ಕರ್ನಾಟಕದ 70ನೇ ರಾಜ್ಯೋತ್ಸವದ ಸಂಭ್ರಮಕ್ಕೆ ಗರಿಮೆ ತರುವಂತೆ, 2025-26ನೇ ಸಾಲಿನ ಪ್ರತಿಷ್ಠಿತ ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’ ಪುರಸ್ಕೃತರ ಪಟ್ಟಿಯನ್ನು ಸರ್ಕಾರ ಪ್ರಕಟಿಸಿದೆ.
ಈ ಬಾರಿ ಯಾವುದೇ ಅರ್ಜಿಗಳನ್ನು ಕರೆಯದೆ, ತೆರೆಮರೆಯಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ 70 ಮಂದಿ ಗಣ್ಯರನ್ನು ಗುರುತಿಸಿ ಗೌರವಿಸಿರುವುದು ಈ ಬಾರಿಯ ಪ್ರಶಸ್ತಿಯ ವಿಶೇಷತೆಯಾಗಿದೆ.
ಬಹುಭಾಷಾ ನಟ ಪ್ರಕಾಶ್ ರಾಜ್, ನ್ಯಾಯಮೂರ್ತಿ ಪಿ.ಬಿ. ಭಜಂತ್ರಿ, ಹಿರಿಯ ಸಾಹಿತಿ ರಹಮತ್ ತರೀಕೆರೆ ಸೇರಿದಂತೆ ಹಲವು ಗಣ್ಯರು ಈ ಪಟ್ಟಿಯಲ್ಲಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಗುರುವಾರ ಈ ಪಟ್ಟಿಯನ್ನು ಬಿಡುಗಡೆ ಮಾಡಿ, “ಈ ಬಾರಿ ಪ್ರಶಸ್ತಿ ಆಯ್ಕೆ ಪ್ರಕ್ರಿಯೆಯಲ್ಲಿ ಸಂಪೂರ್ಣ ಪಾರದರ್ಶಕತೆ ಮತ್ತು ಅರ್ಹತೆಗೆ ಆದ್ಯತೆ ನೀಡಲಾಗಿದೆ. ಆಯ್ಕೆ ಸಲಹಾ ಸಮಿತಿಯು ಹಲವಾರು ಸುತ್ತಿನ ಸಭೆಗಳನ್ನು ನಡೆಸಿ, ಜಿಲ್ಲಾವಾರು ಮತ್ತು ಸಾಮಾಜಿಕ ನ್ಯಾಯದ ಮಾನದಂಡಗಳನ್ನು ಗಮನದಲ್ಲಿಟ್ಟುಕೊಂಡು, ತೆರೆಮರೆಯಲ್ಲಿರುವ ಅರ್ಹ ಸಾಧಕರನ್ನು ಗುರುತಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದೆ,” ಎಂದು ತಿಳಿಸಿದರು.
ಅರ್ಜಿರಹಿತ ಆಯ್ಕೆ; ಹೊಸ ಪರಂಪರೆ: ಈ ಬಾರಿಯ ಆಯ್ಕೆ ಪ್ರಕ್ರಿಯೆಯು ಹಿಂದಿನ ವರ್ಷಗಳಿಗಿಂತ ಭಿನ್ನವಾಗಿದೆ. ಇದೇ ಮೊದಲ ಬಾರಿಗೆ, ಪ್ರಶಸ್ತಿಗಾಗಿ ಸಾರ್ವಜನಿಕರಿಂದ ಅರ್ಜಿಗಳನ್ನು ಆಹ್ವಾನಿಸದೆ, ಸರ್ಕಾರವೇ ರಚಿಸಿದ್ದ ತಜ್ಞರ ಸಮಿತಿಯು ವಿವಿಧ ಮೂಲಗಳಿಂದ ಮಾಹಿತಿ ಕಲೆಹಾಕಿ, ನಿಜವಾದ ಅರ್ಹರನ್ನು ಆಯ್ಕೆ ಮಾಡಿದೆ.
