Home ಸುದ್ದಿ ರಾಜ್ಯ ಪರಿಷತ್‌ಗೆ ನಾಲ್ವರ ನಾಮ ನಿರ್ದೇಶನ: ಸದನ ಸಮಬಲ, ಪಕ್ಷೇತರ ಸದಸ್ಯ ನಿರ್ಣಾಯಕ

ಪರಿಷತ್‌ಗೆ ನಾಲ್ವರ ನಾಮ ನಿರ್ದೇಶನ: ಸದನ ಸಮಬಲ, ಪಕ್ಷೇತರ ಸದಸ್ಯ ನಿರ್ಣಾಯಕ

1

ನಾಲ್ವರ ನಾಮನಿರ್ದೇಶನದೊಂದಿಗೆ ವಿಧಾನಪರಿಷತ್‌ನಲ್ಲಿ ಕಾಂಗ್ರೆಸ್ ಸಂಖ್ಯಾಬಲ 37ಕ್ಕೆ ಏರಿಕೆಯಾಗಲಿದೆ. ಬಿಜೆಪಿ 30, ಜೆಡಿಎಸ್ 7 ಸದಸ್ಯರ ಬಲ ಹೊಂದಿವೆ. ಹಾಗಾಗಿ ಆಡಳಿತ-ವಿಪಕ್ಷಗಳು ಮೇಲ್ಮನೆಯಲ್ಲಿ ಸಮಬಲ ಸಾಧಿಸಿದಂತಾಗಿದೆ. ಪಕ್ಷೇತರ ಸದಸ್ಯ ಲಖನ್ ಜಾರಕಿಹೊಳಿ ಬಹುಮತ ಸಾಬೀತು ಸಂದರ್ಭದಲ್ಲಿ ನಿರ್ಣಾಯಕವಾಗಲಿದ್ದಾರೆ.

ಕಾಂಗ್ರೆಸ್ ಸಂಖ್ಯಾಬಲ ಬಹುಮತದ ಸನಿಹಕ್ಕೆ ಬಂದಿರುವ ಬೆನ್ನಲ್ಲೇ ಸಭಾಪತಿ ಸ್ಥಾನವನ್ನು ತನ್ನತ್ತ ಸೆಳೆದುಕೊಳ್ಳಲು ತಂತ್ರಗಾರಿಕೆ ರೂಪಿಸುವ ಸ್ಪಷ್ಟ ಲಕ್ಷಣಗಳಿವೆ. ರಾಜ್ಯಪಾಲರಿಂದ ಪಟ್ಟಿಗೆ ಅನುಮೋದನೆ ದೊರೆತ ಬೆನ್ನಲ್ಲೇ ವಿಧಾನ ಪರಿಷತ್‌ನಲ್ಲಿ ಕಳೆದ 5 ತಿಂಗಳಿಂದ ಖಾಲಿ ಉಳಿದಿದ್ದ ಸದಸ್ಯ ಸ್ಥಾನಗಳಿಗೆ ನಾಲ್ವರನ್ನು ನಾಮ ನಿರ್ದೇಶನ ಮಾಡಿ ರಾಜ್ಯ ಸರ್ಕಾರ ಭಾನುವಾರ ಅಧಿಕೃತ ಅಧಿಸೂಚನೆ ಹೊರಡಿಸಿದೆ.

1951ರ ಪ್ರಜಾಪ್ರತಿನಿಧಿ ಕಾಯಿದೆ ಸೆಕ್ಷನ್ 74ರಂತೆ ರಾಜ್ಯಪಾಲರಿಂದ ನಾಮನಿರ್ದೇಶನಗೊಂಡ ಸದಸ್ಯರ ಹೆಸರನ್ನು ಅಧಿಸೂಚನೆಯಲ್ಲಿ ಪ್ರಕಟಿಸಿದೆ. ಕಾಂಗ್ರೆಸ್ ಸಾಗರೋತ್ತರ ಘಟಕ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ, ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಮುಖ್ಯಸ್ಥ ರಮೇಶ್ ಬಾಬು, ಎಸ್‌ಸಿ ಘಟಕದ ಪ್ರಧಾನ ಕಾರ್ಯದರ್ಶಿ ಎಫ್.ಎಚ್.ಜಕ್ಕಪ್ಪನವರ್ ಮತ್ತು ಹಿರಿಯ ಪತ್ರಕರ್ತ ಮೈಸೂರಿನ ಕೆ. ಶಿವಕುಮಾರ್ ಅವರನ್ನು ವಿಧಾನಪರಿಷತ್‌ಗೆ ನಾಮ ನಿರ್ದೇಶನ ಮಾಡಲಾಗಿದೆ.

