Home ಸುದ್ದಿ ರಾಜ್ಯ RSSಗೆ ನಿರ್ಬಂಧದ ‘ಹುನ್ನಾರ’? ಸರ್ಕಾರದ ಆದೇಶಕ್ಕೆ ಹೈಕೋರ್ಟ್ ತಡೆ, ಕಾಂಗ್ರೆಸ್‌ಗೆ ಭಾರೀ ಹಿನ್ನಡೆ!

RSSಗೆ ನಿರ್ಬಂಧದ ‘ಹುನ್ನಾರ’? ಸರ್ಕಾರದ ಆದೇಶಕ್ಕೆ ಹೈಕೋರ್ಟ್ ತಡೆ, ಕಾಂಗ್ರೆಸ್‌ಗೆ ಭಾರೀ ಹಿನ್ನಡೆ!

0

RSS: ರಾಜ್ಯದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS)ದ ಚಟುವಟಿಕೆಗಳನ್ನು ನಿಯಂತ್ರಿಸಲು ಮುಂದಾಗಿದ್ದ ಕಾಂಗ್ರೆಸ್ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ನಲ್ಲಿ ಭಾರೀ ಹಿನ್ನಡೆಯಾಗಿದೆ.

ಸಾರ್ವಜನಿಕ ಸ್ಥಳಗಳಲ್ಲಿ 10ಕ್ಕಿಂತ ಹೆಚ್ಚು ಜನರು ಸೇರುವುದನ್ನು ನಿರ್ಬಂಧಿಸಿ ಸರ್ಕಾರ ಹೊರಡಿಸಿದ್ದ ವಿವಾದಾತ್ಮಕ ಆದೇಶಕ್ಕೆ ಹೈಕೋರ್ಟ್‌ನ ಧಾರವಾಡ ಪೀಠವು ಮಧ್ಯಂತರ ತಡೆಯಾಜ್ಞೆ ನೀಡಿದೆ. ಈ ಮೂಲಕ, ಸರ್ಕಾರದ ನಡೆಗೆ ನ್ಯಾಯಾಂಗವು ತೀವ್ರ ಅಸಮಾಧಾನ ವ್ಯಕ್ತಪಡಿಸಿದಂತಾಗಿದೆ.

ಅಕ್ಟೋಬರ್ 18ರಂದು ರಾಜ್ಯ ಸರ್ಕಾರವು ಒಂದು ಆದೇಶ ಹೊರಡಿಸಿತ್ತು. ಅದರ ಪ್ರಕಾರ, ಪಾರ್ಕ್, ಮೈದಾನ, ರಸ್ತೆ, ಕೆರೆ-ಕಟ್ಟೆಗಳಂತಹ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ 10ಕ್ಕಿಂತ ಹೆಚ್ಚು ಜನರು ಪೂರ್ವಾನುಮತಿ ಇಲ್ಲದೆ ಸೇರುವುದು ಅಪರಾಧ ಎಂದು ಪರಿಗಣಿಸಲಾಗುತ್ತಿತ್ತು.

ಅಂತಹ ಗುಂಪುಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಪೊಲೀಸರಿಗೆ ಅಧಿಕಾರ ನೀಡಲಾಗಿತ್ತು. ಈ ಆದೇಶದಲ್ಲಿ ಎಲ್ಲಿಯೂ ‘RSS’ ಎಂಬ ಹೆಸರನ್ನು ನೇರವಾಗಿ ಉಲ್ಲೇಖಿಸಿರಲಿಲ್ಲ. ಆದರೆ, ಆರ್‌ಎಸ್‌ಎಸ್‌ನ ಪಥಸಂಚಲನ ಮತ್ತು ಶಾಖೆಗಳಂತಹ ಚಟುವಟಿಕೆಗಳನ್ನೇ ಗುರಿಯಾಗಿಸಿಕೊಂಡು ಈ ಆದೇಶ ಹೊರಡಿಸಲಾಗಿದೆ ಎಂಬ ಆರೋಪಗಳು ವ್ಯಾಪಕವಾಗಿ ಕೇಳಿಬಂದಿದ್ದವು.