ಈ ಕ್ರಮವು ಸ್ವಯಂ-ಪ್ರಚಾರದಿಂದ ದೂರ ಉಳಿದು, ಮೌನವಾಗಿ ಸೇವೆ ಸಲ್ಲಿಸುತ್ತಿರುವ ಅನೇಕರಿಗೆ ಮನ್ನಣೆ ನೀಡಿದಂತಾಗಿದೆ. ಈ ಬಾರಿ 12 ಮಹಿಳಾ ಸಾಧಕಿಯರು ಪ್ರಶಸ್ತಿಗೆ ಭಾಜನರಾಗಿದ್ದು, ಯಾವುದೇ ಸಂಘ-ಸಂಸ್ಥೆಗಳಿಗೆ ಪ್ರಶಸ್ತಿ ನೀಡಿಲ್ಲ ಎಂಬುದು ಗಮನಾರ್ಹ.
ಪ್ರಶಸ್ತಿಯು 5 ಲಕ್ಷ ರೂಪಾಯಿ ನಗದು, 25 ಗ್ರಾಂ ತೂಕದ ಚಿನ್ನದ ಪದಕ ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ನವೆಂಬರ್ 1 ರಂದು ಸಂಜೆ 6 ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ಭವ್ಯ ಸಮಾರಂಭದಲ್ಲಿ ಮುಖ್ಯಮಂತ್ರಿಗಳು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ವೈವಿಧ್ಯಮಯ ಕ್ಷೇತ್ರಗಳ ಸಾಧಕರಿಗೆ ಮನ್ನಣೆ: ಈ ಬಾರಿಯ ಪಟ್ಟಿಯು ಕಲೆ, ಸಾಹಿತ್ಯ, ಸಮಾಜ ಸೇವೆ, ವಿಜ್ಞಾನ, ಕ್ರೀಡೆ, ನ್ಯಾಯಾಂಗ ಹೀಗೆ ಎಲ್ಲಾ ಕ್ಷೇತ್ರಗಳ ಸಾಧಕರನ್ನು ಒಳಗೊಂಡಿದೆ.
ಚಲನಚಿತ್ರ ಮತ್ತು ಕಲೆ: ತಮ್ಮ ವಿಭಿನ್ನ ಪಾತ್ರಗಳ ಮೂಲಕ ರಾಷ್ಟ್ರಮಟ್ಟದಲ್ಲಿ ಖ್ಯಾತಿ ಗಳಿಸಿರುವ ನಟ ಪ್ರಕಾಶ್ ರಾಜ್ ಹಾಗೂ ಹಿರಿಯ ನಟಿ-ನಿರ್ದೇಶಕಿ ವಿಜಯಲಕ್ಷ್ಮೀ ಸಿಂಗ್ ಅವರು ಚಲನಚಿತ್ರ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಯಕ್ಷಗಾನ, ಬಯಲಾಟ, ರಂಗಭೂಮಿ, ಶಿಲ್ಪಕಲೆ ಮತ್ತು ಚಿತ್ರಕಲೆಯಂತಹ ಸಾಂಪ್ರದಾಯಿಕ ಕಲೆಗಳ ಸಾಧಕರನ್ನೂ ಗೌರವಿಸಲಾಗಿದೆ.
ಸಾಹಿತ್ಯ ಮತ್ತು ನ್ಯಾಯಾಂಗ: ಹಿರಿಯ ವಿಮರ್ಶಕ ಪ್ರೊ. ರಾಜೇಂದ್ರ ಚೆನ್ನಿ, ರಹಮತ್ ತರೀಕೆರೆ, ತುಂಬಡಿ ರಾಮಯ್ಯ ಅವರಂತಹ ಸಾಹಿತಿಗಳಿಗೆ ಮನ್ನಣೆ ದೊರೆತಿದೆ. ನ್ಯಾಯಾಂಗ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ನ್ಯಾಯಮೂರ್ತಿ ಪವನ್ ಕುಮಾರ್ ಭಜಂತ್ರಿ ಅವರನ್ನು ಆಯ್ಕೆ ಮಾಡಿರುವುದು ವಿಶೇಷ.
