ಇಸ್ಲಾಮಾಬಾದ್: `ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಇನ್ನಿಲ್ಲ, ಅವರನ್ನು ಪಾಕ್ ಸೇನೆಯೇ ಕಾರಾಗೃಹದಲ್ಲಿ ಹತ್ಯೆ ಮಾಡಿದೆ..’ ಹೀಗೊಂದು ಸುದ್ದಿ ಬುಧವಾರ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ ನಲ್ಲಿತ್ತು. ಜತೆಗೆ ದೇಶ-ವಿದೇಶಗಳ ಹಲವಾರು ಸುದ್ದಿ ಸಂಸ್ಥೆಗಳೂ ಇದನ್ನು ವರದಿ ಮಾಡಿವೆ.
ಬಲೂಚಿ ಸ್ತಾನ ವಿದೇಶಾಂಗ ಇಲಾಖೆ ಹೆಸರಿನಲ್ಲಿರುವ ಎಕ್ಸ್ ಖಾತೆಯಲ್ಲಿ ಈ ಸುದ್ದಿ ಮೊದಲು ಹೊರಬಿದ್ದಿದ್ದು ಇಮ್ರಾನ್ ಖಾನ್ ಪ್ರಜ್ಞಾಹೀನರಾಗಿ ಬಿದ್ದಿರುವ ಚಿತ್ರವನ್ನೂ ಅದರಲ್ಲಿ ಪೋಸ್ಟ್ ಮಾಡಲಾಗಿದೆ. ಆದರೆ ಈ ಖಾತೆ ಮತ್ತು ಅದರಲ್ಲಿರುವ ಸುದ್ದಿ ಮತ್ತು ಫೋಟೋ ಸತ್ಯವೇ ಎನ್ನುವುದನ್ನು ಯಾರೂ ಖಚಿತಪಡಿಸಿಲ್ಲ.
ಅಫ್ಘಾನಿಸ್ತಾನದ ಪ್ರತಿಷ್ಠಿತ ಮಾಧ್ಯಮ ಸಂಸ್ಥೆ ಅಫ್ಘಾನಿಸ್ತಾನ ಟೈಮ್ಸ್' ಕೂಡ ಈ ಬಗ್ಗೆ ವರದಿ ಮಾಡಿದೆ.ವಿಶ್ವಾಸಾರ್ಹ ಮೂಲಗಳಿಂದ ಇಮ್ರಾನ್ ಖಾನ್ ಪಾಕ್ ಜೈಲಿನಲ್ಲಿ ಹತ್ಯೆಗೀಡಾಗಿರುವ ಬಗ್ಗೆ ಹಾಗೂ ಅವರ ದೇಹವನ್ನು ಈಗಾಗಲೇ ಜೈಲಿನಿಂದ ಹೊರಗೆ ಸಾಗಿಸಿರುವ ಬಗ್ಗೆ ನಮಗೆ ಮಾಹಿತಿ ಸಿಕ್ಕಿದೆ’ ಎಂದು ಅಫ್ಘಾನಿಸ್ತಾನ್ ಟೈಮ್ಸ್ ಹೇಳಿದೆ. ಈ ಬಗ್ಗೆ ಪಾಕಿಸ್ತಾನ ಇನ್ನೂ ಯಾವ ಸ್ಪಷ್ಟನೆಯನ್ನೂ ಕೊಟ್ಟಿಲ್ಲ.
ಆದರೆ ಅದಾಗಲೇ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಂಧಿಸಿಟ್ಟಿರುವ ರಾವಲ್ಪಿಂಡಿಯ ಅಡಿಯಾಲ ಜೈಲಿನ ಹೊರಗೆ ತೆಹ್ರಿಕ್-ಇ-ಇನ್‌ಸಾಫ್ (ಇಮ್ರಾನ್ ಪಕ್ಷ) ಪಾರ್ಟಿಯ ಬೆಂಬಲಿಗರು ಭಾರಿ ಪ್ರಮಾಣದಲ್ಲಿ ಸೇರಿ ದೊಡ್ಡ ಪ್ರತಿಭಟನೆ ನಡೆಸಿದರು ಹಾಗೂ ತಮ್ಮ ನಾಯಕನ ಕುರಿತು ಮಾಹಿತಿ ನೀಡುವಂತೆ ಪಾಕ್ ಸರ್ಕಾರ ಮತ್ತು ಅಲ್ಲಿನ ಜೈಲು ಅಧಿಕಾರಿಗಳಿಗೆ ಆಗ್ರಹಿಸಿದರು. ಇಮ್ರಾನ್ ಸಹೋದರಿಯರೂ ರಾತ್ರಿಯಿಡೀ ಜೈಲಿನ ಎದುರು ಕುಳಿತು ಸಹೋದರನ ಭೇಟಿಗೆ ಅವಕಾಶ ಮಾಡಿಕೊಂಡುವಂತೆ ಕೋರಿದರು. ಇದ್ಯಾವುದಕ್ಕೂ ಪೊಲೀಸರು, ಜೈಲಧಿಕಾರಿಗಳು ಕಿವಿಗೊಡದಿದ್ದಾಗ ಅಶಾಂತಿಯ ವಾತವಾರಣ ಸೃಷ್ಟಿಯಾಗಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ಆದರೆ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಪಾಕಿಸ್ತಾನ, ಇಮ್ರಾನ್ ಖಾನ್ ಜೈಲಿನಲ್ಲಿದ್ದು, ಅವರ ಸಾವಿನ ಸುದ್ದಿಗಳೆಲ್ಲ ಸುಳ್ಳು ಎಂದು ಹೇಳಿದೆ.
