ಯೆಮೆನ್: ಕೇರಳ ಮೂಲದ ನರ್ಸ್ ನಿಮಿಷಾ ಪ್ರಿಯಾಗೆ ಯೆಮೆನ್‌ನಲ್ಲಿ ಮರಣದಂಡನೆ ಶಿಕ್ಷೆಗೆ ಆದೇಶ ನೀಡಲಾಗಿದೆ. ಯೆಮೆನ್ ಪ್ರಜೆಯ ಕೊಲೆ ಪ್ರಕರಣದಲ್ಲಿ ಅವರು ಅಪರಾಧಿಯಾಗಿದ್ದು, ಜುಲೈ 16ರಂದು ನೇಣು ಹಾಕಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.
ಯೆಮೆನ್ ಪ್ರಜೆ ತಲಾಲ್ ಅಬ್ದೋ ಮಹ್ದಿ ಅವರ ಕೊಲೆ ಪ್ರಕರಣದಲ್ಲಿ ನಿಮಿಷಾ ಪ್ರಿಯಾ ಅಪರಾಧಿ. ಕೇರಳ ಮೂಲದ ಅವರು 2008ರಲ್ಲಿ ಯೆಮೆನ್‌ಗೆ ತೆರಳಿದ್ದರು. 2015ರಲ್ಲಿ ಅಲ್ಲಿಯೇ ಕ್ಲಿನಿಕ್ ತೆರೆದಿದ್ದರು.
ಅಬ್ದೋ ಮಹ್ದಿ ಮತ್ತು ನಿಮಿಷಾ ಪ್ರಿಯಾ ಯೆಮೆನ್‌ನಲ್ಲಿ ಜಂಟಿಯಾಗಿ ಕ್ಲಿನಿಕ್ ತೆರೆದಿದ್ದರು. ತಲಾಲ್ ಅವರ ಪಾಸ್‌ಪೋರ್ಟ್ ಅನ್ನು ಮರಳಿ ಪಡೆಯಲು ನಿಮಿಷಾ ಅವರು ತಲಾಲ್‌ಗೆ ಡ್ರಗ್ ನೀಡಿ ಹತ್ಯೆ ಮಾಡಿದ್ದಾರೆ ಎಂಬದು ಆರೋಪವಾಗಿತ್ತು. ಅತಿಯಾದ ಮಾದಕವಸ್ತುವಿನ ಸೇವನೆಯಿಂದ ತಲಾಲ್ ಸಾವನ್ನಪ್ಪಿರುವುದು ತನಿಖೆಯಿಂದ ಸಾಬೀತಾಗಿತ್ತು.
ತಲಾಲ್ ಅಬ್ದೋ ಮಹ್ದಿ ಹತ್ಯೆಯ ಬಳಿಕ ನಿಮಿಷಾ ಸಹೋದ್ಯೋಗಿ ಹನಾನ್ ಜೊತೆ ಸೇರಿ ತಲಾಲ್ ದೇಹವನ್ನು ತುಂಡು ತುಂಡು ಮಾಡಿ ನೀರಿನ ಟ್ಯಾಂಕ್‌ನಲ್ಲಿ ವಿಲೇವಾರಿ ಮಾಡಿದ್ದಾರೆ ಎಂಬುದು ಆರೋಪವಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಸ್ಥಳೀಯ ಕೋರ್ಟ್ ಆರೋಪ ಸಾಬೀತಾದ ಹಿನ್ನಲೆಯಲ್ಲಿ ನಿಮಿಷಾಗೆ ಗಲ್ಲು ಶಿಕ್ಷೆಯನ್ನು ವಿಧಿಸಿತ್ತು.
ನಿಮಿಷಾ ಪ್ರಿಯಾ ಅವರ ತಾಯಿಗೆ ಈಗಾಗಲೇ ಮರಣದಂಡನೆ ದಿನಾಂಕದ ಕುರಿತು ಯೆಮೆನ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. 2017ರಲ್ಲಿ ನಡೆದಿದ್ದ ತಲಾಲ್ ಹತ್ಯೆ ಪ್ರಕರಣದ ಸಂಬಂಧ ನಿಮಿಷಾ ಪ್ರಿಯ ಬಂಧಿಸಲಾಗಿತ್ತು. 2020ರಲ್ಲಿ ಸ್ಥಳೀಯ ಕೋರ್ಟ್ ಪ್ರಕರಣದಲ್ಲಿ ಮರಣದಂಡನೆಯನ್ನು ವಿಧಿಸಿ ಆದೇಶಿಸಿತ್ತು.
