Home ಸುದ್ದಿ ರಾಜ್ಯ ಕರ್ನಾಟಕ: ಕಾರ್ಪೊರೇಟ್ ಸಿಇಒಗಳ ಬಳಿಯೂ ಬಿಪಿಎಲ್‌!

ಕರ್ನಾಟಕ: ಕಾರ್ಪೊರೇಟ್ ಸಿಇಒಗಳ ಬಳಿಯೂ ಬಿಪಿಎಲ್‌!

0

ಕೆ.ವಿ.ಪರಮೇಶ್

ಕರ್ನಾಟಕ ಸರ್ಕಾರದ ಜನಪ್ರಿಯ ಯೋಜನೆ ‘ಅನ್ನಭಾಗ್ಯ’ಕ್ಕೆ ಕನ್ನ. ರಾಜ್ಯದಲ್ಲಿ 12.68 ಲಕ್ಷ ಅನಧಿಕೃತ ರೇಷನ್ ಕಾರ್ಡ್ ಪತ್ತೆ. ಸಂಯುಕ್ತ ಕರ್ನಾಟಕದಲ್ಲಿ ಪ್ರಕಟವಾದ ವಿಶೇಷ ವರದಿ.

ಬಿಪಿಎಲ್ ಪಡಿತರ ಕಾರ್ಡ್ ಹೊಂದಲು ಸರ್ಕಾರ ಕೆಲವೊಂದು ಮಾನದಂಡ ನಿಗದಿಪಡಿಸಿದೆ. ಅದು ಬಡವರು ಮತ್ತು ಅರ್ಹರಿಗೆ ಮಾತ್ರವೇ ಸಿಗಬೇಕೆನ್ನುವುದು ನಿಯಮ. ಆದರೆ ಕೆಲವು ಕಾರ್ಪೊರೇಟ್ ಕಂಪನಿಗಳ ಸಿಇಒಗಳು, ನಿರ್ದೇಶಕರೇ ಬಿಪಿಎಲ್ ಕಾರ್ಡ್ ಹೊಂದಿದ್ದಾರೆ. ಆಹಾರ ಇಲಾಖೆಯ ವಿಶೇಷ ಕಾರ್ಯಾಚರಣೆ ವೇಳೆ ಇಂತಹ ಅಕ್ರಮಗಳು ಪತ್ತೆಯಾಗಿವೆ. ಇದೀಗ ಇವುಗಳ ರದ್ದತಿಗೆ ಸರ್ಕಾರ ಮುಂದಾಗಿದೆ.

ಬೆಂಗೂರಲ್ಲೇ ಲಕ್ಷಕ್ಕೂ ಹೆಚ್ಚು: ರಾಜ್ಯದಲ್ಲಿ ಬರೋಬ್ಬರಿ 8 ಲಕ್ಷ ಮಂದಿ ಅನರ್ಹರು ಬಿಪಿಎಲ್ ಕಾರ್ಡ್ ಪಡೆದಿದ್ದಾರೆ ಎನ್ನುವ ಮಾಹಿತಿಯನ್ನು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯೇ ನೀಡಿದೆ. ಹೀಗಾಗಿ ಅನರ್ಹರು ಪಡೆದಿರುವ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಪಡಿಸಲು ಇಲಾಖೆ ಅಗತ್ಯ ಕ್ರಮ ಕೈಗೊಂಡಿದೆ.

ಬೆಂಗಳೂರು ಮಹಾನಗರವೊಂದರಲ್ಲೇ ಒಂದು ಲಕ್ಷಕ್ಕೂ ಅಧಿಕ ಮಂದಿ ಬಿಪಿಎಲ್ ಕಾರ್ಡ್ ಹೊಂದಿರುವುದು ಪತ್ತೆಯಾಗಿದ್ದು ಇವೆಲ್ಲವೂ ರದ್ದಾಗುವ ಪಟ್ಟಿಯಲ್ಲಿವೆ.

“ಅರ್ಹ ಬಡವರಿಗೆ ಬಿಪಿಎಲ್ ಕಾರ್ಡ್‌ಅಡಿ ರೇಷನ್ ಸಿಗಬೇಕೆಂಬುದು ನಮ್ಮ ಉದ್ದೇಶ. ದುರ್ಬಳಕೆ ಆಗುತ್ತಿರುವ ಮಾಹಿತಿ ಸಿಕ್ಕಿದ ಕಾರಣಕ್ಕೆ ವಿಶೇಷ ಕಾರ್ಯಾಚರಣೆ ಮೂಲಕ ಅನರ್ಹದಾರರನ್ನು ಪತ್ತೆ ಮಾಡಲಾಗಿದೆ. ಯಾವುದೇ ಮುಲಾಜಿಲ್ಲದೆ ಅಕ್ರಮ ಕಾರ್ಡ್‌ಗಳು ರದ್ದಾಗಲಿವೆ” ಎಂದು ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ಹೇಳಿದ್ದಾರೆ.

