ಬೆಂಗಳೂರು: ರಾಜ್ಯದ ಸಾರ್ವಜನಿಕ ವಿಶ್ವವಿದ್ಯಾಲಯಗಳಲ್ಲಿ ಹೆಚ್ಚಿನ ಸಂಖ್ಯೆಯ ಹುದ್ದೆಗಳು ಖಾಲಿ ಉಳಿದಿದ್ದು, ಇದು ಗುಣಮಟ್ಟದ ಶಿಕ್ಷಣ ನೀಡಲು ಅಡಚಣೆಯನ್ನು ಉಂಟುಮಾಡಿದೆ. ಉನ್ನತ ಶಿಕ್ಷಣ ಇಲಾಖೆಯ ವರದಿಯ ಪ್ರಕಾರ, ವಿಶ್ವವಿದ್ಯಾಲಯಗಳಲ್ಲಿ ಶೇ. 64ರಿಂದ ಶೇ. 69ರಷ್ಟು ಹುದ್ದೆಗಳು ಭರ್ತಿಯಾಗಿಲ್ಲ.
ರಾಜ್ಯದಲ್ಲಿರುವ 32 ಸಾರ್ವಜನಿಕ ವಿಶ್ವವಿದ್ಯಾಲಯಗಳಲ್ಲಿ ಒಟ್ಟು 4,705 ಬೋಧಕ ಹುದ್ದೆಗಳು ಮಂಜೂರಾಗಿದ್ದು, ಅದರಲ್ಲಿ 1,705 ಹುದ್ದೆಗಳು ಮಾತ್ರ ಭರ್ತಿಯಾಗಿವೆ. ಉಳಿದ 3,000 (ಶೇ. 64) ಹುದ್ದೆಗಳು ಖಾಲಿ ಇವೆ. ಇದೇ ರೀತಿ, ಬೋಧಕೇತರ ಹುದ್ದೆಗಳೂ ಹೆಚ್ಚಿನ ಸಂಖ್ಯೆಯಲ್ಲಿ ಖಾಲಿ ಇವೆ. ಒಟ್ಟು 9,107 ಹುದ್ದೆಗಳ ಪೈಕಿ 2,818 ಮಾತ್ರ ಭರ್ತಿಯಾಗಿದ್ದು, 6,289 (ಶೇ. 69) ಹುದ್ದೆಗಳು ಖಾಲಿ ಉಳಿದಿವೆ.
ಈ ಹುದ್ದೆಗಳ ಕೊರತೆಯಿಂದಾಗಿ, ಅತಿಥಿ ಉಪನ್ಯಾಸಕರನ್ನು ಅವಲಂಬಿಸಲಾಗಿದೆ. ಆದರೆ, ಅತಿಥಿ ಉಪನ್ಯಾಸಕರ ನೇಮಕಾತಿಯೂ ಕೂಡ ಅಸಮರ್ಪಕವಾಗಿದೆ.
ಇಲಾಖೆಯ ವರದಿಯ ಪ್ರಕಾರ, ಕೆಲವು ವಿಶ್ವವಿದ್ಯಾಲಯಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ಅತಿಥಿ ಉಪನ್ಯಾಸಕರು ಕೆಲಸ ಮಾಡುತ್ತಿದ್ದರೆ, ಇನ್ನೂ ಕೆಲವು ಕಡೆಗಳಲ್ಲಿ ಕೊರತೆ ಎದುರಾಗಿದೆ. ಉದಾಹರಣೆಗೆ, ಮೈಸೂರು ವಿಶ್ವವಿದ್ಯಾಲಯದಲ್ಲಿ 391 ಬೋಧಕ ಹುದ್ದೆಗಳು ಖಾಲಿಯಿದ್ದರೂ, 529 ಅತಿಥಿ ಉಪನ್ಯಾಸಕರಿದ್ದಾರೆ.
ಇದು ಅಗತ್ಯಕ್ಕಿಂತ 138 ಹೆಚ್ಚು. ಆದರೆ, ಇತರ ಕಡೆಗಳಲ್ಲಿ 415 ಅತಿಥಿ ಉಪನ್ಯಾಸಕರ ಕೊರತೆ ಇದೆ. ರಾಜ್ಯದಲ್ಲಿ ಇತ್ತೀಚೆಗೆ ಪ್ರಾರಂಭವಾದ ಹಲವು ವಿಶ್ವವಿದ್ಯಾಲಯಗಳಲ್ಲಿ ಬೋಧಕ ಮತ್ತು ಬೋಧಕೇತರ ಹುದ್ದೆಗಳಿಗೆ ಯಾವುದೇ ನೇಮಕಾತಿ ನಡೆದಿಲ್ಲ. ಮಂಡ್ಯ ವಿಶ್ವವಿದ್ಯಾಲಯ, ಗಂಗೂಬಾಯಿ ಹಾನಗಲ್ ವಿವಿ, ಕನ್ನಡ ವಿಶ್ವವಿದ್ಯಾಲಯ, ಡಾ. ಬಿ.ಆರ್. ಅಂಬೇಡ್ಕರ್ ವಿವಿ, ನೃಪತುಂಗ ವಿವಿ, ಹಾಸನ ವಿವಿ, ಚಾಮರಾಜನಗರ ವಿವಿ, ಬೀದರ್ ವಿವಿ, ಕೊಪ್ಪಳ ವಿವಿ, ಕೊಡಗು ವಿವಿ, ಬಾಗಲಕೋಟೆ ವಿವಿ, ಮತ್ತು ಹಾವೇರಿ ವಿವಿಗಳಲ್ಲಿ ಮಂಜೂರಾದ ಹುದ್ದೆಗಳು ಸಂಪೂರ್ಣವಾಗಿ ಖಾಲಿ ಇವೆ.
“ಖಾಲಿ ಹುದ್ದೆಗಳಿಂದ ಗುಣಮಟ್ಟದ ಶಿಕ್ಷಣಕ್ಕೆ ತೊಂದರೆಯಾಗುತ್ತಿದೆ. ಸರ್ಕಾರಕ್ಕೆ ಈ ಕುರಿತು ಮನವಿ ಮಾಡುತ್ತಿದ್ದೇವೆ. ಈ ತಿಂಗಳ ಕೊನೆಯಲ್ಲಿ ವಿಶ್ವವಿದ್ಯಾಲಯಗಳ ಸ್ಥಿತಿಗತಿ ಮತ್ತು ಎಸ್‌ಇಪಿ ಕುರಿತು ಸಭೆ ಕರೆದಿದ್ದೇವೆ. ಅದರ ನಂತರವೂ ಸರ್ಕಾರಕ್ಕೆ ಮತ್ತೊಮ್ಮೆ ಮನವಿ ಸಲ್ಲಿಸುತ್ತೇವೆ.” ಎಂದು ರಾಜ್ಯ ವಿಶ್ರಾಂತ ಕುಲಪತಿಗಳ ವೇದಿಕೆಯ ಅಧ್ಯಕ್ಷ ಡಾ. ಚಂದ್ರಶೇಖರ್ ಶೆಟ್ಟಿ ತಿಳಿಸಿದ್ದಾರೆ.