ನಿಮಿಷಾ ಪ್ರಿಯ ಹಿನ್ನಲೆ: ನಿಮಿಷಾ ಪ್ರಿಯಾ ಮೂಲತಃ ಕೇರಳ ರಾಜ್ಯದ ಪಾಲಕ್ಕಾಡ್‌ನವರು. ನರ್ಸಿಂಗ್ ತರಬೇತಿಯನ್ನು ಪೂರ್ಣಗೊಳಿಸಿದ ನಂತರ ಅವರು ಕೂಲಿ ಕೆಲಸ ಮಾಡುವ ಪೋಷಕರಿಗೆ ಸಹಕಾರ ನೀಡಲು 2011ರಲ್ಲಿ ಯೆಮೆನ್‌ಗೆ ತೆರಳಿ ಕೆಲಸಕ್ಕೆ ಸೇರಿದ್ದರು.
ಯೆಮೆನ್ ಕಾನೂನಿನ ಪ್ರಕಾರವೇ ಅವರು ಒಪ್ಪಂದನ್ನು ಮಾಡಿಕೊಂಡು ತಲಾಲ್ ಅಬ್ದೋ ಮಹ್ದಿ ಜೊತೆ ಕ್ಲಿನಿಕ್ ತೆರೆದಿದ್ದರು. ಆದರೆ ಅವರ ನಡುವೆ ಭಿನ್ನಾಭಿಪ್ರಾಯಗಳು ಹುಟ್ಟಿಕೊಂಡಿದ್ದವು. ತಲಾಲ್ ತನಗೆ ಚಿತ್ರಹಿಂಸೆ ನೀಡುತ್ತಿದ್ದಾರೆ ಎಂದು ನಿಮಿಷಾ ಆರೋಪ ಮಾಡಿದ್ದರು.
ತಲಾಲ್ ನಿಮಿಷಾ ಯೆಮೆನ್ ಬಿಟ್ಟು ಹೋಗದಂತೆ ತಡೆಯಲು ಪಾಸ್‌ಪೋರ್ಟ ಅನ್ನು ತಲಾಲ್ ಕಸಿದುಕೊಡಿದ್ದರು ಎಂಬ ಆರೋಪವಿತ್ತು. 2016ರಲ್ಲಿ ತಲಾಲ್ ವಿರುದ್ಧ ನಿಮಿಷಾ ದೂರು ನೀಡಿದ್ದರು. ಆಗ ಅವರನ್ನು ಪೊಲೀಸರು ಬಂಧಿಸಿದ್ದರು. ಬಿಡುಗಡೆ ಬಳಿಕ ಇಬ್ಬರ ನಡುವಿನ ಭಿನ್ನಾಭಿಪ್ರಾಯ ಇನ್ನಷ್ಟು ಹೆಚ್ಚಾಗಿತ್ತು. ಬಳಿಕ ಕೊಲೆ ನಡೆದಿತ್ತು.
ನಿಮಿಷಾ ಪ್ರಿಯಾಗೆ ಮರಣದಂಡನೆ ವಿಧಿಸಿದ ಕೋರ್ಟ್ ಆದೇಶವನ್ನು ಪ್ರಶ್ನೆ ಮಾಡಿ ನಿಮಿಷಾ ತಾಯಿ ಅಲ್ಲಿನ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಆದರೆ ಈ ಮೇಲ್ಮನವಿಯನ್ನು ಕೋರ್ಟ್ ವಜಾಗೊಳಿಸಿತ್ತು. ಮರಣದಂಡನೆ ಶಿಕ್ಷೆಯನ್ನು ಎತ್ತಿ ಹಿಡಿದಿತ್ತು.