ಮೋದಿ ವಿಶ್ವ ಕಂಡ ಅಪ್ರತಿಮ ನಾಯಕ

0
10

ಶ್ರೀರಂಗಪಟ್ಟಣ: ರಾಜ್ಯದ ಮಾಜಿ‌ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರಾಜ್ಯಕಂಡ ಪ್ರಮುಖ ಹೋರಾಟಗಾರರಾದರೆ, ದೇಶದ ಪ್ರಧಾನಿ ನರೇಂದ್ರ ಮೋದಿರವರು ವಿಶ್ವಕಂಡ ಅಪ್ರತಿಮ ನಾಯಕರಾಗಿದ್ದಾರೆ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ತಿಳಿಸಿದರು.
ಪಟ್ಟಣದ ಹೊರವಲಯದ ಚಂದವನ ಆಶ್ರಮದಲ್ಲಿ ಶ್ರೀ ಮರಿದೇವರು ಶಿವಯೋಗಿ ಮಹಾಸ್ವಾಮಿಗಳ 130ನೇ ಜಯಂತಿ ಹಾಗೂ ಡಾ. ಶ್ರೀ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮಿಗಳ 25ನೇ ಪಟ್ಟಾಧಿಕಾರ ರಜತ ಮಹೋತ್ಸವದ ಅಂಗವಾಗಿ ಭಾನುವಾರ ಸಂಜೆ ಏರ್ಪಡಿಸಲಾಗಿದ್ದ ಸಮಾರೋಪ‌ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮೋದಿಯವರ ದೇಶ ರಕ್ಷಣೆ, ಯಡಿಯೂರಪ್ಪರವರ ಹೋರಾಟದ ಮನೋಭಾವ ಇವೆರಡೂ ಅಪ್ರತಿಮ ಎಂದು ಬಣ್ಣಿಸಿದರು.
ಅಯೋಧ್ಯೆಯಲ್ಲಿ ಬಾಲರಾಮನ ಮೂರ್ತಿ ಪ್ರತಿಷ್ಠಾಪನೆಯಲ್ಲಿ ಭಾಗವಹಿಸಿದ್ದು ನನಗೆ ಅತ್ಯಂತ ಖುಷಿ ನೀಡಿದ ಸಂದರ್ಭ. ದೇವರು ನನಗೆ ಆಯಸ್ಸು ಕರುಣಿಸಿದರೆ ಮತ್ತೊಮ್ಮೆ ಅಯೋದ್ಯೆಗೆ ತೆರಳಿ ಶ್ರೀ ಬಾಲ ರಾಮನ ದರ್ಶನ ಪಡೆಯುವುದಾಗಿ ಅವರು ತಮ್ಮ ಆಸೆಯನ್ನು ಕಾರ್ಯಕ್ರಮದಲ್ಲಿ ಹೊರ ಹಾಕಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾತನಾಡಿ,‌ ನಾನು ಮುಖ್ಯಮಂತ್ರಿಗಳಾಗಿದ್ದಾಗ ಮಠ ಮಂದಿರಗಳಿಗೆ ಸಾಕಷ್ಟು ಹಣವನ್ನು‌ ಪಕ್ಷಾತೀತವಾಗಿ ಹಾಗೂ ಧರ್ಮಾತೀತವಾಗಿ ಬಿಡುಗಡೆಗೊಳಿಸಿದ್ದೇನೆ. ಮಠ ಮಂದಿರಗಳು ಭಕ್ತರಿಗೆ ಹಾಗೂ ಸಾರ್ವಜನಿಕರಿಗೆ ದಾಸೋಹ,‌ ಶಿಕ್ಷಣ,‌ ಆರೋಗ್ಯ ಸೇರಿದಂತೆ ಧಾರ್ಮಿಕ‌ ಆಚರಣೆಗೆ‌ ಒತ್ತು ನೀಡಬೇಕು. ಹಾಗಾದಲ್ಲಿ ಮಾತ್ರ ನಮ್ಮ ಶ್ರಮ ಸಾರ್ಥಕವಾಗಲಿದೆ ಎಂದರು.
ಮೈಸೂರು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇವೇಗೌಡ,‌ ಮಾಜಿ ಸಚಿವ ಸಿ.ಎಸ್. ಪುಟ್ಟರಾಜು, ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶೀಕೇಂದ್ರದ ಮಹಾಸ್ವಾಮಿಗಳು,‌ ಶ್ರೀ ಆದಿ ಚುಂಚನಗಿರಿ ಮಹಾ ಸಂಸ್ಥಾನದ ಶ್ರೀ ನಿರ್ಮಲಾನಂದ ಮಹಾಸ್ವಾಮಿಗಳು,‌ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಬಿಜೆಪಿ ಯುವ ಮುಖಂಡ ಇಂಡುವಾಳು ಸಚ್ಚಿದಾನಂದ ಸೇರಿದಂತೆ ವಿವಿಧ ಮಠಗಳ ಮಠಾಧೀಶರು, ಆಶ್ರಮದ ಭಕ್ತರು ಸೇರಿದಂತೆ ಸ್ಥಳೀಯ ಮುಖಂಡರುಗಳು ಉಪಸ್ಥಿತರಿದ್ದರು

Previous articleಹಿಂದೂ ವಿರೋಧಿ ನೀತಿ ವಿರುದ್ಧ ಆಕ್ರೋಶ
Next articleಪೋಸ್ಟ್‌ ಕಾರ್ಡ್ ಅಭಿಯಾನಕ್ಕೆ ಚಾಲನೆ