ನಂದಿನಿ ಹೆಸರಲ್ಲಿ ದಂಧೆ: ಕನ್ನಡಿಗರ ಹೆಮ್ಮೆಯ ಬ್ರ್ಯಾಂಡ್ ‘ನಂದಿನಿ’ಯ ಹೆಸರಿನಲ್ಲಿಯೇ ನಡೆಯುತ್ತಿದ್ದ ಬಹುದೊಡ್ಡ ವಂಚನೆಯ ಜಾಲವನ್ನು ಬೆಂಗಳೂರು ಸಿಸಿಬಿ ಮತ್ತು ಕೆಎಂಎಫ್ ಜಾಗೃತ ದಳದ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಭೇದಿಸಿದ್ದಾರೆ.
ಅಸಲಿ ನಂದಿನಿ ತುಪ್ಪಕ್ಕೆ ಪಾಮ್ ಆಯಿಲ್, ತೆಂಗಿನೆಣ್ಣೆ ಮತ್ತು ಡಾಲ್ಡಾ ಬೆರೆಸಿ, 1 ಲೀಟರ್ ತುಪ್ಪವನ್ನು 4 ಲೀಟರ್‌ಗೆ ಪರಿವರ್ತಿಸಿ, ಬೆಂಗಳೂರಿನ ಜನತೆಗೆ ಮಾರಾಟ ಮಾಡುತ್ತಿದ್ದ ಮೂವರು ಖದೀಮರನ್ನು ಬಂಧಿಸಲಾಗಿದೆ.
ತಮಿಳುನಾಡಿನಲ್ಲಿತ್ತು ನಕಲಿ ತುಪ್ಪದ ಅಡ್ಡೆ: ಬೆಂಗಳೂರಿನಲ್ಲಿ ನಕಲಿ ನಂದಿನಿ ತುಪ್ಪ ಮಾರಾಟವಾಗುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಅಧಿಕಾರಿಗಳು, ಇದರ ಮೂಲವನ್ನು ಹುಡುಕುತ್ತಾ ಹೋದಾಗ, ತನಿಖೆಯ ದಾರಿ ತಮಿಳುನಾಡಿಗೆ ತಲುಪಿದೆ.
ತಮಿಳುನಾಡಿನ ತಿರುಪೂರು ಜಿಲ್ಲೆಯಲ್ಲಿದ್ದ ಅಡ್ಡೆಯೊಂದರ ಮೇಲೆ ದಾಳಿ ನಡೆಸಿದಾಗ, ಈ ಇಡೀ ಜಾಲದ ಸಿಕ್ಕಿಬಿದ್ದಿದೆ. ಆಘಾತಕಾರಿ ವಿಷಯವೆಂದರೆ, ಈ ಜಾಲದ ಪ್ರಮುಖ ಆರೋಪಿ ಮಹೇಂದ್ರ, ಸ್ವತಃ ತಮಿಳುನಾಡಿನ ಅಧಿಕೃತ ನಂದಿನಿ ಉತ್ಪನ್ನಗಳ ಡೀಲರ್ ಆಗಿದ್ದ!
ನಡೆಯುತ್ತಿತ್ತು ಹೇಗೆ ಈ ವಂಚನೆ?: ಕರ್ನಾಟಕದಿಂದ ಅಧಿಕೃತವಾಗಿ ನಂದಿನಿ ತುಪ್ಪವನ್ನು ಖರೀದಿಸುತ್ತಿದ್ದ ಮಹೇಂದ್ರ, ಅದನ್ನು ತನ್ನ ಅಡ್ಡೆಗೆ ಕೊಂಡೊಯ್ದು, ಅಲ್ಲಿ ಯಂತ್ರಗಳ ಸಹಾಯದಿಂದ ಅದಕ್ಕೆ ಪಾಮ್ ಆಯಿಲ್, ಡಾಲ್ಡಾ ಮತ್ತು ತೆಂಗಿನೆಣ್ಣೆಯನ್ನು ಮಿಶ್ರಣ ಮಾಡುತ್ತಿದ್ದ.
ಈ ಮೂಲಕ, 1 ಲೀಟರ್ ಅಸಲಿ ತುಪ್ಪವನ್ನು ಬರೋಬ್ಬರಿ 4 ಲೀಟರ್ ನಕಲಿ ತುಪ್ಪವಾಗಿ ಪರಿವರ್ತಿಸುತ್ತಿದ್ದ. ನಂತರ, ಅದನ್ನು ಮತ್ತೆ ನಂದಿನಿಯ ಅಸಲಿ ಬಾಟಲಿಗಳಲ್ಲಿಯೇ ತುಂಬಿ, ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ತನ್ನ ಗೋಡೌನ್‌ಗೆ ಕಳುಹಿಸುತ್ತಿದ್ದ. ಇಲ್ಲಿಂದಲೇ ಬೆಂಗಳೂರಿನಾದ್ಯಂತ ಈ ವಿಷಕಾರಿ ತುಪ್ಪ ಸರಬರಾಜಾಗುತ್ತಿತ್ತು. 2018ರಿಂದಲೇ ಈ ದಂಧೆ ನಡೆಯುತ್ತಿತ್ತು ಎಂಬುದು ತನಿಖೆಯಿಂದ ತಿಳಿದುಬಂದಿದೆ.
ಕೋಟ್ಯಂತರ ಮೌಲ್ಯದ ವಸ್ತುಗಳು ವಶ: ಸಿಸಿಬಿ ಮತ್ತು ಕೆಎಂಎಫ್ ಅಧಿಕಾರಿಗಳು ತಮಿಳುನಾಡು ಮತ್ತು ಚಾಮರಾಜಪೇಟೆಯ ಗೋಡೌನ್‌ಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಈ ವೇಳೆ, ಬರೋಬ್ಬರಿ 8,136 ಲೀಟರ್ ನಕಲಿ ತುಪ್ಪವನ್ನು ವಶಪಡಿಸಿಕೊಳ್ಳಲಾಗಿದೆ.
ಇದರ ಜೊತೆಗೆ, 4 ವಾಹನಗಳು, ಅಪಾರ ಪ್ರಮಾಣದ ಪಾಮ್ ಆಯಿಲ್, ಡಾಲ್ಡಾ ಸೇರಿದಂತೆ ಒಟ್ಟು 1.26 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಕಚ್ಚಾವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ನಂದಿನಿ ಬ್ರ್ಯಾಂಡ್‌ಗೆ ಕಳಂಕ ತರುವ ಯತ್ನ: ಒಂದು ಕಡೆ ನಂದಿನಿ ಬ್ರ್ಯಾಂಡ್ ಜಾಗತಿಕವಾಗಿ ಬೆಳೆಯುತ್ತಿದ್ದು, ಕಳೆದ ನಾಲ್ಕು ವರ್ಷಗಳಲ್ಲಿ 19,601 ಕೋಟಿ ರೂಪಾಯಿ ಆದಾಯ ಗಳಿಸಿದೆ. ಮತ್ತೊಂದೆಡೆ, ಇದೇ ಬ್ರ್ಯಾಂಡ್‌ನ ಹೆಸರನ್ನು ಬಳಸಿಕೊಂಡು ಇಂತಹ ವಂಚನೆಯ ಜಾಲಗಳು ಹುಟ್ಟಿಕೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಸದ್ಯಕ್ಕೆ, ಬಂಧಿತ ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದ್ದು, ಈ ಜಾಲದಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿರುವ ಸಾಧ್ಯತೆಯಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
