ಥೈಲ್ಯಾಂಡ್: ವಿಶ್ವದ ಅತಿದೊಡ್ಡ ಸೌಂದರ್ಯ ಸ್ಪರ್ಧೆಯಾದ ಮಿಸ್ ಯುನಿವರ್ಸ್ 2025 ವೇದಿಕೆ ಈ ವರ್ಷ ಭಾವನಾತ್ಮಕ ಕ್ಷಣಗಳು ಹಾಗೂ ಸಂಭ್ರಮಭರಿತ ಪೈಪೋಟಿಯ ಕಣವಾಗಿ ಮೆರೆಯಿತು. 120 ರಾಷ್ಟ್ರಗಳಿಂದ ಬಂದ ವಿಶ್ವದ ಅತ್ಯಂತ ಪ್ರತಿಭಾಶಾಲಿ ಸ್ಪರ್ಧಿಗಳ ನಡುವೆ ನಡೆದ ಕಠಿಣ ಸ್ಪರ್ಧೆಯಲ್ಲಿ ಮೆಕ್ಸಿಕೋದ ಫಾತಿಮಾ ಬಾಷ್ ಕಿರೀಟ ಮುಡಿಗೇರಿಸಿಕೊಂಡು ವಿಶ್ವ ಸುಂದರಿಯ ಬಿರುದು ಗಳಿಸಿದರು.
ಬ್ಯಾಂಕಾಕ್‌ನಲ್ಲಿ ಆಯೋಜನೆಯಾದ ಈ 74ನೇ ಆವೃತ್ತಿಯ ಮಿಸ್ ಯುನಿವರ್ಸ್ ಸ್ಪರ್ಧೆಯಲ್ಲಿ ಅನೇಕ ಭಾವನಾತ್ಮಕ ಕ್ಷಣಗಳು ಜರುಗಿದ್ದು, ಭಾರತದ ಪರವಾಗಿ ಸ್ಪರ್ಧಿಸಿದ ಮಣಿಕಾ ವಿಶ್ವಕರ್ಮ ಅತ್ಯುತ್ತಮ ಪ್ರದರ್ಶನ ನೀಡಿದರು. ಆರಂಭದಲ್ಲಿ Top 30, ನಂತರ Top 12 ಗೆ ಸ್ಥಾನ ಪಡೆದ ಮಣಿಕಾ, ಅಂತಿಮ ಹಂತ ತಲುಪಿಯೂ ಕಿರೀಟವನ್ನು ತಪ್ಪಿಸಿಕೊಂಡರು. ಆದರೂ ಅವರ ಪ್ರದರ್ಶನ ಭಾರತಕ್ಕೆ ಹೆಮ್ಮೆಯ ವಿಷಯವಾಗಿದೆ.
ಅಂತಿಮ ಪ್ರಶ್ನೆ — ಸ್ಪರ್ಧೆಯ ಟರ್ನಿಂಗ್ ಪಾಯಿಂಟ್: ಫೈನಲ್ ರೌಂಡ್‌ನಲ್ಲಿ ಉಳಿದ ಸ್ಪರ್ಧಿಗಳಿಗೆ ಒಂದೇ ಸಾಮಾನ್ಯ ಪ್ರಶ್ನೆಯನ್ನು ಕೇಳಲಾಯಿತು “ನೀವು ಇಂದು ರಾತ್ರಿ ಮಿಸ್ ಯುನಿವರ್ಸ್ 2025 ಪ್ರಶಸ್ತಿಯನ್ನು ಗೆದ್ದರೆ, ಯುವತಿಯರನ್ನು ಸಬಲೀಕರಣಗೊಳಿಸಲು ಈ ವೇದಿಕೆಯನ್ನು ಹೇಗೆ ಬಳಸುತ್ತೀರಿ?” ಎಂಬ ಪ್ರಶ್ನೆಗೆ ಮೆಕ್ಸಿಕೋದ ಫಾತಿಮಾ ಬಾಷ್ ತಮ್ಮ ಸ್ಪಷ್ಟ, ಭಾವನಾತ್ಮಕ ಹಾಗೂ ಆತ್ಮವಿಶ್ವಾಸದ ಉತ್ತರದಿಂದ ವೇದಿಕೆಯಲ್ಲಿದ್ದ ನ್ಯಾಯಾಧೀಶರು ಮತ್ತು ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿ ಮಾಡಿದರು.
“ನಿಮ್ಮ ಕನಸು ಮತ್ತು ನಿಮ್ಮ ಹೃದಯದ ಧ್ವನಿಯ ಬಗ್ಗೆ ನಂಬಿಕೆ ಇರಲಿ. ಯಾರೇ ಅನುಮಾನಿಸಿದರೂ, ನಿಮ್ಮ ಮೌಲ್ಯವನ್ನು ನೀವು ಮರೆಯಬೇಡಿ. ಪ್ರತಿ ಹುಡುಗಿ ತನ್ನೊಳಗೆ ವಿಶ್ವವನ್ನು ಬದಲಿಸುವ ಶಕ್ತಿ ಹೊಂದಿದ್ದಾಳೆ.” ಎಂಬ ಅವರ ದಿಟ್ಟ ಉತ್ತರವೇ ಫಾತಿಮಾಳಿಗೆ ಕಿರೀಟವನ್ನು ಗೆಲ್ಲುವ ಪ್ರಮುಖ ಕಾರಣವಾಗಿತ್ತು.
ವೇದಿಕೆಯಲ್ಲಿ ಸಂಭ್ರಮದ ಕ್ಷಣ: ಕಳೆದ ವರ್ಷಗಳ ವಿವಾದಗಳ ನಂತರ ಈ ಬಾರಿ ನಡೆದ ಸ್ಪರ್ಧೆ ಅತ್ಯಂತ ಉತ್ಸಾಹಕರ ಹಾಗೂ ನ್ಯಾಯಪೂರ್ಣವಾಗಿ ನಡೆದಿದ್ದು, ಫಾತಿಮಾ ವಿಜೇತೆ ಎಂಬುದು ಘೋಷಿಸಿದ ಕ್ಷಣವೇ ವಿಶ್ವದ ವಿವಿಧ ದೇಶಗಳಿಂದ ಬಂದ ಸ್ಪರ್ಧಿಗಳು ಸಂತೋಷದಿಂದ ಅವರನ್ನು ತಬ್ಬಿಕೊಂಡರು. ಹಿಂದಿನ ಮಿಸ್ ಯುನಿವರ್ಸ್ ಆಗಿದ್ದ ಡೆನ್ಮಾರ್ಕ್‌ನ ವಿಕ್ಟೋರಿಯಾ ಥೀಲ್ವಿಗ್, ಹೊಸ ಮಿಸ್ ಯುನಿವರ್ಸ್ ಫಾತಿಮಾಳಿಗೆ ಕಿರೀಟವನ್ನು ಮುಡಿಗೇರಿಸಿದರು.