ಸಮಾಜದ ನಿಜವಾದ ಹೀರೋಗಳು: ಯಾವುದೇ ಪ್ರಚಾರ ಬಯಸದೆ, ಸಾವಿರಾರು ಹೆರಿಗೆಗಳನ್ನು ಮಾಡಿಸಿದ ವಿಜಯನಗರದ ‘ಸೂಲಗಿತ್ತಿ’ ಈರಮ್ಮ, ದಕ್ಷಿಣ ಕನ್ನಡದ ಕೋರಿನ್ ರಸ್ಕೀನಾ, ಪೌರಕಾರ್ಮಿಕ ಸಮುದಾಯದ ಪೆನ್ನ ಓಬಳಯ್ಯ ಅವರಂತಹ ನಿಸ್ವಾರ್ಥ ಸಮಾಜ ಸೇವಕರನ್ನು ಗುರುತಿಸಿರುವುದು ಪ್ರಶಸ್ತಿಯ ಘನತೆಯನ್ನು ಹೆಚ್ಚಿಸಿದೆ.
ಹೊರನಾಡು ಮತ್ತು ಇತರ ಕ್ಷೇತ್ರಗಳು: ಸೌದಿ ಅರೇಬಿಯಾದಲ್ಲಿ ಕನ್ನಡದ ಕಂಪು ಹರಡುತ್ತಿರುವ ಜಕರಿಯ ಬಜಪೆ ಮತ್ತು ಮುಂಬೈನ ಪಿ.ವಿ. ಶೆಟ್ಟಿ ಅವರನ್ನು ಹೊರನಾಡು ಕನ್ನಡಿಗರ ವಿಭಾಗದಲ್ಲಿ ಗೌರವಿಸಲಾಗಿದೆ. ಕ್ರೀಡೆಯಲ್ಲಿ ಭಾರತ ಹಾಕಿ ತಂಡದ ಮಾಜಿ ನಾಯಕ ಆಶೀಶ್ ಕುಮಾರ್ ಬಲ್ಲಾಳ್, ಪರಿಸರ, ಕೃಷಿ, ಮಾಧ್ಯಮ ಕ್ಷೇತ್ರಗಳ ಸಾಧಕರೂ ಈ ಪಟ್ಟಿಯಲ್ಲಿದ್ದಾರೆ.
2025ರ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಸಂಪೂರ್ಣ ಪಟ್ಟಿ.
ಸಾಹಿತ್ಯ
ಪ್ರೊ. ರಾಜೇಂದ್ರ ಚೆನ್ನಿ (ಶಿವಮೊಗ್ಗ)
ತುಂಬಾಡಿ ರಾಮಯ್ಯ (ತುಮಕೂರು)
ಪ್ರೊ. ಅರ್. ಸುನಂದಮ್ಮ (ಚಿಕ್ಕಬಳ್ಳಾಪುರ)
ಡಾ. ಎಚ್.ಎಲ್. ಪುಷ್ಪ (ತುಮಕೂರು)
ರಹಮತ್ ತರೀಕೆರೆ (ಚಿಕ್ಕಮಗಳೂರು)
ಹ.ಮ. ಪೂಜಾರ (ವಿಜಯಪುರ)
ಚಲನಚಿತ್ರ/ಕಿರುತೆರೆ
ಪ್ರಕಾಶ್ ರಾಜ್ (ದಕ್ಷಿಣ ಕನ್ನಡ)
ವಿಜಯಲಕ್ಷ್ಮೀ ಸಿಂಗ್ (ಕೊಡಗು)
ಜಾನಪದ
ಬಸಪ್ಪ ಭರಮಪ್ಪ ಚೌಡ್ಕಿ (ಕೊಪ್ಪಳ)
ಬಿ. ಟಾಕಪ್ಪ ಕಣ್ಣೂರು (ಶಿವಮೊಗ್ಗ)
