Home ಸುದ್ದಿ ರಾಜ್ಯ ಮಂಗಳೂರಿನ ಸ್ಟಾರ್ಟ್‌ಅಪ್ ಹೈಡ್ಜೆನ್‌ಗೆ 5 ಮಿಲಿಯನ್ ಡಾಲರ್ ಹೂಡಿಕೆ – ಹೈಡ್ರೋಜನ್ ತಂತ್ರಜ್ಞಾನದಲ್ಲಿ ಕ್ರಾಂತಿ

ಮಂಗಳೂರಿನ ಸ್ಟಾರ್ಟ್‌ಅಪ್ ಹೈಡ್ಜೆನ್‌ಗೆ 5 ಮಿಲಿಯನ್ ಡಾಲರ್ ಹೂಡಿಕೆ – ಹೈಡ್ರೋಜನ್ ತಂತ್ರಜ್ಞಾನದಲ್ಲಿ ಕ್ರಾಂತಿ

0

ಮಂಗಳೂರು: ಕರ್ನಾಟಕದ ಕರಾವಳಿ ಭಾಗದಿಂದ ಬೆಳೆಯುತ್ತಿರುವ ತಂತ್ರಜ್ಞಾನ ಆವಿಷ್ಕಾರಗಳ ಮತ್ತೊಂದು ಉದಾಹರಣೆಯಾಗಿ, ಮಂಗಳೂರು ಮೂಲದ ಸ್ಟಾರ್ಟ್‌ಅಪ್ ಹೈಡ್ಜೆನ್ (HyedgeN) 5 ಮಿಲಿಯನ್ ಅಮೆರಿಕನ್ ಡಾಲರ್‌ಗಳ (ಸುಮಾರು ₹42 ಕೋಟಿ ರೂ.) ಧನಸಹಾಯವನ್ನು ಯಶಸ್ವಿಯಾಗಿ ಸಂಗ್ರಹಿಸಿದೆ. ಈ ಹೂಡಿಕೆ ಯುರೋಪ್, ಸಿಂಗಾಪುರ್ ಹಾಗೂ ಭಾರತ ಮೂಲದ ಹೂಡಿಕೆದಾರರ ಭಾಗವಹಿಸುವಿಕೆಯಿಂದ ಬಂದಿದೆ.

ಹೈಡ್ಜೆನ್ ಕಂಪನಿಯು ಅಭಿವೃದ್ಧಿಪಡಿಸಿರುವ ಪೇಟೆಂಟ್ ಪಡೆದ ಆನಿಯಾನ್ ಎಕ್ಸ್‌ಚೇಂಜ್ ಮೆಂಬ್ರೇನ್ ತಂತ್ರಜ್ಞಾನವು ಉದ್ಯಮಗಳಿಗೆ ಸ್ಥಳದಲ್ಲಿಯೇ ಹೈಡ್ರೋಜನ್ ಉತ್ಪಾದಿಸಲು ಅವಕಾಶ ನೀಡುತ್ತದೆ. ಇದರ ಮೂಲಕ ಹೈಡ್ರೋಜನ್ ಉತ್ಪಾದನಾ ವೆಚ್ಚವನ್ನು ಸುಮಾರು 70% ವರೆಗೆ ಕಡಿಮೆ ಮಾಡಬಹುದು, ಇದು ರಸಗೊಬ್ಬರ, ಸೆಮಿಕಂಡಕ್ಟರ್, ಎಲೆಕ್ಟ್ರಾನಿಕ್ಸ್ ಮತ್ತು ತಯಾರಿಕಾ ಕ್ಷೇತ್ರಗಳಿಗೆ ಕ್ರಾಂತಿಕಾರಕ ಬದಲಾವಣೆಯಾಗಿದೆ.

ಕರ್ನಾಟಕದ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಾಮಾಜಿಕ ಜಾಲತಾಣದಲ್ಲಿ ಈ ಸಾಧನೆಗೆ ಅಭಿನಂದನೆ ಸಲ್ಲಿಸಿ ಪೋಸ್ಟ್‌ ಮಾಡಿದ್ದು “ನಮ್ಮ ಉದಯೋನ್ಮುಖ ಮಂಗಳೂರು ಟೆಕ್ ಕ್ಲಸ್ಟರ್‌ನಿಂದ ಇಂತಹ ನಾವೀನ್ಯತೆಯ ಸ್ಟಾರ್ಟ್‌ಅಪ್‌ಗಳು ಮುಂಚೂಣಿಯಲ್ಲಿರುವುದನ್ನು ನೋಡುವುದು ಹೆಮ್ಮೆಗುರಿಯಾಗಿದ್ದು, #BeyondBengaluru ಮತ್ತು ಇತ್ತೀಚೆಗೆ ಪ್ರಾರಂಭವಾದ LEAP ಕಾರ್ಯಕ್ರಮಗಳಂತಹ ಉಪಕ್ರಮಗಳ ಮೂಲಕ ರಾಜ್ಯ ಸರ್ಕಾರವು ಶ್ರೇಣಿ-2 ಮತ್ತು ಶ್ರೇಣಿ-3 ನಗರಗಳಿಂದ ಉನ್ನತ ಪರಿಣಾಮದ ನವೀನತೆಯನ್ನು ಉತ್ತೇಜಿಸುತ್ತಿದೆ” ಎಂದು ತಿಳಿಸಿದ್ದಾರೆ.

ಅವರು ಮುಂದುವರಿಸಿ, “ಹೈಡ್ಜೆನ್ ಮಂಗಳೂರು ಕರ್ನಾಟಕದ ನವೀನತೆಯ ಶಕ್ತಿಯ ಪರಿಪೂರ್ಣ ಉದಾಹರಣೆ. ಈ ತಂತ್ರಜ್ಞಾನವು ಜಾಗತಿಕ ಸುಸ್ಥಿರತೆ ಮತ್ತು ಕೈಗಾರಿಕಾ ಪರಿವರ್ತನೆಗೆ ಶಕ್ತಿ ತುಂಬುತ್ತದೆ,” ಎಂದು ಖರ್ಗೆ ತಿಳಿಸಿದ್ದಾರೆ.

ಹೈಡ್ಜೆನ್‌ನ ತಂತ್ರಜ್ಞಾನವು ಶುದ್ಧ ಇಂಧನ ಉತ್ಪಾದನೆಯಲ್ಲಿ ಭಾರತವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವ ಸಾಧ್ಯತೆ ಇದೆ ಎಂದು ಉದ್ಯಮ ವಲಯದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version