ನಲ್ಲೇ ಶತಕ ಸಿಡಿಸಿದ್ದ ರೂಟ್​ಗೆ ಬುಮ್ರಾ ಬಿಗ್ ಶಾಕ್ ಕೊಟ್ಟರು. ಕ್ರಿಸ್ ವೋಕ್ಸ್ ಕ್ರಿಸ್‌ಗೆ ಬರುತ್ತಿದ್ದಂತೆ ಪೆವಿಲಿಯನ್‌ ಹಾದಿ ತೋರಿಸಿದರು. ಅಲ್ಲದೇ ಜೋಫ್ರಾ ಆರ್ಚರ್ ವಿಕೆಟ್‌ ಉರುಳಿಸುವ ಮೂಲಕ ಬುಮ್ರಾ 5 ವಿಕೆಟ್‌ ಪಡೆದರು.

ಬುಮ್ರಾ ದಾಖಲೆ: ಆಂಗ್ಲರ ನೆಲದಲ್ಲಿ ನಡೆದ ಟೆಸ್ಟ್‌ ಪಂದ್ಯಗಳಲ್ಲಿ ಅತ್ಯಧಿಕ ವಿಕೆಟ್‌ಗಳಿಸಿದ ಭಾರತದ ಶ್ರೇಷ್ಠ ಬೌಲರ್‌ಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಇಶಾಂತ್ ಶರ್ಮಾ ಅವರನ್ನು ಜಸ್‌ಪ್ರೀತ್ ಬುಮ್ರಾ ಸರಿಗಟ್ಟಿದ್ದಾರೆ.

ಭಾರತದ ಶ್ರೇಷ್ಠ ಬೌಲರ್‌ಗಳ ಪಟ್ಟಿಯಲ್ಲಿ ಇದುವರೆಗೆ ಎರಡನೇ ಸ್ಥಾನದಲ್ಲಿದ್ದ ಕಪಿಲ್‌ ದೇವ್‌ 13 ಪಂದ್ಯಗಳಿಂದ 43 ವಿಕೆಟ್ ಪಡೆದಿದ್ದರು. ಬುಮ್ರಾ ಕೇವಲ 11 ಪಂದ್ಯಗಳಲ್ಲಿ 48 ವಿಕೆಟ್ ಪಡೆಯುವ ಮೂಲಕ ಕಪಿಲ್ ದೇವ್ ಅವರನ್ನು ಹಿಂದಿಕ್ಕಿದ್ದಾರೆ. ಅನಿಲ್ ಕುಂಬ್ಳೆ 10 ಪಂದ್ಯಗಳಲ್ಲಿ 36, ಬಿಷನ್ ಸಿಂಗ್ ಬೇಡಿ 12 ಪಂದ್ಯಗಳಲ್ಲಿ 35, ಮೊಹಮ್ಮದ್ ಶಮಿ 12 ಪಂದ್ಯಗಳಿಂದ 34 ವಿಕೆಟ್ ಪಡೆದಿದ್ದಾರೆ.

Previous articleಮೂರುವರೆ ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: 59 ವರ್ಷದ ಅಪರಾಧಿಗೆ ಜೀವಾವಧಿ ಶಿಕ್ಷೆ
Next articleHubballi: ದೇಶದ ಗಮನ ಸೆಳೆದಿದ್ದ ಏಕೈಕ ಪೊಲೀಸ್‌ ಠಾಣೆ ಇನ್ನು ನೆನಪು ಮಾತ್ರ!