ಸನ್ನಿಂಗಪ್ಪ ಸತ್ತೆಪ್ಪ ಮುಶೆನ್ನಗೋಳ (ಬೆಳಗಾವಿ)
ಹನುಮಂತಪ್ಪ, ಮಾರಪ್ಪ, ಚೀಳಂಗಿ (ಚಿತ್ರದುರ್ಗ)
ಎಂ. ತೋಪಣ್ಣ (ಕೋಲಾರ)
ಸೋಮಣ್ಣ ದುಂಡಪ್ಪ ಧನಗೊಂಡ (ವಿಜಯಪುರ)
ಸಿಂಧು ಗುಜರನ್ (ದಕ್ಷಿಣ ಕನ್ನಡ)
ಎಲ್. ಮಹದೇವಪ್ಪ ಉಡಿಗಾಲ (ಮೈಸೂರು)
ಸಮಾಜ ಸೇವೆ
ಮತಿ ಸೂಲಗಿತ್ತಿ ಈರಮ್ಮ (ವಿಜಯನಗರ)
ಫಕ್ಕೀರಿ (ಬೆಂಗಳೂರು ಗ್ರಾಮಾಂತರ)
ಕೋರಿನ್ ಆಂಟೊನಿಯಟ್ ರಸ್ಕೀನಾ (ದಕ್ಷಿಣ ಕನ್ನಡ)
ಡಾ. ಎನ್. ಸೀತಾರಾಮ ಶೆಟ್ಟಿ (ಉಡುಪಿ)
ಕೋಣಂದೂರು ಲಿಂಗಪ್ಪ (ಶಿವಮೊಗ್ಗ)
ಉಮೇಶ ಪಂಬದ (ದಕ್ಷಿಣ ಕನ್ನಡ)
ಡಾ. ರವೀಂದ್ರ ಕೋರಿಶೆಟ್ಟಿರ್ (ಧಾರವಾಡ)
ಕೆ. ದಿನೇಶ್ (ಬೆಂಗಳೂರು)
ಶಾಂತರಾಜು (ತುಮಕೂರು)
ಜಾಫರ್ ಮೊಹಿಯುದ್ದೀನ್ (ರಾಯಚೂರು)
ಪೆನ್ನ ಓಬಳಯ್ಯ (ಬೆಂಗಳೂರು ಗ್ರಾಮಾಂತರ)
ಬಾಯಿ ಬಳ್ಳಾರಿ
ಪುಂಡಲೀಕ ಶಾಸ್ತ್ರೀ (ಬೆಳಗಾವಿ)
ಸಂಗೀತ ಮತ್ತು ನೃತ್ಯ
ದೇವೇಂದ್ರಕುಮಾರ ಪತ್ತಾರ್ (ಸಂಗೀತ – ಕೊಪ್ಪಳ)
ಮಡಿವಾಳಯ್ಯ ಸಾಲಿ (ಸಂಗೀತ – ಬೀದರ್)
ಪ್ರೊ. ಕೆ. ರಾಮಮೂರ್ತಿ ರಾವ್ (ನೃತ್ಯ – ಮೈಸೂರು)
ರಂಗಭೂಮಿ
ಹೆಚ್.ಎಂ. ಪರಮಶಿವಯ್ಯ (ರಾಮನಗರ)
ಎಲ್.ಬಿ.ಶೇಖ್ (ಮಾಸ್ತರ್) (ವಿಜಯಪುರ)
ಬಂಗಾರಪ್ಪ ಖುದಾನ್‌ಪುರ (ಬೆಂಗಳೂರು)
ಮೈಮ್ ರಮೇಶ್ (ದಕ್ಷಿಣ ಕನ್ನಡ)
ಡಿ. ರತ್ನಮ್ಮ ದೇಸಾಯಿ (ರಾಯಚೂರು)
ಯಕ್ಷಗಾನ ಮತ್ತು ಬಯಲಾಟ
ಕೋಟ ಸುರೇಶ ಬಂಗೇರ (ಉಡುಪಿ)
ಐರಬೈಲ್ ಆನಂದ ಶೆಟ್ಟಿ (ಉಡುಪಿ)
