ಕೆಲವೊಮ್ಮೆ ಸಿನಿಮಾದ ಹೆಸರಿಗೂ ಕಥೆಗೂ ಸಂಬಂಧವೇ ಇರುವುದಿಲ್ಲ. ಕೆಲವೊಮ್ಮೆ ರೂಪಕವಾಗಿದ್ದರೂ, ಅದು ಅಷ್ಟಾಗಿ ಸಿನಿಮಾಕ್ಕೆ ಹೊಂದುವಂತೆ ಇರುವುದಿಲ್ಲ. ಆದರೆ ಕೆಲವೊಂದು ಶೀರ್ಷಿಕೆಗಳು ರೂಪಕದಂತಿದ್ದರೂ ಸಿನಿಮಾದ ಜೀವಾಳದಂತೆ ಭಾಸವಾಗುತ್ತದೆ. `ಫುಲ್ ಮೀಲ್ಸ್’ ಕೊನೆಯ ಕ್ಯಾಟಗರಿಗೆ ಸೇರುವ ಸಿನಿಮಾ..!
ಚಿತ್ರಮಂದಿರಗಳಿಗೆ ಬರುವ ಪ್ರೇಕ್ಷಕರಿಗೆ ಮನರಂಜನೆಯ ಸಮೃದ್ಧ ಭೋಜನ ಉಣಬಡಿಸಿ ತೃಪ್ತಿಯಿಂದ ತೇಗಿ ಎದ್ದು ಹೋಗುವಂತೆ ಮಾಡಬೇಕು ಎಂಬುದು ಚಿತ್ರತಂಡದ ಅಜೆಂಡಾ ಎಂಬುದು ಸಿನಿಮಾ ಶುರುವಾದ ಕೆಲವೇ ಹೊತ್ತಿಗೆ ಮನದಟ್ಟಾಗುತ್ತದೆ. ಹೀಗಾಗಿ ಸಿನಿಮಾ ಹೆಸರು `ಫುಲ್ ಮೀಲ್ಸ್’ ಆದರೆ, ನೋಡಿದವರು ಫುಲ್ ಹ್ಯಾಪಿ..!
ಮನರಂಜನೆ ಹೊರತುಪಡಿಸಿ ಬೇರೇನೂ ಬೇಡ… ಎಂಬ ನಿರ್ಧಾರ ತೆಗೆದುಕೊಂಡು ಆ್ಯಕ್ಷನ್ ಕಟ್ ಹೇಳಿದ್ದಾರೆ ಎನ್.ವಿನಾಯಕ. ಅದೇ ಈ ಚಿತ್ರದ ಟ್ರಂಪ್ ಕಾರ್ಡ್. ಹೀಗಾಗಿ ಇಲ್ಲಿ ಲಾಜಿಕ್ ಹುಡುಕದೇ ನಕ್ಕು ಮನ ಹಗುರಾಗಿಸಿಕೊಂಡು ಬರುವ ಮನಸ್ಸು ಮಾಡಬಹುದು.
ಫೋಟೋಗ್ರಾಫರ್ ಆಗಿ ನಟಿಸಿರುವ ಲಿಖಿತ್, ಎರಡು ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಕಥೆಗೆ ತಕ್ಕಂತೆ ಮೇಕ್-ಓವರ್ ಮಾಡಿಕೊಂಡಿರುವ ಅವರು, ನಗಿಸುತ್ತಲೇ ಕೆಲವೊಮ್ಮೆ ಭಾವುಕರನ್ನಾಗಿಸುತ್ತಾರೆ. ದಿಯಾ ಖುಷಿ ಮತ್ತು ತೇಜಸ್ವಿನಿ ಶರ್ಮ ಪೈಪೋಟಿಗೆ ಬಿದ್ದು ನಟಿಸಿದಂತಿದೆ. ವಿಜಯ್ ಚೆಂಡೂರ್, ರಾಜೇಶ್ ನಟರಂಗ, ಸುಜಯ್ ಶಾಸ್ತಿç, ರವಿಶಂಕರ್ ಗೌಡ ಕಾಮಿಡಿಗೆ ಬೂಸ್ಟರ್ ಡೋಸ್‌ನಂತೆ ಕಾರ್ಯ ನಿರ್ವಹಿಸಿದ್ದಾರೆ. ಗುರುಕಿರಣ್ ಸಂಗೀತ ಚಿತ್ರಕ್ಕೆ ಪೂರಕವಾಗಿದೆ.