ಸರ್ಕಾರಕ್ಕೆ ಶೀಘ್ರ ವರದಿ ಸಲ್ಲಿಕೆ: ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಕೋಟ್ಯಧಿಪತಿಗಳ ಬಳಿಯೂ ಬಿಪಿಎಲ್ ಕಾರ್ಡ್ ಇದೆ. ಅನರ್ಹರು ಪಡೆದಿರುವ ಬಿಪಿಎಲ್ ಕಾರ್ಡ್‌ಗಳ ಮೇಲೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಈಗ ಹದ್ದಿನ ಕಣ್ಣಿಟ್ಟಿ ಪತ್ತೆ ಹಚ್ಚಿದೆ. ಇಲಾಖೆ ನಡೆದಿದ ವಿಶೇಷ ಕಾರ್ಯಾಚರಣೆ ವೇಳೆ 12,68,097 ಅನುಮಾನಾಸ್ಪದ ರೇಷನ್ ಕಾರ್ಡ್‌ಗಳನ್ನು ಪತ್ತೆ ಮಾಡಲಾಗಿದೆ. ಈ ಪೈಕಿ 8 ಲಕ್ಷ ರೇಷನ್ ಕಾರ್ಡ್‌ಗಳನ್ನು ರದ್ದುಗೊಳಿಸಲು ತೀರ್ಮಾನಿಸಲಾಗಿದ್ದು ಈ ಬಗ್ಗೆ ಶೀಘ್ರವೇ ಆಹಾರ ಇಲಾಖೆ ಸರ್ಕಾರಕ್ಕೆ ಈ ಬಗ್ಗೆ ಅಧಿಕೃತ ವರದಿ ಸಲ್ಲಿಸಲಿದೆ.

ವಿಶೇಷವೆಂದರೆ ವಿವಿಧ ಪ್ರತಿಷ್ಠಿತ ಕಂಪನಿಗಳಲ್ಲಿ ನಿರ್ದೇಶಕರಾಗಿರುವ 19,690 ಮಂದಿ ಕಾನೂನುಬಾಹಿರವಾಗಿ ಬಿಪಿಎಲ್ ಕಾರ್ಡ್ ಪಡೆದುಕೊಂಡಿದ್ದಾರೆ. 25 ಲಕ್ಷ ರೂಗಳಿಗಿಂತ ಅಧಿಕ ವಹಿವಾಟು ಹೊಂದಿರುವ 2,684 ಜನರು ಬಿಪಿಎಲ್ ಕಾರ್ಡ್‌ದಾರರಾಗಿದ್ದಾರೆ.

ಅಷ್ಟೇ ಅಲ್ಲ ಮೃತಪಟ್ಟವರ ಹೆಸರು ಮತ್ತು ನಕಲಿ ಬಿಪಿಎಲ್ ಕಾರ್ಡ್‌ಗಳನ್ನು ಬಳಸಿ ಪ್ರತಿ ತಿಂಗಳು ನ್ಯಾಯಬೆಲೆ ಅಂಗಡಿಗಳಲ್ಲಿ ಉಚಿತವಾಗಿ ಪಡಿತರ ಪಡೆಯುತ್ತಿರುವ ಅಘಾತಕಾರಿ ಸಂಗತಿಯೂ ಬೆಳಕಿಗೆ ಬಂದಿದೆ. ರಾಜ್ಯದಲ್ಲಿ ನಿಗದಿಗಿಂತ ಹೆಚ್ಚುವರಿಯಾಗಿ 14 ಲಕ್ಷ ರೇಷನ್ ಕಾರ್ಡ್‌ಗಳು ಇಲಾಖೆಯಿಂದಲೇ ವಿತರಿಲ್ಪಟ್ಟಿರುವುದು ವಿಶೇಷವಾಗಿದೆ.

ಇವೆಲ್ಲವೂ ರದ್ದಾಗುವ ಪಟ್ಟಿಯಲ್ಲಿವೆ

  • ಇ-ಕೆವೈಸಿ ಮಾಡಿಸದಿರುವರು 6,16,196
  • 1.20 ಲಕ್ಷಕ್ಕಿಂತ ಹೆಚ್ಚು ಆದಾಯದವರು 5,13,613
  • ಅಂತಾರಾಜ್ಯ ಮೂಲಕ ಕಾರ್ಡ್‌ದಾರರು 57,864
  • 7.5 ಎಕರೆಗೂ ಹೆಚ್ಚು ಭೂಮಿ ಇರುವವರು 33,456
  • 6 ತಿಂಗಳಿಂದ ರೇಷನ್ ಪಡೆಯದವರು 19,893
  • ವಿವಿಧ ಕಂಪನಿಗಳ ನಿರ್ದೇಶಕರ ಬಳಿ 19,690
  • 25ಲಕ್ಷ ರೂ. ವಹಿವಾಟು ಮೀರಿದವರ ಬಳಿ 2,684
  • ಮೃತರ ಹೆಸರಲ್ಲಿ ರೇಷನ್ ಕಾರ್ಡ್ ಬಳಕೆ 144

ಅನಧಿಕೃತ ಕಾರ್ಡ್‌ಗಳ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಿದ ಬಳಿಕ ರದ್ದುಗೊಳ್ಳಲಿವೆ. ಕೇಂದ್ರ ಸರ್ಕಾರ ಕೋಟ್ಯಂತರ ಜನರು ಬಡತನ ರೇಖೆಯಿಂದ ಹೊರಗೆ ಬಂದಿದ್ದಾರೆ ಹಾಗೂ ಬಡವರ ಸಂಖ್ಯೆ ದೇಶದಲ್ಲಿ ಕಳೆದ 10 ವರ್ಷಗಳಲ್ಲಿ ಭಾರಿ ಪ್ರಮಾಣದಲ್ಲಿ ಕಡಿಮೆಯಾಗಿದೆ ಎಂದು ಘೋಷಿಸಿದೆ. ಆದರೆ ಕರ್ನಾಟಕ ರಾಜ್ಯದಲ್ಲಿ ಮಾತ್ರ ಸರ್ಕಾರ ಹೇಳುವ ಅಧಿಕೃತ ಬಡವರ ಸಂಖ್ಯೆಗಿಂತ ಅಧಿಕ ಸಂಖ್ಯೆಯಲ್ಲಿ ಬಿಪಿಎಲ್ ಕಾರ್ಡ್‌ಗಳಿುವುದು ಮಾತ್ರ ವಿಪರ್ಯಾಸ.

NO COMMENTS

LEAVE A REPLY

Please enter your comment!
Please enter your name here

Exit mobile version