ಬೆಂಗಳೂರು: ಸರ್ವರ್ ಸಮಸ್ಯೆ ಸೇರಿದಂತೆ ಅನೇಕ ರೀತಿಯ ಗೊಂದಲಗಳ ನಡುವೆಯೇ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಇಡೀ ರಾಜ್ಯದಲ್ಲಿ ನಡೆಯುತ್ತಿದ್ದು, ಆಯೋಗದ ಅಧಿಕೃತ ಮಾಹಿತಿಯಂತೆ ಇದುವರೆಗೆ ಸುಮಾರು 13 ಲಕ್ಷ ಮನೆಗಳ (ರಾಜ್ಯದಲ್ಲಿರುವುದು 2 ಕೋಟಿ ಮನೆಗಳು) ಸಮೀಕ್ಷೆ ಪೂರ್ಣಗೊಂಡಿದೆ. ಅಂದರೆ, ಒಂದು ಅಂದಾಜಿನ ಪ್ರಕಾರ ಈ 7 ದಿನಗಳಲ್ಲಿ ಆಗಿರುವುದು ಬರೀ 6% ಮನೆಗಳ ಸಮೀಕ್ಷೆ ಅಷ್ಟೇ. ಇದೇ ಗತಿಯಲ್ಲಿ ಸರ್ವೇ ಕಾರ್ಯ ಮುಂದುವರಿದರೆ ಸರ್ಕಾರ ನಿಗದಿ ಮಾಡಿರುವ ಕಾಲ ಮಿತಿ ಅಕ್ಟೋಬರ್ 7ರೊಳಗೆ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಮುಗಿಯುವುದು ಅಸಾಧ್ಯ ಎನ್ನಲಾಗುತ್ತಿದೆ.
ಇನ್ನು, ಗಣತಿದಾರರಿಗೆ ಮಾಹಿತಿ ನೀಡುವುದು ಐಚ್ಛಿಕ ಎಂಬ ಹೈಕೋರ್ಟ್ ಆದೇಶ ಕೂಡ ಸಮೀಕ್ಷೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು, ಅನೇಕ ಕಡೆಗಳಲ್ಲಿ ವಿವರ ನೀಡಲು ಜನರು ನಿರಾಕರಿಸುತ್ತಿರುವುದಾಗಿ ವರದಿಯಾಗಿದೆ.
ಹೈಕೋರ್ಟ್ ಎಫೆಕ್ಟ್ ಸಮೀಕ್ಷೆ ಕ್ಷೀಣ: ಲಭ್ಯ ಮಾಹಿತಿ ಯಂತೆ ಕಳೆದ 6 ದಿನಗಳಲ್ಲಿ ಒಟ್ಟಾರೆ ಸಮೀಕ್ಷೆ ಪ್ರಮಾಣ ಶೇ. 6ರಷ್ಟನ್ನೂ ದಾಟಿಲ್ಲ ಎನ್ನಲಾಗಿದೆ. ಇನ್ನುಳಿದ ಒಂಭತ್ತು ದಿನಗಳಲ್ಲಿ ಸರ್ಕಾರದ ಸೂಚನೆಯಂತೆ ಶೇ. 100ರಷ್ಟು ಸಮೀಕ್ಷೆ ಕಾರ್ಯ ಕಷ್ಟಸಾಧ್ಯ ಎನ್ನುವ ಅಭಿಪ್ರಾಯ ಗಣತಿದಾರರಿಂದಲೇ ವ್ಯಕ್ತವಾಗುತ್ತಿರುವುದು ವಿಶೇಷವಾಗಿದೆ.
