ಬೆಂಗಳೂರು: ಗ್ರಾಮಗಳ ಸಮಗ್ರ ಅಭಿವೃದ್ಧಿ ಮತ್ತು ಯೋಜಿತ ಬಡಾವಣೆಗಳ ನಿರ್ಮಾಣಕ್ಕೆ ಸಹಕಾರಿಯಾಗುವ ಮತ್ತೊಂದು ಮಹತ್ವದ ತೀರ್ಮಾನವನ್ನು ರಾಜ್ಯ ಸರ್ಕಾರ ಕೈಗೊಂಡಿದೆ. ಕರ್ನಾಟಕ ಮಾಹಿತಿ ತಂತ್ರಜ್ಞಾನ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಣೆ ನೀಡಿದ್ದು, ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಸ್ಥಳೀಯ ಯೋಜನಾ ಪ್ರದೇಶವನ್ನು ಹೊರತುಪಡಿಸಿದ ಪ್ರದೇಶಗಳಲ್ಲಿ ಭೂಪರಿವರ್ತಿತ ಜಮೀನುಗಳಲ್ಲಿ ಬಡಾವಣೆ ನಿರ್ಮಾಣಕ್ಕೆ ನೂತನ ನಿಯಮಾವಳಿ ಸುತ್ತೋಲೆ ಹೊರಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಬಡಾವಣೆ ನಿರ್ಮಾಣಕ್ಕೆ ನೂತನ ಪ್ರಕ್ರಿಯೆ: ಹೊಸ ನಿಯಮಗಳ ಪ್ರಕಾರ, ಅಭಿವೃದ್ಧಿದಾರರು (Developers) ಗ್ರಾಮ ಪಂಚಾಯತಿಗೆ ನಮೂನೆ-1 ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬೇಕು. ಈ ಅರ್ಜಿಯನ್ನು ಸಂಬಂಧಿಸಿದ ಯೋಜನಾ ಪ್ರಾಧಿಕಾರದಿಂದ ಪೂರ್ವಾನುಮೋದನೆ ಪಡೆದ ನಂತರ ಮಾತ್ರ ಬಡಾವಣೆ ನಿರ್ಮಾಣ ಪ್ರಾರಂಭಿಸಬಹುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ಅಧಿನಿಯಮ, 2025 ರ ಪ್ರಕರಣ 199(ಬಿ) ಅಡಿ ಈ ನಿಯಮ ಜಾರಿಗೆ ಬಂದಿದೆ.
ಸಾರ್ವಜನಿಕ ಸೌಲಭ್ಯ ಪ್ರದೇಶಗಳ ಹಸ್ತಾಂತರ ಕಡ್ಡಾಯ: ಬಡಾವಣೆಯ ವಿನ್ಯಾಸ ನಕ್ಷೆಯ ಪ್ರಕಾರ ರಸ್ತೆ, ಪಾರ್ಕ್, ನಾಗರೀಕ ಸೌಲಭ್ಯ, ಸಾರ್ವಜನಿಕ ಬಳಕೆಯ ಪ್ರದೇಶಗಳು ಮುಂತಾದವುಗಳಿಗೆ ಮೀಸಲಾದ ಭೂಭಾಗವನ್ನು ಗ್ರಾಮ ಪಂಚಾಯತಿಗೆ ಉಚಿತವಾಗಿ ನೋಂದಾಯಿತ ಪರಿತ್ಯಾಜನ ಪತ್ರದ ಮೂಲಕ ವರ್ಗಾಯಿಸುವುದು ಕಡ್ಡಾಯ. ಈ ಕ್ರಮ ಗ್ರಾಮಗಳ ಯೋಜಿತ ವಿಕಸನ ಮತ್ತು ಸಾರ್ವಜನಿಕ ಸೌಲಭ್ಯಗಳ ಲಭ್ಯತೆಗೆ ಸಹಕಾರಿಯಾಗಲಿದೆ.
ತಾಂತ್ರಿಕ ಅನುಮೋದನೆ ಮತ್ತು ಅಭಿವೃದ್ಧಿ ಕಾರ್ಯಗಳ ನಿಗಾವಹಣೆ: ಅನುಮೋದಿತ ಬಡಾವಣೆಯಲ್ಲಿನ ಅಭಿವೃದ್ಧಿ ಕಾರ್ಯಗಳು ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಎಸ್ಕಾಂ ಹಾಗೂ ಇತರೆ ಇಲಾಖೆಗಳ ನಿಯಮಾವಳಿಯ ಪ್ರಕಾರ ಜಾರಿಯಾಗಬೇಕು. ಗ್ರಾಮ ಪಂಚಾಯತಿಗಳು ತಮ್ಮ ವ್ಯಾಪ್ತಿಯಲ್ಲಿನ ಎಲ್ಲಾ ದಾಖಲೆಗಳನ್ನು ಸಂಗ್ರಹಿಸಿ, ತೆರಿಗೆ ವ್ಯಾಪ್ತಿಗೆ ಒಳಪಡಿಸುವ ಕ್ರಮ ಕೈಗೊಳ್ಳಬೇಕು.
ಗ್ರಾಮೀಣ ಯೋಜಿತ ವಿಕಸನದ ಹೊಸ ಅಧ್ಯಾಯ: ಈ ಕ್ರಮದಿಂದಾಗಿ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿನ ಬಡಾವಣೆಗಳು ನಿಯಂತ್ರಿತ ಹಾಗೂ ಯೋಜಿತ ರೀತಿಯಲ್ಲಿ ಅಭಿವೃದ್ಧಿಯಾಗಲಿದ್ದು, ಗ್ರಾಮೀಣ ಪ್ರದೇಶಗಳ ನಗರೀಕರಣಕ್ಕೆ ಹೊಸ ಚೈತನ್ಯ ಸಿಗಲಿದೆ. ಸಚಿವ ಪ್ರಿಯಾಂಕ್ ಖರ್ಗೆ ಅವರು ಈ ಕ್ರಮವು “ಗ್ರಾಮೀಣ ಕರ್ನಾಟಕದ ಸುಸಂಘಟಿತ ಅಭಿವೃದ್ಧಿಗೆ ನೂತನ ದಿಕ್ಕು ತೋರಿಸುತ್ತದೆ” ಎಂದು ತಿಳಿಸಿದ್ದಾರೆ.
