ಕಾಂಗ್ರೆಸ್‌ನ ಹಿರಿಯ ನಾಯಕ ಮತ್ತು ತಮ್ಮ ನೇರ, ನಿಷ್ಠುರ ಮಾತುಗಳಿಂದಲೇ ಸದಾ ಸುದ್ದಿಯಲ್ಲಿರುವ ಕೆ.ಎನ್. ರಾಜಣ್ಣ, ಇದೀಗ ತಮ್ಮದೇ ಪಕ್ಷದ ಅಡಿಪಾಯವನ್ನೇ ಪ್ರಶ್ನಿಸುವಂತಹ ಸ್ಫೋಟಕ ಹೇಳಿಕೆಯೊಂದನ್ನು ನೀಡಿ, ರಾಜ್ಯ ರಾಜಕಾರಣದಲ್ಲಿ ಹೊಸ ಬಿರುಗಾಳಿ ಎಬ್ಬಿಸಿದ್ದಾರೆ.
“ಮುಸ್ಲಿಮರು ಕಾಂಗ್ರೆಸ್‌ಗೆ ಮತ ಹಾಕುವುದು ನಮ್ಮನ್ನು ಗೆಲ್ಲಿಸಬೇಕೆಂದಲ್ಲ, ಬದಲಿಗೆ ಬಿಜೆಪಿಯನ್ನು ಸೋಲಿಸಬೇಕು ಎಂಬ ಒಂದೇ ಕಾರಣಕ್ಕೆ,” ಎಂದು ಆಡಿರುವ ಮಾತು, ಕಾಂಗ್ರೆಸ್ ಪಕ್ಷವನ್ನು ತೀವ್ರ ಇರಿಸುಮುರಿಸಿಗೆ ದೂಡಿದೆ.
“ಇದು ಅನಿವಾರ್ಯದ ಆಯ್ಕೆ, ಅಭಿಮಾನದ ಮತವಲ್ಲ”: ತುಮಕೂರಿನಲ್ಲಿ ಮಾತನಾಡಿದ ಮಾಜಿ ಸಚಿವ ರಾಜಣ್ಣ, ಕಾಂಗ್ರೆಸ್‌ನ ಮುಸ್ಲಿಂ ಮತಬ್ಯಾಂಕ್‌ನ ಮನಸ್ಥಿತಿಯನ್ನು ವಿವರಿಸುತ್ತಾ, ಮುಸ್ಲಿಂ ಸಮುದಾಯಕ್ಕೆ ಬೇರೆ ರಾಜಕೀಯ ಆಯ್ಕೆಗಳು ಇಲ್ಲ. ಅವರ ಏಕೈಕ ಗುರಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವುದು.
ಅದಕ್ಕಾಗಿ, ಅನಿವಾರ್ಯವಾಗಿ ಅವರು ಕಾಂಗ್ರೆಸ್‌ಗೆ ಮತ ಚಲಾಯಿಸುತ್ತಾರೆ. ಇದು ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ, ಇಡೀ ದೇಶದಲ್ಲಿ ಇದೇ ಪರಿಸ್ಥಿತಿ ಇದೆ, ಎಂದು ವಿಶ್ಲೇಷಿಸಿದ್ದಾರೆ. ಈ ಮೂಲಕ, ಮುಸ್ಲಿಮರ ಮತಗಳು ಕಾಂಗ್ರೆಸ್ ಮೇಲಿನ ಪ್ರೀತಿಯಿಂದ ಬರುವುದಿಲ್ಲ, ಬದಲಿಗೆ ಅನಿವಾರ್ಯತೆಯಿಂದ ಬರುತ್ತದೆ ಎಂದು ಪ್ರತಿಪಾದಿಸಿದ್ದಾರೆ.
ರಾಜಣ್ಣನ ‘ಸತ್ಯ’ಕ್ಕೆ ಅಶೋಕ್ ಮೆಚ್ಚುಗೆ, ಕಾಂಗ್ರೆಸ್‌ಗೆ ತಿರುಗೇಟು: ರಾಜಣ್ಣನವರ ಈ ನೇರ ಮಾತನ್ನೇ ಅಸ್ತ್ರವಾಗಿಸಿಕೊಂಡಿರುವ ವಿಪಕ್ಷ ನಾಯಕ ಆರ್. ಅಶೋಕ್, ಸರಣಿ ಟ್ವೀಟ್ ಮೂಲಕ ಕಾಂಗ್ರೆಸ್‌ನ ತುಷ್ಟೀಕರಣ ರಾಜಕಾರಣವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
“ರಾಹುಲ್ ಗಾಂಧಿಯವರ ‘ಮತಗಳ್ಳತನ’ದ ನಾಟಕವನ್ನು ಬಯಲು ಮಾಡಿದ್ದ ರಾಜಣ್ಣನವರು, ಈಗ ಕಾಂಗ್ರೆಸ್‌ನ ವೋಟ್ ಬ್ಯಾಂಕ್ ರಾಜಕಾರಣದ ಬಗ್ಗೆ ಮತ್ತೊಮ್ಮೆ ಸತ್ಯ ನುಡಿದಿದ್ದಾರೆ,” ಎಂದು ಹೇಳಿದ್ದಾರೆ.
