ಬೆಂಗಳೂರು: ಕರ್ನಾಟಕದ ತಂತ್ರಜ್ಞಾನ ಕ್ಷೇತ್ರಕ್ಕೆ ಐತಿಹಾಸಿಕ ದಿನ—‘ಬೆಂಗಳೂರು ತಂತ್ರಜ್ಞಾನ ಶೃಂಗಸಭೆ–2025’ರ ಉದ್ಘಾಟನಾ ಕೂಟದಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೇಶದ ಮೊದಲ ಸ್ಥಳೀಯವಾಗಿ ವಿನ್ಯಾಸಗೊಳಿಸಲ್ಪಟ್ಟು, ಸಂಪೂರ್ಣವಾಗಿ ಕರ್ನಾಟಕದಲ್ಲೇ ಅಭಿವೃದ್ಧಿಗೊಂಡ ‘ಕಿಯೋ’ (KEO) ಕೃತಕ ಬುದ್ಧಿಮತ್ತೆ ಕಂಪ್ಯೂಟರ್ ಅನ್ನು ಅಧಿಕೃತವಾಗಿ ಲೋಕಾರ್ಪಣೆ ಮಾಡಿದರು.
ರಾಜ್ಯದ ಪ್ರತಿಯೊಂದು ಮನೆಗೂ ತಂತ್ರಜ್ಞಾನ ತಲುಪಿಸುವ ಮಹತ್ವಾಕಾಂಕ್ಷೆಯ ಗುರಿ ಈ ಯೋಜನೆಯ ಹಿಂದೆ ಇದೆ. ಕಂಪ್ಯೂಟರ್ ಎನ್ನುವುದು ಇನ್ನೂ ಅನೇಕ ಮನೆಗಳಿಗೆ ‘ಐಶ್ವರ್ಯವಸ್ತು’ಯಾಗಿರುವ ಪರಿಸ್ಥಿತಿಯಲ್ಲಿ, ಕೇವಲ ₹18,999 ದಲ್ಲಿ ‘ಕಿಯೋ’ ಲಭ್ಯವಾಗುತ್ತಿರುವುದು, ಲಕ್ಷಾಂತರ ವಿದ್ಯಾರ್ಥಿಗಳು, ಸಣ್ಣ ವ್ಯಾಪಾರಿಗಳು, ಸರ್ಕಾರಿ ಕಚೇರಿಗಳು, ಹಾಗೂ ಸಾಮಾನ್ಯ ಕುಟುಂಬಗಳಿಗೆ ಡಿಜಿಟಲ್ ಪ್ರವೇಶವನ್ನು ಸಮಾನಗೊಳಿಸುವ ಮಹತ್ವದ ಹೆಜ್ಜೆ ಎಂದು ಸರ್ಕಾರ ಹೇಳಿದೆ.
ಡಿಜಿಟಲ್ ಅಸಮಾನತೆಗೆ ‘ಕಿಯೋ’ ಉತ್ತರ: ಭಾರತದ ಒಟ್ಟು ಮನೆತನಗಳಲ್ಲಿ ಕೇವಲ 10% ಮತ್ತು ತಂತ್ರಜ್ಞಾನ ರಾಜ್ಯವೆಂದು ಹೆಸರುವಾಸಿಯಾದ ಕರ್ನಾಟಕದಲ್ಲಿಯೂ ಕೇವಲ 15% ಕುಟುಂಬಗಳಲ್ಲೇ ಕಂಪ್ಯೂಟರ್ ಇರುವ ವಾಸ್ತವ ಚಿತ್ರಣ ಸರ್ಕಾರದ ಮುಂದಿತ್ತು. ಕೊರೋನಾ ಕಾಲದಲ್ಲಿ ವಿದ್ಯಾರ್ಥಿಗಳ ಕಲಿಕೆ ನಿಂತ ಸಂದರ್ಭದಲ್ಲಿ, ಸೂಕ್ತ ಸಾಧನಗಳಿಲ್ಲದ 60% ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆನ್‌ಲೈನ್ ಶಿಕ್ಷಣದಿಂದ ಹೊರಗುಳಿದಿದ್ದರು. “ಕಿಯೋ ಡಿಜಿಟಲ್ ಅಸಮಾನತೆಗೆ ಉತ್ತರ. ಪ್ರತಿಯೊಬ್ಬ ವಿದ್ಯಾರ್ಥಿ, ಪ್ರತಿಯೊಬ್ಬ ಸಣ್ಣ ಉದ್ಯಮಿ, ಪ್ರತಿಯೊಂದು ಕುಟುಂಬವೂ ಡಿಜಿಟಲ್ ಆರ್ಥಿಕತೆಯ ಭಾಗವಾಗಬೇಕು,” ಎಂದು ಐಟಿ/ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಕಿಯೋನ ವಿಶೇಷತೆಗಳು: ‘KEO’ ಎಂಬ ಪದಕ್ಕೆ Knowledge-driven, Economical, Open-source ಎಂಬರ್ಥ. ಹೆಸರಿನಂತೆ ಇದು ಕಡಿಮೆ ವೆಚ್ಚದ, ಎಲ್ಲರಿಗೂ ಲಭ್ಯವಾಗುವ ಹಾಗೂ ಮುಕ್ತ ಮೂಲಾಧಾರಿತ ತಂತ್ರಜ್ಞಾನವಾಗಿದೆ.
