ಮೈಸೂರು: ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಸೇರಿ 7 ಜನರ ಜಾಮೀನು ರದ್ದಾಗುತ್ತಿದ್ದಂತೆ ಪೊಲೀಸರು ಆರೋಪಿಗಳ ಬಂಧನಕ್ಕೆ ಮುಂದಾಗಿದ್ದಾರೆ. ಮೈಸೂರಿನಲ್ಲಿರುವ ಅವರ ಮನೆ, ಫಾರ್ಮ್ ಹೌಸ್‌ನಲ್ಲಿ ಬಳಿ ಪೊಲೀಸರು ಬೀಟ್ ಆರಂಭಿಸಿದ್ದಾರೆ.
ನಟ ದರ್ಶನ್ ಮೈಸೂರಿನ ಮನೆ ಎದುರು ಈಗಾಗಲೇ ಪೊಲೀಸರ ಬೀಟ್ ಶುರುವಾಗಿದೆ. ಆದರೆ ಮನೆ ಗೇಟ್‌ಗೆ ಬೀಗ ಹಾಕಲಾಗಿದ್ದು, ದರ್ಶನ್ ತಾಯಿ ಒಬ್ಬರೆ ಮನೆಯಲ್ಲಿ ಇದ್ದಾರೆ. ಮನೆ ಮುಂಭಾಗದಲ್ಲಿ ಪೊಲೀಸರು ಬೀಟ್ ಆರಂಭಿಸಿದ್ದಾರೆ.
ಜಾಮೀನು ರದ್ದುಗೊಳಿಸಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದು, ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಆದೇಶ ಹೊರಡಿಸಿದೆ. ಇದರ ಬೆನ್ನೆಲ್ಲೇ ನಟ ದರ್ಶನ ಸೇರಿದಂತೆ ಎಲ್ಲ ಆರೋಪಿಗಳ ಬಂಧನಕ್ಕೆ ಪೊಲೀಸರು ಮುಂದಾಗಲಿದ್ದಾರೆ.
ಮೈಸೂರಿನಲ್ಲಿರುವ ದರ್ಶನ ಮನೆ, ಫಾರ್ಮ್ ಹೌಸ್ ಸೇರಿದಂತೆ ಇತರೆ ಸ್ಥಳಗಳಲ್ಲಿ ಪೊಲೀಸರು ಬೀಟ್ ಆರಂಭಿಸಿದ್ದು, ದರ್ಶನ್ ಸದ್ಯ ತಮಿಳುನಾಡಿನಲ್ಲಿ ಇದ್ದಾರೆ. ಸಂಜೆ ವೇಳೆಗೆ ಬೆಂಗಳೂರಿಗೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.
ದರ್ಶನ್ ಮತ್ತೆ ಬಳ್ಳಾರಿ ಜೈಲಿಗೆ: ನಟ ದರ್ಶನ್ ಮೊದಲು ಬಂಧಿತರಾದಾಗ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದರು. ಬಳಿಕ ಜೈಲಿನಲ್ಲಿ ರಾಜಾತಿಥ್ಯ ಪ್ರಕರಣ ಬೆಳಕಿಗೆ ಬಂದು ಕೋರ್ಟ್ ಆದೇಶದಂತೆ ಆರೋಪಿಗಳನ್ನು ಬೇರೆ ಬೇರೆ ಜೈಲಿಗೆ ಕಳಿಸಲಾಗಿತ್ತು. ಆಗ ದರ್ಶನ್ ಬಳ್ಳಾರಿ ಜೈಲು ಪಾಲಾಗಿದ್ದರು. ಈಗ ಮತ್ತೆ ದರ್ಶನ್ ಬಳ್ಳಾರಿ ಸೆಂಟ್ರಲ್ ಜೈಲಿಗೆ ಶಿಫ್ಟ್ ಮಾಡುವ ಸಾಧ್ಯತೆ ಇದೆ. ಈ ಹಿಂದೆ ದರ್ಶನ್ ಬಳ್ಳಾರಿ ಜೈಲಿನಲ್ಲಿ 63 ದಿನಗಳನ್ನು ಕಳೆದ್ದರು. ಅಕ್ಟೋಬರ್ 30 ರಂದು ಬಿಡುಗಡೆಗೊಂಡಿದ್ದರು. ಸದ್ಯ ಮತ್ತೆ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡುವ ಸಾಧ್ಯತೆ ಇದೆ, ಇದಕ್ಕಾಗಿ ಜೈಲಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ಸಿದ್ಧತೆ ನಡೆಸಿದ್ದಾರೆ.
ಕೋರ್ಟ್ ಹೇಳಿದ್ದೇನು?: ಇದೊಂದು ಮಹತ್ವದ ತೀರ್ಪು ಎಂದು ಸುಪ್ರೀಂಕೋರ್ಟ್ ತನ್ನ ಆದೇಶದಲ್ಲಿಯೇ ಹೇಳಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ಎ1 ಪವಿತ್ರಾ ಗೌಡ, ಎ2 ದರ್ಶನ್, ಎ6 ಜಗದೀಶ್, ಎ7 ಅನು ಕುಮಾರ್, ಎ14 ಪ್ರದೋಶ್, ಎ11 ನಾಗರಾಜು ನಾಗ, ಎ12 ಲಕ್ಷ್ಮಣ್ ಜಾಮೀನು ರದ್ದುಗೊಂಡಿದೆ.
ಸರ್ಕಾರ ತನ್ನ ಮೇಲ್ಮನವಿಯಲ್ಲಿ ದರ್ಶನ್‌ಗೆ ಈ ಹಿಂದೆ ಕೂಡ ಅಪರಾಧ ಹಿನ್ನೆಲೆ ಇದೆ. ಬೆನ್ನು ನೋವು ಎಂದು ನ್ಯಾಯಾಲಯಕ್ಕೆ ಹಾಜರಾಗುವುದರಿಂದ ವಿನಾಯಿತಿ ಪಡೆದಿದ್ದಾರೆ. ಆದರೆ ಮರು ದಿನ ಚಿತ್ರ ಪ್ರದರ್ಶನದಲ್ಲಿ ಭಾಗಿಯಾಗಿದ್ದಾರೆ ಎಂದು ಸರ್ಕಾರ ವಾದಿಸಿತ್ತು.