“ನಿಮ್ಮ ಸತ್ಯವಂತಿಕೆಗೆ ಸಚಿವ ಸ್ಥಾನವನ್ನೇ ಕಳೆದುಕೊಳ್ಳಬೇಕಾದರೂ, ಯಾವುದೇ ಮುಲಾಜಿಲ್ಲದೆ ಸತ್ಯ ಹೇಳುವ ನಿಮ್ಮ ನಿಷ್ಠುರತೆ ಅಭಿನಂದನೀಯ. ಆದರೆ, ನಿಮ್ಮಂತಹವರಿಗೆ ಕಾಂಗ್ರೆಸ್‌ನಲ್ಲಿ ಸ್ಥಾನವೂ ಇಲ್ಲ, ಬೆಲೆಯೂ ಇಲ್ಲ. ಅಲ್ಲಿ ಹೈಕಮಾಂಡ್ ಗುಲಾಮರಿಗೆ ಮಾತ್ರ ಉಳಿಗಾಲ,” ಎಂದು ಅಶೋಕ್ ಟ್ವೀಟ್ ಮಾಡುವ ಮೂಲಕ, ರಾಜಣ್ಣನವರನ್ನು ಹೊಗಳುತ್ತಲೇ ಕಾಂಗ್ರೆಸ್‌ನ ಆಂತರಿಕ ರಾಜಕೀಯವನ್ನು ಕೆಣಕಿದ್ದಾರೆ.
“ನನ್ನ ಮಾತು ಕಹಿ, ಆದರೆ ಆರೋಗ್ಯಕ್ಕೆ ಒಳ್ಳೆಯದು”: ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಿರುವ ರಾಜಣ್ಣ, ತಮ್ಮ ನಿಲುವನ್ನು ಮತ್ತಷ್ಟು ಗಟ್ಟಿಯಾಗಿ ಸಮರ್ಥಿಸಿಕೊಂಡಿದ್ದಾರೆ. ಕಹಿ ಕಷಾಯ ಕುಡಿಯಲು ಕಷ್ಟ, ಆದರೆ ಅದು ಆರೋಗ್ಯಕ್ಕೆ ಒಳ್ಳೆಯದು.
ನನ್ನ ಸತ್ಯದ ಮಾತುಗಳು ಕೆಲವರಿಗೆ ಕಹಿಯಾಗಿರಬಹುದು, ಆದರೆ ಪಕ್ಷದ ಹಿತದೃಷ್ಟಿಯಿಂದ ಇದು ಅವಶ್ಯಕ. ಅವರಿಗೋಸ್ಕರ ನಾನು ಬದಲಾಗಲು ಸಾಧ್ಯವಿಲ್ಲ, ಅವರೇ ಬದಲಾಗಬೇಕು, ಎಂದು ಪರೋಕ್ಷವಾಗಿ ತಮ್ಮದೇ ಪಕ್ಷದೊಳಗಿನ ವಿರೋಧಿಗಳಿಗೆ ಟಾಂಗ್ ನೀಡಿದ್ದಾರೆ.
ಕೆ.ಎನ್. ರಾಜಣ್ಣ ಈ ಹೇಳಿಕೆಯು, ಕಾಂಗ್ರೆಸ್ ಮತ್ತು ಮುಸ್ಲಿಂ ಸಮುದಾಯದ ನಡುವಿನ ರಾಜಕೀಯ ಸಂಬಂಧದ ಬಗ್ಗೆ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ಇದು ಕೇವಲ ರಾಜಕೀಯ ಹೇಳಿಕೆಯಾಗಿ ಉಳಿಯದೆ, ಪಕ್ಷದೊಳಗೆ ನಡೆಯುತ್ತಿರುವ ಆಂತರಿಕ ಸಂಘರ್ಷದ ಪ್ರತಿಬಿಂಬವೂ ಆಗಿದೆ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿವೆ.