ಈ ಕಂಪ್ಯೂಟರ್‌ನ್ನು ಕಿಯೋನಿಕ್ಸ್ (KEONICS) ಐಟಿ/ಬಿಟಿ ಇಲಾಖೆ ಸ್ಥಳೀಯ ಸ್ಟಾರ್ಟ್‌ಅಪ್‌ಗಳು ಹಾಗೂ ಸೆಮಿಕಂಡಕ್ಟರ್ ಸಂಸ್ಥೆಗಳು ಯುವ ಸಹಯೋಗದಲ್ಲಿ ರೂಪಿಸಲಾಗಿದೆ.
ತಾಂತ್ರಿಕ ವಿಶೇಷತೆಗಳು: 64-ಬಿಟ್ Quad-core RISC-V ಪ್ರೊಸೆಸರ್ ಇದ್ದು ಲಿನಕ್ಸ್ ಆಧಾರಿತ ಆಪರೇಟಿಂಗ್ ಸಿಸ್ಟಮ್ ಹೊಂದಿದೆ. 4G, Wi-Fi, Ethernet, USB-A, USB-C, HDMI ಎಲ್ಲ ಪೋರ್ಟ್‌ಗಳು ಲಭ್ಯವಿದ್ದು. ಇಂಟರ್ನೆಟ್ ಇಲ್ಲದೆ AI ಚಾಲನೆ ಮಾಡಲು ಹೊಂದುವ On-device AI core ಇದೆ. ಪ್ರತಿ ಸೆಕೆಂಡಿಗೆ 4 ಟ್ರಿಲಿಯನ್ ಗಣನೆಗಳ ಸಾಮರ್ಥ್ಯ ಹೊಂದಿರುವ ಈ ಗಣಕಯಂತ್ರ ಆದುನಿಕತೆಯ ಸವಾಲಿಗೆ ಸಹಕಾರಿಯಾಗಿದೆ.
ವಿದ್ಯಾರ್ಥಿಗಳ ಹೊಸ ಗೆಳೆಯ — ‘ಬುದ್ಧ’ AI: ಕಿಯೋ ಕಂಪ್ಯೂಟರ್‌ನಲ್ಲಿ ಪೂರ್ವಸ್ಥಾಪಿತವಾಗಿರುವ ‘BUDDH’ AI ಟ್ಯೂಟರ್ DSERT ಪಠ್ಯಕ್ರಮದ ಬಗ್ಗೆ ಸಂಪೂರ್ಣ ತರಬೇತಿ ಪಡೆದಿದೆ. ವಿದ್ಯಾರ್ಥಿಗಳು ಈ ಮೂಲಕ ಪ್ರಶ್ನೆ ಕೇಳಬಹುದು. ಪಾಠದ ಅರ್ಥ ತಿಳಿದುಕೊಳ್ಳಬಹುದು ಅಲ್ಲದೆ ವೈಯಕ್ತಿಕ ಮಾರ್ಗದರ್ಶನ ಪಡೆಯಬಹುದಾಗಿದೆ. ಮೊದಲ ಹಂತದಲ್ಲಿ ಇಂಗ್ಲಿಷ್‌ನಲ್ಲಿ ಲಭ್ಯವಿದ್ದು, ಶೀಘ್ರದಲ್ಲೇ ಕನ್ನಡ ಸೇರಿದಂತೆ ಇತರ ಭಾಷೆಗಳಿಗೆ ವಿಸ್ತರಣೆಯಾಗಲಿದೆ.
ಲಭ್ಯತೆ : keonext.in ಮೂಲಕ ಮುಂಗಡ ಬುಕ್ಕಿಂಗ್ ಈಗಾಗಲೇ ಆರಂಭವಾಗಿದೆ. “ಕಿಯೋ ಕರ್ನಾಟಕದ ನವೀನತೆಯ ಶಕ್ತಿಯನ್ನು ತೋರಿಸುತ್ತದೆ. ಇದು ಜನರಿಗಾಗಿಯೇ ವಿನ್ಯಾಸಗೊಳಿಸಿದ ಸಾಧನ,” ಎಂದು ಕಿಯೋನಿಕ್ಸ್ ಅಧ್ಯಕ್ಷ ಶರತ್ ಕುಮಾರ್ ಬಚ್ಚೇಗೌಡ ಹೇಳಿದರು.
