Home ಸಿನಿ ಮಿಲ್ಸ್ Movie Review: ಮೆಡಿಕಲ್ ಮಾಫಿಯಾ ಸುತ್ತಮುತ್ತ

Movie Review: ಮೆಡಿಕಲ್ ಮಾಫಿಯಾ ಸುತ್ತಮುತ್ತ

0

ಚಿತ್ರ: ದಿ ಟಾಸ್ಕ್
ನಿರ್ದೇಶನ: ರಾಘು ಶಿವಮೊಗ್ಗ
ನಿರ್ಮಾಣ: ವಿಜಯ್ ಕುಮಾರ್ ಹಾಗೂ ರಾಮಣ್ಣ
ತಾರಾಗಣ: ಜಯಸೂರ್ಯ, ಸಾಗರ್, ಅಚ್ಯುತ್ ಕುಮಾರ್, ಗೋಪಾಲ್ ಕೃಷ್ಣ ದೇಶಪಾಂಡೆ, ಶ್ರೀಲಕ್ಷ್ಮಿ, ಅರವಿಂದ್ ಕುಪ್ಳೀಕರ್, ಹರಿಣಿ ಶ್ರೀಕಾಂತ್, ಬಾಲಾಜಿ ಮನೋಹರ್ ಮತ್ತಿತರರು.
ರೇಟಿಂಗ್ಸ್: 3

ಜಿ.ಆರ್.ಬಿ

ಕೋವಿಡ್ ಬಳಿಕ ಹೃದಯಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳು ಎದುರಾಗುತ್ತಿರುವ ಕುರಿತು ಮಾಧ್ಯಮಗಳಲ್ಲಿ ಆಗಾಗ ಸುದ್ದಿಯಾಗುತ್ತಿರುತ್ತದೆ. ಕೆಲವರು ಅದರಿಂದ ಗುಣಮುಖರಾದರೆ, ಇನ್ನೂ ಕೆಲವರು ಪ್ರಾಣವನ್ನೇ ತೆತ್ತಿದ್ದಾರೆ. ಇದಕ್ಕೆಲ್ಲ ಮೂಲ ಕಾರಣವೇನು ಎಂಬ ಹುಡುಕಾಟ, ಸಂಶೋಧನೆ ಇನ್ನೂ ಪ್ರಕ್ರಿಯೆಯಲ್ಲಿದೆ. ಆದರೆ ಕೋವಿಡ್ ಬಳಿಕ ಒಂದಷ್ಟು ವೈದ್ಯಕೀಯ ಪ್ರಯೋಗಗಳು ಮನುಷ್ಯರ ಮೇಲೂ ಆಗಿದೆ ಎಂಬ ಎಳೆ ಇಟ್ಟುಕೊಂಡು ತಯಾರಾಗಿರುವ ಸಿನಿಮಾ ದಿ ಟಾಸ್ಕ್.

ಮೆಡಿಕಲ್ ಮಾಫಿಯಾ ಹೇಗೆಲ್ಲ ಕಾರ್ಯ ನಿರ್ವಹಿಸುತ್ತದೆ ಎಂಬುದರ ಆಳ-ಅಗಲ ತೆರೆದಿಡುವುದರ ಜತೆಗೆ, ಸಮಾಜದಲ್ಲಿ ಪ್ರತಿನಿತ್ಯ ನಡೆಯುವ ಕೆಲವು ಲೋಪದೋಷಗಳನ್ನೂ ಹರವಿಟ್ಟಿದ್ದಾರೆ ನಿರ್ದೇಶಕ ರಾಘು ಶಿವಮೊಗ್ಗ. ಹಾಗಂತ ಇದನ್ನು ಸಾಕ್ಷ್ಯಚಿತ್ರದಂತೆ ಚಿತ್ರಿಸದೇ, ಸಾಕ್ಷಿ ಸಮೇತ ‘ವೈಟ್ ಕಾಲರ್ ಕ್ರಿಮಿನಲ್’ಗಳ ಕರ್ಮಕಾಂಡವನ್ನು ದರ್ಶನ ಮಾಡಿಸಿದ್ದಾರೆ. ಇರುವ ವಿಷಯವನ್ನು ನೇರವಾಗಿ ಹೇಳಿಬಿಟ್ಟರೆ ಸಪ್ಪೆ ಎನಿಸಬಹುದೇನೋ ಎಂಬ ನಿಟ್ಟಿನಲ್ಲಿ ಮೂಲಕಥೆಗೆ ಒಗ್ಗಿಕೊಳ್ಳುವಂತೆ ಸಿನಿಮೀಯ ಅಂಶಗಳನ್ನು ಬೆರೆಸಿ, ಕಮರ್ಷಿಯಲ್ ನೆಲೆಗಟ್ಟಿನಲ್ಲಿ ಕಟ್ಟಿಕೊಟ್ಟಿದ್ದಾರೆ.

