Home ಸುದ್ದಿ ರಾಜ್ಯ ಮೇಕೆದಾಟು ಯೋಜನೆ: ತಮಿಳುನಾಡಿನ ಅರ್ಜಿ ವಜಾಗೊಳಿಸಿದ ಸುಪ್ರೀಂ

ಮೇಕೆದಾಟು ಯೋಜನೆ: ತಮಿಳುನಾಡಿನ ಅರ್ಜಿ ವಜಾಗೊಳಿಸಿದ ಸುಪ್ರೀಂ

0

ನವದೆಹಲಿ: ಮೇಕೆದಾಟು ಸಮತೋಲನ ಜಲಾಶಯ (Balancing Reservoir) ನಿರ್ಮಾಣಕ್ಕೆ ಮುಂದಾಗಿರುವ ಕರ್ನಾಟಕ ಸರ್ಕಾರದ ಕ್ರಮ ಪ್ರಶ್ನಿಸಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಗುರುವಾರ ತಿರಸ್ಕರಿಸಿದೆ. ಮುಖ್ಯ ನ್ಯಾಯಮೂರ್ತಿ ಬಿ.ಆರ್ ಗವಾಯಿ ನೇತೃತ್ವದ ಪೀಠವು, “ಈ ಯೋಜನೆ ತಜ್ಞರ ಪರಿಗಣನೆಯಲ್ಲಿದ್ದು, ನ್ಯಾಯಾಲಯ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ” ಎಂದು ಸ್ಪಷ್ಟಪಡಿಸಿದೆ.

ಕರ್ನಾಟಕದ ಬಹು ನಿರೀಕ್ಷಿತ ಯೋಜನೆಯಾದ ಮೇಕೆದಾಟು ಅಣೆಕಟ್ಟು ಯೋಜನೆ ರಾಜ್ಯದ ಕುಡಿಯುವ ನೀರಿನ ಅಗತ್ಯ ಪೂರೈಸಲು ಹಾಗೂ ಪ್ರವಾಹ ನಿಯಂತ್ರಣ ಸಾಧಿಸಲು ಉದ್ದೇಶಿಸಿರುವದು. ಈ ತೀರ್ಪು ಹೊರಬಂದ ಹಿನ್ನೆಲೆಯಲ್ಲಿ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು “ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ಯಾವುದೇ ಹಾನಿಯಾಗುವುದಿಲ್ಲ. ಕೋರ್ಟ್ ತೀರ್ಪು ಬೆಂಗಳೂರಿಗರ ಸಂತಸ ತರುವಂತದ್ದು” ಎಂದು ಪ್ರತಿಕ್ರಿಯಿಸಿದ್ದಾರೆ.

ಮೇಕೆದಾಟು ಯೋಜನೆಯ ಉದ್ದೇಶ: ಕಾವೇರಿ ನದಿಯ ಮೇಲೆ, ಬೆಂಗಳೂರು ದಕ್ಷಿಣ ಜಿಲ್ಲೆಯ ಕನಕಪುರ ತಾಲ್ಲೂಕಿನ ಮೇಕೆದಾಟು ಪ್ರದೇಶದಲ್ಲಿ ನಿರ್ಮಿಸಲಿರುವ ಈ ಸಮತೋಲನ ಜಲಾಶಯದಿಂದ ಬೆಂಗಳೂರಿಗೆ ಕುಡಿಯುವ ನೀರಿನ ಪೂರೈಕೆ ಹಾಗೂ ನೀರಿನ ಸಂಗ್ರಹಣೆ ಸುಧಾರಣೆ ಸಾಧ್ಯವಾಗಲಿದೆ.

ತಮಿಳುನಾಡಿನ ನಿಲುವು: ತಮಿಳುನಾಡು ಸರ್ಕಾರವು ಈ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದು, ಮೇಕೆದಾಟು ಅಣೆಕಟ್ಟು ನಿರ್ಮಾಣವಾದರೆ ಕಾವೇರಿ ನೀರಿನ ತಮ್ಮ ಪಾಲು ಕಡಿಮೆಯಾಗುವ ಸಾಧ್ಯತೆ ಇದೆ ಎಂದು ವಾದಿಸಿತ್ತು. ಇದರ ಹಿನ್ನೆಲೆಯಲ್ಲಿ ಯೋಜನೆ ಸ್ಥಗಿತಗೊಳಿಸಲು ತಮಿಳುನಾಡು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು.

ಆದರೆ ಕೋರ್ಟ್ ಸ್ಪಷ್ಟವಾಗಿ ಹೇಳಿದ್ದು — ಯೋಜನೆ ಇನ್ನೂ ಮಾತುಕತೆ ಹಂತದಲ್ಲಿದ್ದು, ಸರ್ಕಾರಗಳೇ ಪರಸ್ಪರ ಚರ್ಚೆ ಮೂಲಕ ನಿರ್ಧಾರ ಕೈಗೊಳ್ಳಬೇಕು. ಈ ವಿಚಾರದಲ್ಲಿ ನ್ಯಾಯಾಲಯ ಮಧ್ಯಪ್ರವೇಶ ಮಾಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿ ಅರ್ಜಿಯನ್ನು ವಜಾಗೊಳಿಸಿದೆ.

ಈ ತೀರ್ಪಿನಿಂದ ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗೆ ಒಂದು ರೀತಿಯಲ್ಲಿ ಹಸಿರು ನಿಶಾನೆ ದೊರೆತಂತಾಗಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version