ಹೈಕೋರ್ಟ್ ಮೆಟ್ಟಿಲೇರಿದ್ದ ಸಂಘಟನೆ: ಸರ್ಕಾರದ ಈ ಕ್ರಮವನ್ನು ಪ್ರಶ್ನಿಸಿ ‘ಪುನಶ್ಚೇತನ ಸೇವಾ ಸಂಸ್ಥೆ’ ಎಂಬ ಸಂಘಟನೆಯು ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿತ್ತು. “ಭಾರತದ ಸಂವಿಧಾನವು ತನ್ನ 19(1)(A) (ವಾಕ್ ಸ್ವಾತಂತ್ರ್ಯ) ಮತ್ತು 19(1)(B) (ಶಾಂತಿಯುತವಾಗಿ ಸಭೆ ಸೇರುವ ಸ್ವಾತಂತ್ರ್ಯ) ವಿಧಿಗಳ ಅಡಿಯಲ್ಲಿ ನಾಗರಿಕರಿಗೆ ಮೂಲಭೂತ ಹಕ್ಕುಗಳನ್ನು ನೀಡಿದೆ. ಆದರೆ, ಸರ್ಕಾರದ ಈ ಆದೇಶವು ಆ ಹಕ್ಕುಗಳನ್ನೇ ಕಸಿಯುವ ‘ಡ್ರಕೋನಿಯನ್’ (ಕ್ರೂರ) ಕಾನೂನಿನಂತಿದೆ,” ಎಂದು ಅರ್ಜಿದಾರರು ವಾದಿಸಿದ್ದರು.

“ಸಂವಿಧಾನದ ಹಕ್ಕನ್ನು ಆದೇಶದಿಂದ ಕಿತ್ತುಕೊಳ್ಳಲಾಗದು”: ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ, ಸರ್ಕಾರದ ಆದೇಶದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ಸಂವಿಧಾನವು ಖಾತರಿಪಡಿಸಿರುವ ಮೂಲಭೂತ ಹಕ್ಕುಗಳನ್ನು ಕೇವಲ ಒಂದು ಸರ್ಕಾರಿ ಆದೇಶದ ಮೂಲಕ ಕಿತ್ತುಕೊಳ್ಳಲು ಸಾಧ್ಯವಿಲ್ಲ.

ಪೊಲೀಸ್ ಕಾಯ್ದೆಯಲ್ಲಿ ಈಗಾಗಲೇ ಅಧಿಕಾರಗಳಿರುವಾಗ, ಈ ರೀತಿಯ ಹೊಸ ಆದೇಶದ ಅಗತ್ಯವೇನಿತ್ತು? ಮೇಲ್ನೋಟಕ್ಕೆ ಸರ್ಕಾರದ ಈ ಕ್ರಮ ಕಾನೂನುಬಾಹಿರವಾಗಿ ಕಾಣುತ್ತಿದೆ, ಎಂದು ಅಭಿಪ್ರಾಯಪಟ್ಟ ನ್ಯಾಯಾಲಯ, ಸರ್ಕಾರದ ಆದೇಶಕ್ಕೆ ಮಧ್ಯಂತರ ತಡೆ ನೀಡಿತು. ಅಲ್ಲದೆ, ಈ ಸಂಬಂಧ ರಾಜ್ಯ ಸರ್ಕಾರ, ಗೃಹ ಇಲಾಖೆ ಮತ್ತು ಹುಬ್ಬಳ್ಳಿ ಪೊಲೀಸ್ ಕಮಿಷನರ್‌ಗೆ ನೋಟಿಸ್ ಜಾರಿ ಮಾಡಿದೆ.

ಈ ತಡೆಯಾಜ್ಞೆಯು ಕಾಂಗ್ರೆಸ್ ಸರ್ಕಾರಕ್ಕೆ ರಾಜಕೀಯವಾಗಿ ಮತ್ತು ನೈತಿಕವಾಗಿ ದೊಡ್ಡ ಹಿನ್ನಡೆಯಾಗಿದೆ. ಅಲ್ಲದೆ, ಕಲಬುರಗಿ ಪೀಠದಲ್ಲಿ ವಿಚಾರಣೆಯಲ್ಲಿರುವ ಚಿತ್ತಾಪುರ ಆರ್‌ಎಸ್‌ಎಸ್ ಪಥಸಂಚಲನ ಪ್ರಕರಣದ ಮೇಲೂ ಈ ಆದೇಶವು ಪರಿಣಾಮ ಬೀರುವ ಸಾಧ್ಯತೆಗಳಿವೆ.

NO COMMENTS

LEAVE A REPLY

Please enter your comment!
Please enter your name here

Exit mobile version