ಕಾಂಗ್ರೆಸ್‌ ಯು.ಬಿ.ವೆಂಕಟೇಶ್, ಪ್ರಕಾಶ್.ಕೆ.ರಾಥೋಡ್ ಅವರ ಅವಧಿ 2024ರ ಅಕ್ಟೋಬರ್ ತಿಂಗಳಿಗೆ ಪೂರ್ಣಗೊಂಡಿತ್ತು. ಜೆಡಿಎಸ್‌ನ ಕೆ.ಎ.ತಿಪ್ಪೇಸ್ವಾಮಿ ಅವರ ಅವಧಿ ಕಳೆದ ಜನವರಿಗೆ ಮುಕ್ತಾಯವಾಗಿತ್ತು. ಚನ್ನಪಟ್ಟಣ ಉಪಚುನಾವಣೆಗೆ ಸ್ಪರ್ಧಿಸಲು ಸಿ.ಪಿ.ಯೋಗೇಶ್ವರ್ ರಾಜೀನಾಮೆ ನೀಡಿದ್ದರಿಂದ ಅವರ ಸ್ಥಾನವೂ ತೆರವಾಗಿತ್ತು. ಈ ನಾಲ್ಕೂ ಸ್ಥಾನಗಳಿಗೆ ಈಗ ರಾಜ್ಯ ಸರ್ಕಾರ ಸದಸ್ಯರನ್ನು ನಾಮ ನಿರ್ದೇಶನ ಮಾಡಿ ಅಧಿಸೂಚನೆ ಹೊರಡಿಸಿದೆ.

ಹೊರಟ್ಟಿ ಭವಿಷ್ಯವೇನು?: ಪರಿಷತ್‌ನಲ್ಲಿ ಬಹುಮತ ಬರುತ್ತಿದ್ದಂತೆ ಬಿಜೆಪಿ ಬಸವರಾಜ ಹೊರಟ್ಟಿ ಅವರ ಸ್ಥಾನ ಡೋಲಾಯ ಮಾನವಾಗುವ ಸಾಧ್ಯತೆ ದಟ್ಟವಾಗಿದೆ. ನನ್ನ ಅವಿಶ್ವಾಸ ನಿರ್ಣಯದ ಸಣ್ಣ ಸುಳಿವು ಸಿಕ್ಕಿದರೂ ಸಭಾಪತಿ ಸ್ಥಾನದಲ್ಲಿ ಒಂದು ಕ್ಷಣವೂ ಇರಲಾರೆ ಎಂದು ಹೊರಟ್ಟಿ ಹಲವಾರು ಬಾರಿ ಹೇಳಿಕೊಂಡಿದ್ದಾರೆ.

ಸಿಎಂಗೆ ಆಪ್ತರಾಗಿರುವ ಹೊರಟ್ಟಿ ಅವರೇ ಮುಂದುವರಿಯುವ ಬಗ್ಗೆ ಅನೇಕ ಸಲ ಚರ್ಚೆ ಆಗಿದೆ. ಆದರೆ ಕಾಂಗ್ರೆಸ್ ಸದಸ್ಯರ ಒಂದು ಬಣ ಈಗಾಗಲೇ ಡಿಕೆಶಿ ಮೇಲೆ ಸಭಾಪತಿ ಸ್ಥಾನವನ್ನು ಕಾಂಗ್ರೆಸ್‌ಗೆ ಪಡೆದುಕೊಳ್ಳುವ ಬಗ್ಗೆ ಒತ್ತಡ ಹೇರುತ್ತಿದೆ.

ಪರಿಷತ್ ಸದಸ್ಯ ಬಲದ ಚಿತ್ರಣ

  • ಒಟ್ಟು ಸದಸ್ಯರ ಸಂಖ್ಯೆ -75
  • ಕಾಂಗ್ರೆಸ್ ಬೆಂಬಲಿತರು – 37
  • ಬಿಜೆಪಿ ಬೆಂಬಲಿತರ ಸಂಖ್ಯೆ – 30 (ಸಭಾಪತಿ ಸೇರಿ)
  • ಮಿತ್ರಪಕ್ಷ ಜೆಡಿಎಸ್ – 07
  • ಪಕ್ಷೇತರ ಸದಸ್ಯರು – 01

1 COMMENT

LEAVE A REPLY

Please enter your comment!
Please enter your name here

Exit mobile version