Home ಸುದ್ದಿ ರಾಜ್ಯ ಬಿಜೆಪಿ ಭ್ರಷ್ಟಾಚಾರ ಮಹಾಭಾರತಕ್ಕಿಂತ ದೊಡ್ಡದು: ಅಶೋಕ್ ವಿರುದ್ಧ ಖರ್ಗೆ ವಾಗ್ದಾಳಿ

ಬಿಜೆಪಿ ಭ್ರಷ್ಟಾಚಾರ ಮಹಾಭಾರತಕ್ಕಿಂತ ದೊಡ್ಡದು: ಅಶೋಕ್ ವಿರುದ್ಧ ಖರ್ಗೆ ವಾಗ್ದಾಳಿ

0

ಸರ್ಕಾರಿ ಸ್ಥಳಗಳನ್ನು ಖಾಸಗಿ ಸಂಸ್ಥೆಗಳು ಬಳಸಲು ಅನುಮತಿ ಕಡ್ಡಾಯಗೊಳಿಸುವ ಸರ್ಕಾರದ ಹೊಸ ನಿಯಮ, ರಾಜ್ಯ ರಾಜಕಾರಣದಲ್ಲಿ ದೊಡ್ಡ ವಾಕ್ಸಮರಕ್ಕೆ ಕಾರಣವಾಗಿದೆ. ಈ ನಿಯಮವು ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಗುರಿಯಾಗಿಸಿದೆ ಎಂಬ ಆರೋಪಗಳ ಬೆನ್ನಲ್ಲೇ, ಸಚಿವ ಪ್ರಿಯಾಂಕ್ ಖರ್ಗೆ ಮತ್ತು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ನಡುವಿನ ಸಾಮಾಜಿಕ ಜಾಲತಾಣ ಸಮರ ತಾರಕಕ್ಕೇರಿದೆ.

ಈ ವಾಕ್ಸಮರಕ್ಕೆ ಹೊಸ ತಿರುವು ನೀಡಿರುವ ಪ್ರಿಯಾಂಕ್ ಖರ್ಗೆ, ಬಿಜೆಪಿಯ ಭ್ರಷ್ಟಾಚಾರವನ್ನು ಮಹಾಭಾರತಕ್ಕೆ ಹೋಲಿಸಿ ತೀಕ್ಷ್ಣವಾಗಿ ಟೀಕಿಸಿದ್ದಾರೆ. “ಮಾನ್ಯ ಅಶೋಕ್ ಅವರೇ, ಮೂರು ಹಗಲು ಮೂರು ರಾತ್ರಿ ಕುಳಿತು ಮಹಾಭಾರತದ ಕತೆಯನ್ನು ಹೇಳಿ ಮುಗಿಸಬಹುದು, ಆದರೆ ನಿಮ್ಮ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ಕತೆಗಳನ್ನು ಹೇಳಿ ಮುಗಿಸಲು ಸಾಧ್ಯವಿಲ್ಲ,” ಎಂದು ಖರ್ಗೆ ತಮ್ಮ ‘ಎಕ್ಸ್’ ಖಾತೆಯಲ್ಲಿ ಕುಟುಕಿದ್ದಾರೆ.

ತಮ್ಮ ಆರೋಪಕ್ಕೆ ಪುಷ್ಟಿ ನೀಡಲು, ಖರ್ಗೆ ಬಿಜೆಪಿಯ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಳೆಯ ವಿಡಿಯೋವೊಂದನ್ನು ಅಸ್ತ್ರವಾಗಿ ಬಳಸಿದ್ದಾರೆ. ಆ ವಿಡಿಯೋದಲ್ಲಿ, “ಯಡಿಯೂರಪ್ಪನವರ ಪಿಎ ಆಗಿದ್ದ ಉಮೇಶ್ ಎಂಬ ಕಂಡಕ್ಟರ್ ಮನೆಯಲ್ಲಿ ನಾಲ್ಕು ನೋಟು ಎಣಿಸುವ ಯಂತ್ರಗಳು ಮತ್ತು ಹತ್ತು ಸಾವಿರ ಕೋಟಿ ರೂಪಾಯಿ ನಗದು ಸಿಕ್ಕಿತ್ತು, ಅದು ಯಡಿಯೂರಪ್ಪ ಮತ್ತು ವಿಜಯೇಂದ್ರ ಹಣ,” ಎಂದು ಯತ್ನಾಳ್ ಆರೋಪಿಸಿದ್ದರು.