ಕೃಷ್ಣ ಪರಮೇಶ್ವರ ಹೆಗಡೆ (ಉತ್ತರ ಕನ್ನಡ)
ಗುಂಡೂರಾಜ್ (ಬಯಲಾಟ – ಹಾಸನ)
ಮಾಧ್ಯಮ
ಕೆ. ಸುಬ್ರಮಣ್ಯ (ಬೆಂಗಳೂರು)
ಅಂಶಿ ಪ್ರಸನ್ನಕುಮಾರ್ (ಮೈಸೂರು)
ಬಿ.ಎಂ. ಹನೀಫ್ (ದಕ್ಷಿಣ ಕನ್ನಡ)
ಎಂ. ಸಿದ್ಧರಾಜು (ಮಂಡ್ಯ)
ರಾಮಯ್ಯ (ಚಿಕ್ಕಬಳ್ಳಾಪುರ)
ಏರ್ ಮಾರ್ಷಲ್ ಫೀಲೀಫ್ ರಾಜಕುಮಾರ್ (ದಾವಣಗೆರೆ)
ಡಾ. ಆರ್. ವಿ. ನಾಡಗೌಡ (ಗದಗ)
ಕ್ರೀಡೆ
ಆಶೀಶ್ ಕುಮಾರ್ ಬಲ್ಲಾಳ್ (ಬೆಂಗಳೂರು)
ಎಂ. ಯೋಗೇಂದ್ರ (ಮೈಸೂರು)
ಡಾ. ಬಬಿನಾ ಎನ್.ಎಂ (ಯೋಗ – ಕೊಡಗು)
ಇತರೆ ಕ್ಷೇತ್ರಗಳು
ಆಡಳಿತ: ಹೆಚ್. ಸಿದ್ದಯ್ಯ (ನಿವೃತ್ತ IAS)
ವೈದ್ಯಕೀಯ: ಆಲಮ್ಮ ಮಾರಣ್ಣ (ತುಮಕೂರು), ಡಾ. ಜಯರಂಗನಾಥ್ (ಬೆಂಗಳೂರು ಗ್ರಾ.)
ಶಿಕ್ಷಣ: ಡಾ. ಎಂ.ಆರ್. ಜಯರಾಮ್, ಡಾ. ಎನ್.ಎಸ್. ರಾಮೇಗೌಡ, ಎಸ್.ಬಿ. ಹೊಸಮನಿ, ರಾಜ್ ಶ್ರೀ ನಾಗರಾಜು
ನ್ಯಾಯಾಂಗ: ನ್ಯಾಯಮೂರ್ತಿ ಪಿ.ಬಿ. ಭಜಂತ್ರಿ (ಬಾಗಲಕೋಟೆ)
ಹೊರನಾಡು: ಜಕರಿಯ ಬಜಪೆ (ಸೌದಿ), ಪಿ.ವಿ. ಶೆಟ್ಟಿ (ಮುಂಬೈ)
ಪರಿಸರ: ರಾಮೇಗೌಡ (ಚಾಮರಾಜನಗರ), ಮಲ್ಲಿಕಾರ್ಜುನ ನಿಂಗಪ್ಪ (ಯಾದಗಿರಿ)
ಕೃಷಿ: ಡಾ. ಎಸ್.ವಿ. ಹಿತ್ತಲಮನಿ (ಹಾವೇರಿ), ಎಂ.ಸಿ. ರಂಗಸ್ವಾಮಿ (ಹಾಸನ)
ಶಿಲ್ಪಕಲೆ/ಚಿತ್ರಕಲೆ: ಬಸಣ್ಣ ಮೋನಪ್ಪ ಬಡಿಗೇರ, ನಾಗಲಿಂಗಪ್ಪ ಗಂಗೂರ, ಬಿ. ಮಾರುತಿ, ಎಲ್. ಹೇಮಾಶೇಖರ್
ಸಹಕಾರ: ಶೇಖರಗೌಡ ವಿ. ಮಾಲಿಪಾಟೀಲ್ (ಕೊಪ್ಪಳ)