ಹಣಕಾಸು ಸಂಸ್ಥೆ ಕಿರುಕುಳ ತಾಳಲಾರದೆ ವಿವಾಹಿತ ಆತ್ಮಹತ್ಯೆ

ಶಿವಮೊಗ್ಗ: ಖಾಸಗಿ ಹಣಕಾಸು ಸಂಸ್ಥೆಗಳು ಹಾಗೂ ಸಾಲಗಾರರ ಕಿರುಕುಳ ತಾಳಲಾರದೆ ವಿವಾಹಿತ ವ್ಯಕ್ತಿಯೋರ್ವ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ನಗರದ ಹೊರವಲಯ ಗಾಡಿಕೊಪ್ಪ ಬಡಾವಣೆಯಲ್ಲಿ ಗುರುವಾರ ನಡೆದಿದೆ.
ವಿನೋದ್ ಕುಮಾರ್ (35) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಎಂದು ಗುರುತಿಸಲಾಗಿದೆ. ಈತ ಪೇಟಿಂಗ್ ಕೆಲಸ ಮಾಡುತ್ತಿದ್ದು, ತಾಯಿ ಹಾಗೂ ಪತ್ನಿಯ ಜೊತೆ ವಾಸಿಸುತ್ತಿದ್ದ. ಈತನಿಗೆ ಒಂದೂವರೆ ವರ್ಷದ ಮಗುವಿದೆ.
ವಿನೋದ್‌ಕುಮಾರ್ ಖಾಸಗಿ ಹಣಕಾಸು ಸಂಸ್ಥೆಗಳು ಹಾಗೂ ಬಡ್ಡಿ ವ್ಯವಹಾರ ನಡೆಸುವ ಖಾಸಗಿ ವ್ಯಕ್ತಿಗಳ ಬಳಿ ಲಕ್ಷಾಂತರ ರೂ. ಸಾಲ ಮಾಡಿಕೊಂಡಿದ್ದ. ಬಡ್ಡಿ ರೂಪದಲ್ಲಿಯೇ ಲಕ್ಷಾಂತರ ರೂ. ಪಾವತಿಸಿದ್ದ ಎನ್ನಲಾಗಿದೆ.
ಇತ್ತೀಚೆಗೆ ಖಾಸಗಿ ಹಣಕಾಸು ಸಂಸ್ಥೆಗಳು ಹಾಗೂ ಬಡ್ಡಿ ವ್ಯವಹಾರ ನಡೆಸುವವರ ಕಾಟ ವಿಪರೀತವಾಗಿತ್ತು. ಮೊಬೈಲ್ ಪೋನ್ ಮೂಲಕ ಹಾಗೂ ಮನೆಗೆ ಆಗಮಿಸಿ, ಸಾಲ ಮರು ಪಾವತಿಸುವಂತೆ ಒತ್ತಡ ಹಾಕುವುದರ ಜೊತೆಗೆ ಬೆದರಿಕೆ ಹಾಕಲಾರಂಭಿಸಿದ್ದರು. ಸಾಲಗಾರರ ಕಾಟದಿಂದ ಬೇಸತ್ತು ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಮೃತನ ತಾಯಿ ಹಾಗೂ ಪತ್ನಿ ಆರೋಪಿಸಿದ್ದಾರೆ. ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.