ಈ ವಿಡಿಯೋವನ್ನು ಮುಂದಿಟ್ಟುಕೊಂಡು ಖರ್ಗೆ, ಅಶೋಕ್ ಅವರಿಗೆ ಸರಣಿ ಪ್ರಶ್ನೆಗಳನ್ನು ಕೇಳಿದ್ದಾರೆ. “ನಿಮ್ಮದೇ ಪಕ್ಷದ ‘ವಿಷಲ್ ಬ್ಲೋವರ್’ ಯತ್ನಾಳ್ ಆರೋಪಕ್ಕೆ ನಿಮ್ಮ ಉತ್ತರವೇನು? ಈಶ್ವರಪ್ಪನವರ ನಂತರ ನೋಟು ಎಣಿಸುವ ಯಂತ್ರ ಇಟ್ಟುಕೊಂಡಿದ್ದ ಖ್ಯಾತಿ ಯಡಿಯೂರಪ್ಪನವರ ಆಪ್ತರಿಗೆ ಸಿಕ್ಕಿದೆ. ಆ ಯಂತ್ರದ ಮಾಲೀಕರು ಜಗನ್ನಾಥ ಭವನವೋ ಅಥವಾ ಕೇಶವ ಕೃಪವೋ?” ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಅಷ್ಟೇ ಅಲ್ಲದೆ, “ಬಿಜೆಪಿ ರಾಜ್ಯಾಧ್ಯಕ್ಷರು ಪದೇ ಪದೇ ಮಾರಿಷಸ್, ದುಬೈಗೆ ಏಕೆ ಹೋಗುತ್ತಾರೆ? ಅಲ್ಲಿ ಎಷ್ಟು ಆಸ್ತಿ ಮಾಡಿದ್ದಾರೆ? ಈ ಪ್ರಶ್ನೆಗಳನ್ನು ನಿಮ್ಮವರೇ ಕೇಳಿದ್ದಾರೆ, ಮೊದಲು ಇದಕ್ಕೆ ಉತ್ತರ ಕೊಡಿ,” ಎಂದು ಸವಾಲು ಹಾಕಿದ್ದಾರೆ.

ಇದಕ್ಕೆ ಪ್ರತ್ಯುತ್ತರ ನೀಡಿರುವ ಆರ್. ಅಶೋಕ್, ಪ್ರಿಯಾಂಕ್ ಖರ್ಗೆಯವರು ಹತಾಶೆಯಿಂದ ಹಳಸಿದ ಕಥೆಗಳನ್ನು ಹೇಳಿ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. “ಯಾರನ್ನೋ ಮೆಚ್ಚಿಸುವುದಕ್ಕಿಂತ, ಬಸವಣ್ಣನವರು ಹೇಳಿದಂತೆ ಮೊದಲು ನಿಮ್ಮ ಮನವನ್ನು ಸಂತೈಸಿಕೊಳ್ಳಿ. ನಿಮ್ಮದೇ ಪಕ್ಷದ ನಾಯಕರಾದ ವಿ.ಎಸ್. ಉಗ್ರಪ್ಪ ಮತ್ತು ಸಲೀಂ ‘ಕಮಿಷನ್ ಗಿರಾಕಿ’ ಬಗ್ಗೆ ಮಾತನಾಡಿದ್ದ ವಿಡಿಯೋವನ್ನು ಹಂಚಿಕೊಂಡು, ಆ ಗಿರಾಕಿ ಯಾರೆಂದು ಜನರಿಗೆ ತಿಳಿಸಿ,” ಎಂದು ಅಶೋಕ್ ತಿರುಗೇಟು ನೀಡಿದ್ದಾರೆ.

ಆರ್‌ಎಸ್‌ಎಸ್‌ಗೆ ಸಂಬಂಧಿಸಿದ ಒಂದು ನಿಯಮವು, ಈಗ ಎರಡೂ ಪಕ್ಷಗಳ ನಾಯಕರು ಪರಸ್ಪರ ಹಳೆಯ ಭ್ರಷ್ಟಾಚಾರದ ಆರೋಪಗಳನ್ನು ಕೆದಕಿ ಕೆಸರೆರಚಾಟ ನಡೆಸುವ ಹಂತಕ್ಕೆ ತಲುಪಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version