ದುಬೈ: ಹಾಲಿ ಚಾಂಪಿಯನ್ ಭಾರತ ಹ್ಯಾಟ್ರಿಕ್ ಗೆಲುವುಗಳನ್ನು ಸಾಧಿಸಿ ಸೂಪರ್ 4 ಹಂತಕ್ಕೆ ತಲುಪಿರುವುದು ಒಂದೆಡೆಯಾದರೆ, ಸೋಲಿನ ಜೊತೆಗೆ ಹಸ್ತಲಾಘವದಲ್ಲಿ ಮೈ ಪರಚಿಕೊಂಡಿರುವ ಪಾಕಿಸ್ತಾನ ಇನ್ನೊಂದೆಡೆ. ಪಾಕ್ ಆಟಗಾರರ ಮುಖವನ್ನೂ ನೋಡದೇ ಡ್ರೆಸ್ಸಿಂಗ್ ರೂಮಿನ ಬಾಗಿಲು ಮುಚ್ಚಿದ ಭಾರತ ತಂಡದ ಮೇಲೆ ಈಗ ವೈಯಕ್ತಿಕವಾಗಿಯೂ ಸಿಟ್ಟಾಗಿರುವ ಪಾಕ್ ತಂಡ, ಇಂದು ಸೋಲಿನ ರುಚಿ ತೋರಿಸಲು ಪಣತೊಟ್ಟಂತಿದೆ. ಹಾಗಾಗಿ, ಇಂದಿನ ಈ ಸೂಪರ್ 4 ಹಂತದ ಪಂದ್ಯ ಇಡೀ ಏಷ್ಯಾಕಪ್‌ನ ಅತ್ಯಂತ ಪ್ರಮುಖ ಪಂದ್ಯವಾಗಿ ಹೊರಹೊಮ್ಮಿದೆ.
`ಬಿ’ ಗುಂಪಿನ ತಂಡಗಳಾಗಿ ಕಾಣಿಸಿಕೊಂಡಿದ್ದ ಈ ಬದ್ಧವೈರಿಗಳು ಈಗ ಕೇವಲ ಸೋಲು-ಗೆಲುವಿನ ಲೆಕ್ಕಾಚಾರಕ್ಕಷ್ಟೇ ಮೀಸಲಾಗಿಲ್ಲ. ಪಂದ್ಯವನ್ನು ಗೆದ್ದು ಒಬ್ಬರ ಮಾನ ಕಳೆಯುವ ಇರಾದೆಯಲ್ಲೂ ಉಭಯ ತಂಡಗಳಿವೆ. ಹಾಗಾಗಿ, ಈ ಪಂದ್ಯವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಈ ಪಂದ್ಯದ ಮೇಲೆ ಈಗ ಬೆಟ್ಟದಷ್ಟು ನಿರೀಕ್ಷೆಗಳೂ ಹೆಚ್ಚಾಗಿವೆ. ಪಾಕಿಸ್ತಾನಕ್ಕೆ, ಎರಡು ಅಂಕಗಳಿಗಿಂತ ಹೆಚ್ಚಿನ ಮೊತ್ತದ ಅಗತ್ಯವಿದೆ. ಏಕೆಂದರೆ ಅವರು ಮುಜುಗರದ ಸೋಲನ್ನು ಮಾತ್ರವಲ್ಲದೆ ಪಂದ್ಯದ ನಂತರದ ಘಟನೆಗಳನ್ನು ಸಹ ಬದಿಗಿಡಲು ಪ್ರಯತ್ನಿಸುತ್ತಾರೆ. ಶೇಕ್‌ಹ್ಯಾಂಡ್ ವಿವಾದದಿಂದ ಪಾಕ್ ಮಾನ ಹರಾಜಾಗಿದ್ದು, ಅದಕ್ಕೆ ತಿರುಗೇಟು ನೀಡಲು ಪಾಕ್ ಹಪಹಪಿಸುತ್ತಿದೆ.
ಇನ್ನು ಶನಿವಾರ ಭಾರತದ ಪರ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ನಾಯಕ ಸೂರ್ಯಕುಮಾರ್ ಯಾದವ್, ಆರಂಭದಲ್ಲಿ ಪ್ರಶ್ನೆಗಳಿಗೆ ಮೌನ ವಹಿಸಿ ಉತ್ತರ ನೀಡಲಿಲ್ಲ. ನಂತರ ಭಾರತೀಯ ಪತ್ರಕರ್ತರು ಕೇಳಿದ 6-7 ಪ್ರಶ್ನೆಗಳಿಗೆ ಪಾಕಿಸ್ತಾನದ ಹೆಸರನ್ನು ಹೇಳದೇ ಉತ್ತರ ನೀಡಿದರು. ಇಡೀ ಸುದ್ದಿಗೋಷ್ಠಿಯಲ್ಲಿ ಸೂರ್ಯ ಹೆಚ್ಚು ಮಾತಾಡದೇ ಇದ್ದಿದ್ದನ್ನು ಕಂಡು ಪತ್ರಕರ್ತರು ಕೂಡ ಅಚ್ಚರಿಗೆ ಒಳಗಾಗಿದ್ದಾರೆ. ಆದರೆ, ಇಂದಿನ ಪಂದ್ಯದ ಬಗ್ಗೆ ಮಾರ್ಮಿಕವಾಗಿ ನಗುತಲ್ಲೇ ಸೂರ್ಯ ಉತ್ತರಿಸಿದ್ದಾರೆ.