ನಿನ್ನೆಯಷ್ಟೇ ಹೈಕೋರ್ಟ್ ಗಣತಿ ವೇಳೆ ಸಾರ್ವಜನಿಕರು ಮಾಹಿತಿ ಹಂಚಿಕೊಳ್ಳುವುದು ಐಚ್ಛಿಕ ಎಂದು ಆದೇಶಿಸಿದ ಬೆನ್ನಲ್ಲೇ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಗಣತಿದಾರ ಶಿಕ್ಷಕರಿಗೆ ವಿವರ ಹಂಚಿಕೊಳ್ಳಲು ನಿರಾಕರಿಸುತ್ತಿರುವುದು ಸಾಮಾನ್ಯವಾಗಿದೆ. ಇನ್ನೂ ಶಿಕ್ಷಕರು ಜಿಯೋ ವ್ಯವಸ್ಥೆಯ ತಾಂತ್ರಿಕ ವೈಫಲ್ಯದಿಂದ ಮಲೆನಾಡು ಭಾಗದ ಜಿಲ್ಲೆಯ ಕೆಲವೆಡೆ ನಿಗದಿಪಡಿಸಿರುವ ಮನೆಗಳನ್ನು ತಲುಪಲು ಸಾಧ್ಯವಾಗುತ್ತಿಲ್ಲ ಎಂಬ ದೂರುಗಳು ಕೇಳಿ ಬಂದಿವೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಿಯೋಜಿತ ಶಿಕ್ಷಕಿಯೊಬ್ಬರು ಗಣತಿಗೆ ತೆರಳಿದ ವೇಳೆ ನಾಯಿಕಚ್ಚಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಆರಂಭದಲ್ಲಿ ಇದೆಲ್ಲ ಸಾಮಾನ್ಯ: ಸಾಮಾಜಿಕ ನ್ಯಾಯ ಒದಗಿಸುವ ಸದುದ್ದೇಶದಿಂದ ಸರ್ಕಾರ ಸಮೀಕ್ಷೆ ನಡೆಸುತ್ತಿದೆ. ಇದು ಜಾತಿಗಣತಿ ಅಲ್ಲ. ಪ್ರತಿಪಕ್ಷಗಳ ರಾಜಕೀಯದಿಂದ ಜನಸಾಮಾನ್ಯರ ಹಕ್ಕು ಕಸಿಯುವ ಯತ್ನ ನಡೆಯುತ್ತಿದೆ ಎಂದು ಸಿಎಂ, ಡಿಸಿಎಂ ವಾಗ್ದಾಳಿ ನಡೆಸಿದ್ದಾರೆ. ಆರಂಭದಲ್ಲಿ ಕೆಲವು ಅಡಚಣೆ ಸಹಜ. ಸಮಸ್ಯೆ ಬಗೆಹರಿಸಲು ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ಕೊಡಲಾಗಿದೆ. ಇನ್ನೆರಡು ದಿನಗಳಲ್ಲಿ ಅಂದುಕೊಂಡಿದ್ದಕ್ಕಿಂತಲೂ ವೇಗವಾಗಿ ಸಮೀಕ್ಷೆ ಕಾರ್ಯ ನಡೆಯಲಿದೆ. ರಾಜ್ಯಾದ್ಯಂತ ಜನತೆಯೂ ಸಂಪೂರ್ಣ ಸಹಕಾರ ನೀಡುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಇನ್ನೂ ಬಗೆಹರಿದಿಲ್ಲ ತಾಂತ್ರಿಕ ಸಮಸ್ಯೆ: ತಾಂತ್ರಿಕ ಅಡಚಣೆಗಳನ್ನು ನಿವಾರಿಸುವಂತೆ ಸಂಬಂಧಿತ ಅಧಿಕಾರಿಗಳಿಗೆ ಸಿಎಂ ಸೂಚಿಸಿದ್ದರೂ ಅದು ಪೂರ್ಣ ಪ್ರಮಾಣ ದಲ್ಲಿ ಕಾರ್ಯಗತವಾಗಿಲ್ಲ. ಪರಿಣಾಮ ಶುಕ್ರವಾರವೂ ಸರ್ವರ್ ಸಮಸ್ಯೆ ಬಗೆಹರಿ ದಿಲ್ಲ. ಆ್ಯಪ್ ಕೂಡ ತೆರೆದುಕೊಳ್ಳದೆ ಯಾದಗಿರಿ, ದಕ್ಷಿಣಕನ್ನಡ, ಬೆಂಗಳೂರು ಗ್ರಾಮಾಂತರ ಸೇರಿದಂತೆ ಐದಾರು ಜಿಲ್ಲೆಗಳ ಸಮೀಕ್ಷೆ ಪ್ರಮಾಣ ಕಡಿಮೆಯಾಗಿದೆ.
ಸಮೀಕ್ಷೆಗೆ ಗೈರಾದ ನಾಲ್ವರ ಅಮಾನತು: ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ಸಮೀಕ್ಷಾ ಕಾರ್ಯಕ್ಕೆ ಬಾರದ ದಾವಣಗೆರೆಯ ಇಬ್ಬರು ಶಿಕ್ಷಕರು ಸೇರಿ ಮೂವರು ಹಾಗೂ ರಾಯಚೂರಿನ ಲಿಂಗಸೂಗೂರ ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಯನ್ನು ಕೆಸಿಎಸ್‌ಆರ್ ಅಡಿಯಲ್ಲಿ ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ, ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತುಗೊಳಿಸಲಾಗಿದೆ.