Home ಸುದ್ದಿ ರಾಜ್ಯ ಧರ್ಮದ ಕಾಲಂನಲ್ಲಿ ವೀರಶೈವ ಲಿಂಗಾಯತ ಬರೆಸಲು ಸಚಿವ ಈಶ್ವರ ಖಂಡ್ರೆ ಮನವಿ

ಧರ್ಮದ ಕಾಲಂನಲ್ಲಿ ವೀರಶೈವ ಲಿಂಗಾಯತ ಬರೆಸಲು ಸಚಿವ ಈಶ್ವರ ಖಂಡ್ರೆ ಮನವಿ

0

ಬೆಂಗಳೂರು: ರಾಜ್ಯಾದ್ಯಂತ ಸೆ.22ರಿಂದ ಆರಂಭವಾಗಲಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ಧರ್ಮದ ಕಾಲಂನಲ್ಲಿರುವ ಇತರೆ ಕಾಲಂನಲ್ಲಿ ವೀರಶೈವ-ಲಿಂಗಾಯತ ಎಂದು ಬರೆಸುವಂತೆ, ಸಮಾಜದ ಬಾಂಧವರಿಗೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮನವಿ ಮಾಡಿದೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅರಣ್ಯ ಸಚಿವ ಈಶ್ವರ ಬಿ ಖಂಡ್ರೆ, ಹಿಂದಿನಿಂದಲೂ ಮಹಾಸಭಾ ವೀರಶೈವ ಲಿಂಗಾಯತ ಧರ್ಮದ ಪ್ರತಿಪಾದನೆ ಮಾಡುತ್ತಾ ಬಂದಿದೆ. ಹೀಗಾಗಿ ಧರ್ಮದ ಕಾಲಂನ ಇತರೆ ಕಾಲಂನಲ್ಲಿ ವೀರಶೈವ ಲಿಂಗಾಯತ ಎಂದು ಬರೆಸಬೇಕು ಎಂಬುದು ಸಾರ್ವತ್ರಿಕ ಅಭಿಪ್ರಾಯವಾಗಿದೆ ಎಂದರು.

ಉಳಿದಂತೆ ಜಾತಿಯ ಕಾಲಂನಲ್ಲಿ ವೀರಶೈವ ಅಥವಾ ಲಿಂಗಾಯತ ಎಂದು ಬರೆಸುವಂತೆ ಹಾಗೂ ಉಪ ಜಾತಿಯ ಕಾಲಂನಲ್ಲಿರುವ ತಮ್ಮ ತಮ್ಮ ಉಪಜಾತಿ ಹೆಸರು ಬರೆಸುವಂತೆ ಮನವಿ ಮಾಡಿದರು. ಸರ್ಕಾರಕ್ಕೆ ನಾಡಿನ ಜನರ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಯ ನಿಖರ ಮಾಹಿತಿ ದೊರೆತರೆ, ನಾಡಿನ ಜನರೆಲ್ಲರ ಕಲ್ಯಾಣಕ್ಕೆ ಕಾರ್ಯಕ್ರಮ ರೂಪಿಸಲು ಅನುವಾಗುತ್ತದೆ. ಹೀಗಾಗಿ ಪ್ರತಿಯೊಬ್ಬರೂ ಈ ಸಮೀಕ್ಷೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ಶಂಕರ ಮಹದೇವ್ ಬಿದರಿ ಮಾತನಾಡಿ, ಶೈಕ್ಷಣಿಕ ಮತ್ತು ಸಾಮಾಜಿಕ ಸ್ಥಿತಿ ಗತಿಯ ಸಮೀಕ್ಷೆ ಆಧಾರದಲ್ಲಿ ಸಮುದಾಯದ ಹಿಂದುಳಿದಿರುವಿಕೆ ಗುರುತಿಸಿ ಅವರಿಗೆ ಸೌಲಭ್ಯ ಕಲ್ಪಿಸುತ್ತದೆ. ಈ ಹಿಂದಿನ ಸಮೀಕ್ಷೆಗಳಲ್ಲಿ ವೀರಶೈವ ಮತ್ತು ಲಿಂಗಾಯತರನ್ನು ಒಂದು ಜಾತಿ ಎಂದು ಪರಿಗಣಿಸಲಾಗಿದೆ. ಪ್ರತ್ಯೇಕ ಧರ್ಮದ ಮಾನ್ಯತೆಯನ್ನು ಅಧಿಕೃತವಾಗಿ ನೀಡಿಲ್ಲ. ಅದನ್ನು ಪರಿಗಣಿಸುವ ಅಗತ್ಯವಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಮಹಾಸಭಾದ ಕಾರ್ಯದರ್ಶಿ ರೇಣುಕ ಪ್ರಸನ್ನ ಮತ್ತು ಮಹಾಸಭಾದ ಮಹಿಳಾ ಘಟಕದ ಅಧ್ಯಕ್ಷೆ ವೀಣಾ ಕಾಶೆಪ್ಪನವರ್ ಪಾಲ್ಗೊಂಡಿದ್ದರು.

NO COMMENTS

LEAVE A REPLY

Please enter your comment!
Please enter your name here

Exit mobile version