ಬುಮ್ರಾ ವಾಪಸ್: ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಕಾಣಿಸಿಕೊಂಡಿದ್ದ ವೇಗಿ ಜಸ್‌ಪ್ರೀತ್ ಬುಮ್ರಾ, ಕಳೆದ ಓಮನ್ ಪಂದ್ಯದಲ್ಲಿ ವಿಶ್ರಾಂತಿ ಪಡೆದಿದ್ದರು. ಆದರೆ, ಇಂದಿನ ಪಂದ್ಯದಲ್ಲಿ ಬುಮ್ರಾ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದರೆ, ಓಮನ್ ವಿರುದ್ಧ ಆಡಿದ್ದ ಎಡಗೈ ವೇಗಿ ಅರ್ಶ್ದೀಪ್ ಸಿಂಗ್ ಮತ್ತೆ ತಂಡದಿಂದ ಹೊರಗುಳಿಯುವ ಸಾಧ್ಯತೆಗಳಿವೆ. ಸೂರ್ಯಕುಮಾರ್ ಯಾದವ್ ಮುಂದಾಳತ್ವದ ಭಾರತ ತಂಡ ಲೀಗ್ ಹಂತದಲ್ಲಿ ಮೂರು ಪಂದ್ಯಗಳನ್ನು ಗೆದ್ದಿದ್ದು, ಈಗ 4ನೇ ಗೆಲುವಿನ ನಿರೀಕ್ಷೆಯಲ್ಲಿದೆ. ಆದರೆ, ಆಲ್‌ರೌಂಡರ್ ಅಕ್ಷರ್ ಪಟೇಲ್ ಶುಕ್ರವಾರದ ಪಂದ್ಯದಲ್ಲಿ ಆಡುವ ಬಗ್ಗೆ ಖಚಿತಗೊಂಡಿಲ್ಲ.
ರೂಮ್ ಬಾಗಿಲು ಮುಚ್ಚಿ, ಸುಮ್ಮನೆ ಮಲಗಿ; ಸೂರ್ಯ ಸಲಹೆ: ಇಷ್ಟೇ ಅಲ್ಲದೇ, ಸೂರ್ಯಕುಮಾರ್ ಯಾದವ್ ತಂಡದ ಆಟಗಾರರಿಗೆ ಇಂದಿನ ಪಂದ್ಯದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೇ, ಬಾಗಿಲು ಮುಚ್ಚಿ, ಮೊಬೈಲ್ ಸ್ವಿಚ್ ಆಫ್ ಮಾಡಿ, ನೆಮ್ಮದಿಯಾಗಿ ಮಲಗಿ ಎಂದು ಸೂಚಿಸಿದ್ದಾರೆ ಎಂದು ವರದಿಗಳಾಗಿವೆ.
ಪಿಸಿಬಿಗೆ ಮತ್ತೆ ಮುಖಭಂಗ: ಇನ್ನು ಶೇಕ್‌ಹ್ಯಾಂಡ್ ಕುರಿತು ಪಾಕ್ ಖ್ಯಾತೆ ಮುಂದುವರೆಸಿದ್ದು, ಐಸಿಸಿಯಿಂದ ಮುಖಭಂಗ ಅನುಭವಿಸಿದೆ. ಐಸಿಸಿ ಸಿಇಒ ಸಂಜೋಗ್ ಗುಪ್ತಾ ಅವರು ಸಲ್ಮಾನ್ ಅಲಿ ಆಘಾ ಮತ್ತು ಕೋಚ್ ಮೈಕ್ ಹೆಸ್ಸನ್ ಅವರೊಂದಿಗಿನ ಆಂಡಿ ಪೈಕ್ರಾಫ್ಟ್ ಭೇಟಿಯ ಕುರಿತು ಪಿಸಿಬಿಗೆ ಇ-ಮೇಲ್ ಕಳುಹಿಸಿದ್ದು, ಪಿಸಿಬಿಯ ಕೆಲವು ತಪ್ಪು ತಿಳುವಳಿಕೆಯನ್ನು ತೆರವುಗೊಳಿಸಿದ್ದಾರೆ ಎನ್ನಲಾಗಿದೆ. ರೆಫ್ರಿ ಅವರೊಂದಿಗೆ ಸಭೆಯನ್ನು ಪಾಕ್ ತಂಡದ ವ್ಯವಸ್ಥಾಪಕರು ವಿಡಿಯೋ ಚಿತ್ರಿಕರಣ ಮಾಡಿದ್ದು, ಈ ಮೂಲಕ ಐಸಿಸಿ ನಿಯಮಗಳನ್ನು ಉಲ್ಲಂಘಿಸಿದೆ ಎನ್ನಲಾಗಿದೆ.
