ಚಿತ್ರ: ಕಂಗ್ರಾಜುಲೇಷನ್ ಬ್ರದರ್
ನಿರ್ದೇಶನ: ಪ್ರತಾಪ್ ಗಂಧರ್ವ
ನಿರ್ಮಾಣ: ಪ್ರಶಾಂತ್ ಕಲ್ಲೂರು
ತಾರಾಗಣ: ರಕ್ಷಿತ್ ನಾಗ್, ಸಂಜನಾ ದಾಸ್, ಅನುಷಾ ಶಶಿಕುಮಾರ್, ರಘು ರಾಮನಕೊಪ್ಪ ಹಾಗೂ ಚೇತನ್ ದುರ್ಗ ಇತರರು.
ರೇಟಿಂಗ್ಸ್: 3.5
ಗಣೇಶ್ ರಾಣೆಬೆನ್ನೂರು
ಒಂದು ಹುಡುಗ ಒಬ್ಬರನ್ನು ಇಷ್ಟಪಡಬಹುದು. ಅದೇ ಇಬ್ಬರನ್ನು ಇಷ್ಟಪಟ್ಟರೆ ಸಂಭಾಳಿಸುವುದು ತುಸು ಕಷ್ಟಕರ..! ಅದೇ ಇಬ್ಬಿಬ್ಬರು ತರುಣಿಯರು ಒಂದೇ ಹುಡುಗನನ್ನು ಇಷ್ಟಪಟ್ಟರೆ ಆತನ ಪಾಡು ಹೇಗಿರಬೇಡ. ಅದರಲ್ಲೂ ಇಬ್ಬರೂ ಒಬ್ಬನನ್ನೇ ಕಟ್ಟಿಕೊಂಡರೆ ಅವರೊಟ್ಟಿಗೆ ಆತ ಹೇಗೆಲ್ಲ ಏಗಬಹುದು ಎಂಬುದೇ ಕಂಗ್ರಾಜುಲೇಷನ್ ಬ್ರದರ್‌ನ ಕಥೆ-ಚಿತ್ರಕಥೆ. ಇಡೀ ಸಿನಿಮಾ ಒಬ್ಬ ಹುಡುಗ, ಇಬ್ಬರು ಹುಡುಗಿಯರ ನಡುವೆ ನಡೆಯುವ ಕಥನ-ಕದನ.
ಕೊಂಚ ಯಾಮಾರಿದ್ದರೂ ಕಥೆ ಹಳಿ ತಪ್ಪುವ ಸಾಧ್ಯತೆಗಳಿದ್ದವು. ಅದನ್ನು ಅಲ್ಲಲ್ಲಿ ಸರಿಯಾಗಿ ಟ್ರ್ಯಾಕ್‌ಗೆ ತರುವಲ್ಲಿ ನಿರ್ದೇಶಕ ಪ್ರತಾಪ್ ಗಂಧರ್ವ ಮತ್ತು ತಂಡ ಶ್ರಮಿಸಿದೆ. ಅದು ತೆರೆಯ ಮೇಲೆ ಗೋಚರಿಸುತ್ತದೆ. ಇಡೀ ಸಿನಿಮಾವನ್ನು ಮನರಂಜನೆಯ ಪ್ಯಾಕೇಜ್‌ನಂತೆ ಕಟ್ಟಿಕೊಡಲಾಗಿದೆ. ಹೀಗಾಗಿ ಇಲ್ಲಿ ಎಲ್ಲಿ ಪ್ರೇಮ-ಕಾಮ-ಡ್ರಾಮಾ… ಎಲ್ಲವೂ ಉಂಟು. ಕೆಲವೊಮ್ಮೆ ನಿರೀಕ್ಷೆಗೂ ಮೀರಿದ ಅಂಶಗಳು ಗೋಚರಿಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
ಈಗಿನ ಯುವ ಸಮೂಹ ಯಾವ ರೀತಿಯ ಕಥೆಯನ್ನು ಬಯಸುತ್ತದೆ ಎಂಬುದರ ಕುರಿತು ಚಿತ್ರತಂಡ ಒಂದಷ್ಟು ಸಂಶೋಧನೆ ಮಾಡಿದಂತಿದೆ..! ಅದಕ್ಕೋ ಏನೋ ಪ್ರತಿ ಫ್ರೇಮ್‌ನಲ್ಲೂ ಟ್ರೆಂಡಿಯಾಗಿರಬೇಕೆಂದು ಸಾಕಷ್ಟು ಕುಸುರಿ ಕೆಲಸ ಮಾಡಲಾಗಿದೆ. ಇಬ್ಬರ ನಡುವೆ ಒದ್ದಾಡುವ ಹುಡುಗನಾಗಿ ರಕ್ಷಿತ್ ನಾಗ್ ಸಮರ್ಥವಾಗಿ ನಟಿಸಿದ್ದಾರೆ. ಸಂಜನಾ ದಾಸ್ ಹಾಗೂ ಅನುಷಾ ಚಿತ್ರದುದ್ದಕ್ಕೂ ಕಾಟ ಕೊಟ್ಟು ಕೊಟ್ಟೇ ಇಷ್ಟವಾಗುತ್ತಾರೆ. ಒಟ್ಟಾರೆ ಸಿನಿಮಾ ಕೊಟ್ಟ ಕಾಸಿಗೆ ಮೋಸವಿಲ್ಲ ಎನ್ನುವಂತಿದೆ.