ಒಂದು ಕುಟುಂಬದಲ್ಲಿ ಯಾರಿಗಾದರೂ ಆರೋಗ್ಯ ಸಮಸ್ಯೆ ಎದುರಾದರೆ ಅವರಿಗೆ ದೇವರಂತೆ ಕಾಣುವುದು ಡಾಕ್ಟರ್. ಆದರೆ ಅವರೇ ಪ್ರಾಣಕ್ಕೆ ಕುತ್ತು ತಂದರೆ ದಿಕ್ಕೇ ತೋಚದಂತಾಗುತ್ತದೆ. ‘ವೈದ್ಯೋ ನಾರಾಯಣ ಹರಿಃ’ ಎಂದು ನಂಬಿಕೊಂಡವರ ಕತ್ತು ಕುಯ್ಯುವ ಕೆಲಸ ಮಾಡುವವರ ಸಿಡಿದೇಳುವ ಇಬ್ಬರು ಯುವಕರು ಒಪ್ಪಿಕೊಂಡ ‘ಟಾಸ್ಕ್’ ಯಾವ ಬಗೆಯಲ್ಲಿ ಮುಗಿಸುತ್ತಾರೆ… ಏನೇನೆಲ್ಲ ಅಡ್ಡಿ-ಆತಂಕಗಳು ಎದುರಾಗುತ್ತವೆ ಎಂಬುದನ್ನು ಈ ಸಿನಿಮಾದಲ್ಲಿ ಹರವಿಡಲಾಗಿದೆ. ಬೆಂಗಳೂರಿನಿಂದ ಶುರುವಾಗುವ ಕಥನ ಮಡಿಕೇರಿ, ಹಾಸನ ಸುತ್ತಮುತ್ತ ಸಾಗುತ್ತದೆ.

ಯುವ ಪ್ರತಿಭೆಗಳಾದ ಜಯಸೂರ್ಯ ಹಾಗೂ ಸಾಗರ್ ಭರವಸೆಯ ನಾಯಕರಾಗಿ ಕಂಗೊಳಿಸಿದ್ದಾರೆ. ಆಕ್ಷನ್ ಸೀಕ್ವೆನ್ಸ್‌ನಲ್ಲಿ ಪೈಪೋಟಿಗೆ ಬಿದ್ದಂತೆ ನಟಿಸಿರುವ ಇಬ್ಬರೂ, ಎಮೋಷನಲ್ ದೃಶ್ಯಗಳಲ್ಲೂ ಅವರ ನಟನೆ ಗಮನಾರ್ಹ. ಇನ್ನು ಅಚ್ಯುತ್ ಕುಮಾರ್, ಗೋಪಾಲ್ ಕೃಷ್ಣ ದೇಶಪಾಂಡೆ, ಶ್ರೀಲಕ್ಷ್ಮಿ, ಅರವಿಂದ್ ಕುಪ್ಳೀಕರ್, ಹರಿಣಿ ಶ್ರೀಕಾಂತ್, ಬಾಲಾಜಿ ಮನೋಹರ್ ಮೊದಲಾದವರು ಪಾತ್ರಕ್ಕೆ ನಟಿಸಿದ್ದಾರೆ. ರಾಘು ಶಿವಮೊಗ್ಗ ಖಳನಾಗಿ ಅಬ್ಬರಿಸಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version