ಆಂಡಿ ಪ್ರೈಕ್ರಾಫ್ಟ್ ಮತ್ತೆ ರೆಫ್ರಿ: ಸೆಪ್ಟೆಂಬರ್ 14ರಂದು ನಡೆದಿದ್ದ ಇಂಡೋ-ಪಾಕ್ ಪಂದ್ಯದಲ್ಲಿ ರೆಫ್ರಿಯಾಗಿದ್ದ ಆಂಡಿ ಪೈಕ್ರಾಫ್ಟ್ ಇಂದಿನ ಪಂದ್ಯದಲ್ಲೂ ರೆಫ್ರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಗತ ಮುಖಾಮುಖಿಯಲ್ಲಿ ಆಂಡಿ ಪೈಕ್ರಾಫ್ಟ್ನಿಂದಲೇ ಶೇಕ್ ಹ್ಯಾಂಡ್ ವಿವಾದ ಹುಟ್ಟಿಕೊಂಡಿತ್ತು ಎಂದು ಪಾಕ್ ಆರೋಪಿಸಿತ್ತು. ಈ ವಿವಾದದ ಬಳಿಕ ಈಗ ಇದೇ ಆಂಡಿ ಪೈಕ್ರಾಫ್ಟ್ ಅವರನ್ನು ಇಂದಿನ ಪಂದ್ಯದ ರೆಫ್ರಿಯನ್ನಾಗಿ ನೇಮಿಸಲಾಗಿದೆ.
ಪ್ರಶ್ನೆಗಳಿಗೆ ಹೆದರಿ ಸುದ್ದಿಗೋಷ್ಠಿ ರದ್ದುಗೊಳಿಸಿದ ಪಿಸಿಬಿ: ಶನಿವಾರ ದುಬೈ ಸಮಯ ಪ್ರಕಾರ ಸಂಜೆ 6 ಗಂಟೆಗೆ ನಡೆಯಬೇಕಿದ್ದ ಪಂದ್ಯಪೂರ್ವ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಳ್ಳಬೇಕಿತ್ತು. ಆದರೆ, ಪಾಕ್ ತಂಡ ಐಸಿಸಿ ಅಕಾಡೆಮಿಯಲ್ಲಿ ತರಬೇತಿ ಪಡೆಯಲಿದೆ ಎಂದು ತಿಳಿಸುವ ಮೂಲಕ ಸುದ್ದಿಗೋಷ್ಠಿಯಿಂದಲೇ ದೂರ ಉಳಿದುಕೊಂಡಿತು. ಪಂದ್ಯದ ರೆಫ್ರಿ ಆಂಡಿ ಪೈಕ್ರಾಫ್ಟ್ ಹಾಗೂ ಹಸ್ತಲಾಘವ ವಿವಾದದ ಕುರಿತು ಪ್ರಶ್ನೆಗಳನ್ನು ತಪ್ಪಿಸಲು ಪಾಕಿಸ್ತಾನ ಈ ರೀತಿ ಸುದ್ದಿಗೋಷ್ಠಿಯನ್ನು ರದ್ದುಗೊಳಿಸಿದೆ ಎಂದು ತಿಳಿದು ಬಂದಿದೆ.
ಭಾರತ ತಂಡ: ಸೂರ್ಯಕುಮಾರ್ ಯಾದವ್(ನಾಯಕ), ಅಭಿಷೇಕ್ ಶರ್ಮಾ, ಶುಭಮನ್ ಗಿಲ್(ಉಪನಾಯಕ), ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ, ತಿಲಕ್ ವರ್ಮಾ, ಶಿವಂ ದುಬೆ, ಕುಲ್‌ದೀಪ್ ಯಾದವ್, ವರುಣ್ ಚಕ್ರವರ್ತಿ, ಜಸ್‌ಪ್ರೀತ್ ಬುಮ್ರಾ, ಹರ್ಷಿತ್ ರಾಣಾ,
ಹೆಚ್ಚುವರಿ ಆಟಗಾರರು: ಜಿತೇಶ್ ಶರ್ಮಾ(ಮೀಸಲು , ಪರ್), ಅಕ್ಷರ್ ಪಟೇಲ್, ರಿಂಕು ಸಿಂಗ್