ದೆಹಲಿ: ವಿಜಯಪುರ ಜಿಲ್ಲೆಗೆ ಪ್ರವೇಶಿಸಲು ವಿಧಿಸಿದ್ದ ನಿರ್ಬಂಧವನ್ನು ಪ್ರಶ್ನಿಸಿ ಕನ್ನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.
ನ್ಯಾ. ಪಂಕಜ್ ಮಿತ್ತಲ್ ಮತ್ತು ನ್ಯಾ. ಪ್ರಸನ್ನ ವರಾಲೆ ಅವರ ಪೀಠ ಈ ತೀರ್ಪು ನೀಡಿದ್ದು, ಸ್ವಾಮೀಜಿ ನೀಡಿದ ಹೇಳಿಕೆಗಳ ಮೇಲೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. “ನೀವು ಸ್ವಾಮೀಜಿಯಾಗಿದ್ದು, ಗಂಭೀರವಾಗಿರಬೇಕು. ಇಂತಹ ಅವಹೇಳನಕಾರಿ ಮತ್ತು ಪ್ರಚೋದನಾಕಾರಿ ಭಾಷೆ ಬಳಸುವುದು ವಾಕ್ ಸ್ವಾತಂತ್ರ್ಯದ ವ್ಯಾಪ್ತಿಯಲ್ಲಲ್ಲ. ಎಂದು ನ್ಯಾಯಪೀಠ ಕಿಡಿಕಾರಿದೆ.
ಮಹಾರಾಷ್ಟ್ರದ ಜತ್ತ ತಾಲೂಕಿನ ಬೀಳೂರು ಗ್ರಾಮದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ್ದ ಕಾಡಸಿದ್ದೇಶ್ವರ ಶ್ರೀಗಳು, ಕೆಲ ಲಿಂಗಾಯತ ಸ್ವಾಮೀಜಿಗಳ ವಿರುದ್ಧ ಅಸಂವಿಧಾನಿಕ ಪದಗಳನ್ನು ಬಳಸಿ ತೀವ್ರ ವಾಗ್ದಾಳಿ ನಡೆಸಿದ್ದರು. ಈ ಹೇಳಿಕೆಗಳ ಹಿನ್ನಲೆಯಲ್ಲಿ ವಿಜಯಪುರ ಜಿಲ್ಲಾಡಳಿತವು ಶ್ರೀಗಳ ಜಿಲ್ಲೆ ಪ್ರವೇಶಕ್ಕೆ ಎರಡು ತಿಂಗಳ ಕಾಲ ನಿಷೇಧ ವಿಧಿಸಿತ್ತು.
ಈ ಆದೇಶವನ್ನು ಪ್ರಶ್ನಿಸಿ ಶ್ರೀಗಳು ಕಲಬುರಗಿ ವಿಭಾಗೀಯ ಹೈಕೋರ್ಟ್‌ನ ಮೊರೆ ಹೋಗಿದ್ದರು. ಆದರೆ ಹೈಕೋರ್ಟ್ “ಸ್ವಾಮೀಜಿ ಬಳಸಿರುವ ಭಾಷೆ ಸಾಮಾನ್ಯ ಜನ ಕೂಡ ಬಳಸುವುದಿಲ್ಲ” ಎಂದು ಟೀಕಿಸಿ, ಜಿಲ್ಲಾಡಳಿತದ ನಿರ್ಧಾರವನ್ನು ಸಮರ್ಥಿಸಿತ್ತು. ಇದೀಗ ಸುಪ್ರೀಂಕೋರ್ಟ್ ಕೂಡ ಹೈಕೋರ್ಟ್ ತೀರ್ಪಿನ್ನೇ ಎತ್ತಿಹಿಡಿದಿದೆ.
