ವಿಜಯಪುರ: ಮಾಜಿ ಶಾಸಕ ಹಾಗೂ ಬಿಜೆಪಿ ಮುಖಂಡ ವಿಜು ಗೌಡ ಪಾಟೀಲ ಅವರ ಪುತ್ರ ಸಮರ್ಥ ಗೌಡ ಪಾಟೀಲ ಮತ್ತು ಅವರ ಸ್ನೇಹಿತರಿಂದ ಟೋಲ್ ಸಿಬ್ಬಂದಿ ಮೇಲೆ ಹಲ್ಲೆ ನಡೆದಿರುವ ಘಟನೆ ವಿಜಯಪುರ ಜಿಲ್ಲೆಯ ಕನ್ನೊಳ್ಳಿ ಗ್ರಾಮದ ಬಳಿಯ ಟೋಲ್ ಗೇಟ್‌ನಲ್ಲಿ ನಡೆದಿದೆ.
ಮಾಹಿತಿಯ ಪ್ರಕಾರ, ಸಮರ್ಥ ಗೌಡ ಬ್ಲ್ಯಾಕ್ ಬಣ್ಣದ ಥಾರ್ ವಾಹನದಲ್ಲಿ ವಿಜಯಪುರದಿಂದ ಸಿಂದಗಿ ಕಡೆಗೆ ಹೊರಟಿದ್ದರು. ಟೋಲ್ ಬೂತ್ ಬಳಿ ಸಿಬ್ಬಂದಿ ಸಂಗಪ್ಪ ಅವರು ಸಾಮಾನ್ಯವಾಗಿ ಶುಲ್ಕ ಕೇಳಿದಾಗ, ಸಮರ್ಥ ಗೌಡ “ನಾನು ವಿಜು ಗೌಡ ಪಾಟೀಲ ಅವರ ಪುತ್ರ” ಎಂದು ಹೇಳಿ ಹಣ ನೀಡುವುದನ್ನು ತಪ್ಪಿಸಲು ಪ್ರಯತ್ನಿಸಿದ್ದಾರೆಂದು ತಿಳಿದುಬಂದಿದೆ.
ಅದಕ್ಕೆ ಟೋಲ್ ಸಿಬ್ಬಂದಿ “ಯಾವ ವಿಜು ಗೌಡ ಪಾಟೀಲ?” ಎಂದು ಪ್ರಶ್ನಿಸಿದಾಗ, ಸಮರ್ಥ ಗೌಡ ಮತ್ತು ಅವರ ಗೆಳೆಯರು ಸಂಗಪ್ಪನಿಗೆ ಹಲ್ಲೆ ಮಾಡಿದ್ದಾನೆ. ಹಲ್ಲೆಗೊಳಗಾದ ಸಂಗಪ್ಪನನ್ನು ತಕ್ಷಣವೇ ಸಿಂದಗಿ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಹಲ್ಲೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಈ ಘಟನೆಯ ಹಿನ್ನೆಲೆಯಲ್ಲಿ ಟೋಲ್ ಸಿಬ್ಬಂದಿ ಠಾಣೆಗೆ ತೆರಳಿ ಸಮರ್ಥ ಗೌಡ ಪಾಟೀಲ ಮತ್ತು ಅವರ ಸ್ನೇಹಿತರ ವಿರುದ್ಧ ದೂರು ದಾಖಲಿಸಲು ಮುಂದಾಗಿದ್ದಾರೆ. ಸ್ಥಳೀಯರು ಘಟನೆಯನ್ನು ಖಂಡಿಸಿ, ಸಾರ್ವಜನಿಕ ಸ್ಥಳಗಳಲ್ಲಿ ಪ್ರಭಾವದ ದುರ್ಬಳಕೆ ನಿಲ್ಲಿಸಬೇಕೆಂದು ಆಗ್ರಹಿಸಿದ್ದಾರೆ.
