ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯ ಬೇಕಿದ್ದ ಮಹಿಳಾ ಏಕದಿನ ಕ್ರಿಕೆಟ್ ವಿಶ್ವಕಪ್ ಪಂದ್ಯಗಳನ್ನು ನವಿ ಮುಂಬೈ ಮತ್ತು ಗುವಾಹಟಿಗೆ ಸ್ಥಳಾಂತರಿಸಲಾಗಿದೆ. ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಶುಕ್ರವಾರ ತಿಳಿಸಿದೆ.
ಸೆಪ್ಟೆಂಬರ್ 30 ರಿಂದ ನೆವೆಂಬರ್ 2ರ ವರೆಗೆ ಪಂಧ್ಯಗಳು ನಡೆಯಲಿದ್ದು. ಉದ್ಘಾಟನೆ ಹಾಗೂ ಫೈನಲ್ ಪಂದ್ಯ ಸೇರಿದಂತೆ ಒಟ್ಟು ಐದು ಪಂದ್ಯಗಳು ಬೆಂಗಳೂರಿನಲ್ಲಿ ನಿಗದಿಯಾಗಿದ್ದವು. ಬೆಂಗಳೂರಿನಲ್ಲಿ ನಿಗದಿಯಾಗಿದ್ದ ಎಲ್ಲ ಪಂದ್ಯಗಳನ್ನು ಬೇರೆ ನಗರಗಳಿಗೆ ಸ್ಥಳಾಂತರಿಸಲಾಗಿದ್ದು ಈ ಕುರಿತಂತೆ ಐಸಿಸಿ ನೂತನ ವೇಳಾ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಐಸಿಸಿ ನೂತನ ವೇಳಾ ಪಟ್ಟಿ: 2025 ರ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ವೇಳಾಪಟ್ಟಿಯ ಪ್ರಕಾರ ಮಹಿಳಾ ವಿಶ್ವಕಪ್‌ನ ಹೊಸ ವೇಳಾಪಟ್ಟಿಯ ಪ್ರಕಾರ ಟೂರ್ನಿಯು ಇದೇ ವರ್ಷ ಸೆಪ್ಟೆಂಬರ್ 30 ರಿಂದ ನೆವೆಂಬರ್ 2 ರ ವರೆಗೆ ನಡೆಯಲಿದೆ. ನವಿ ಮುಂಬೈ ನಲ್ಲಿರುವ ಡಿ.ವೈ. ಪಾಟೀಲ ಕ್ರಿಡಾಂಗಣದಲ್ಲಿ ಐದು ಪಂದ್ಯಗಳು ನಡೆಯಲಿವೆ. ಈ ಪಂದ್ಯಗಳಲ್ಲಿ ಮೂರು ಲೀಗ್ ಪಂದ್ಯಗಳು ಮತ್ತು ಒಂದು ಸೆಮಿಫೈನಲ್ ಸೇರಿವೆ. ಪಾಕಿಸ್ತಾನ ಫೈನಲ್ ತಲುಪದಿದ್ದರೆ, ಪಂದ್ಯಾವಳಿಯ ಫೈನಲ್ ಕೂಡ ಈ ಕ್ರೀಡಾಂಗಣದಲ್ಲಿ ನಡೆಯಲಿದೆ. ನವಿ ಮುಂಬೈ ಜೊತೆಗೆ, ವಿಶ್ವಕಪ್ ಪಂದ್ಯಗಳನ್ನು ಗುವಾಹಟಿಯ ಬರ್ಸಪರ ಕ್ರಿಕೆಟ್ ಸ್ಟೇಡಿಯಂ, ಇಂದೋರ್‌ನ ಹೋಲ್ಕರ್ ಮೈದಾನ, ವಿಶಾಖಪಟ್ಟಣದ ವೈ.ಎಸ್. ರಾಜಶೇಖರ ರೆಡ್ಡಿ ಕ್ರೀಡಾಂಗಣಗಳಲ್ಲಿಯೂ ನಡೆಸಲಾಗುವುದು.
ರೌಂಡ್ ರಾಬಿನ್ ಮಾದರಿಯಲ್ಲಿ ನಡೆಯುವ ಈ ಟೂರ್ನಿಯಲ್ಲಿ 8 ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ. ಫೈನಲ್, ಸೆಮಿಫೈನಲ್ ಸೇರಿದಂತೆ 31 ಪಂದ್ಯಗಳು ನಡೆಯಲಿವೆ. ಸೆಪ್ಟೆಂಬರ್ 30ರಂದು ನಡೆಯಬೇಕಿದ್ದ ಭಾರತ ಹಾಗೂ ಶ್ರೀಲಂಕಾ ನಡುವಣ ಉದ್ಘಾಟನಾ ಪಂದ್ಯ, ಅಕ್ಟೋಬರ್ 3ರಂದು ನಿಗದಿಯಾಗಿದ್ದ ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ಪಂದ್ಯಗಳು ಅದೇ ದಿನಗಳಲ್ಲಿ ಗುವಾಹಟಿಯಲ್ಲಿ ಆಯೋಜನೆಗೊಳ್ಳಲಿವೆ. ಅಕ್ಟೋಬರ್ 26ರಂದು ನಡೆಯುವ ಭಾರತ ಮತ್ತು ಬಾಂಗ್ಲಾದೇಶ ಪಂದ್ಯ ಹಾಗೂ ಅಕ್ಟೋಬರ್ 30 ನಿಗದಿಯಾಗಿರುವ ಎರಡನೇ ಸೆಮಿಫೈನಲ್ ಪಂದ್ಯ ನವಿ ಮುಂಬೈಗೆ ಹೋಗಿವೆ.
