Home ಕೃಷಿ/ವಾಣಿಜ್ಯ GST ಎಫೆಕ್ಟ್: ಕಾರುಗಳ ಬೆಲೆ 3.5 ಲಕ್ಷ ರೂ. ವರೆಗೂ ಕಡಿತ!

GST ಎಫೆಕ್ಟ್: ಕಾರುಗಳ ಬೆಲೆ 3.5 ಲಕ್ಷ ರೂ. ವರೆಗೂ ಕಡಿತ!

0

ನವದೆಹಲಿ: ಜಿಎಸ್‌ಟಿ ಮಂಡಳಿಯು ವಾಹನಗಳ ತೆರಿಗೆ ದರ ಕಡಿತ ಮಾಡಿರುವ ಹಿನ್ನೆಲೆಯಲ್ಲಿ ವಾಹನಗಳ ತಯಾರಿಕಾ ಕಂಪನಿಗಳು ಈಗ ತಮ್ಮ ವಾಹನಗಳ ಮಾರಾಟ ದರವನ್ನು ಇಳಿಕೆ ಮಾಡಿ ಅದರ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲು ಕ್ರಮ ಕೈಗೊಂಡಿವೆ. ಕಾರುಗಳ ದರ ಕಡಿತದಲ್ಲಿ ಟೊಯೊಟಾ ಕಂಪನಿ ಮುಂಚೂಣಿಯಲ್ಲಿದ್ದು ತನ್ನ ಫಾರ್ಚುನರ್ ಕಾರಿನ ದರದಲ್ಲಿ ಗರಿಷ್ಟ 3.49 ಲಕ್ಷ ರೂ. ಕಡಿತ ಮಾಡುವುದಾಗಿ ಘೋಷಿಸಿದೆ.

ದೇಶದ ಪ್ರಸಿದ್ಧ ಕಾರು ತಯಾರಿಕಾ ಕಂಪನಿ ಟಾಟಾ ಮೋಟಾರ್ಸ್ ತನ್ನ ಪ್ರಯಾಣಿಕ ಕಾರುಗಳ ಬೆಲೆಯಲ್ಲಿ ಇಳಿಕೆ ಮಾಡುವುದನ್ನು ಶುಕ್ರವಾರ ಘೋಷಿಸಿದೆ. ಇದರ ಬೆನ್ನಲ್ಲೇ ಮಹೀಂದ್ರಾ, ಮಾರುತಿ ಮತ್ತು ರೆನಾಲ್ಟ್ ಇಂಡಿಯಾ ಕಾರು ಕಂಪನಿಗಳೂ ಜಿಎಸ್ಟಿ ಕಡಿತ ಲಾಭವನ್ನು ಗ್ರಾಹರಿಗೆ ನೀಡುವುದಾಗಿ ಶನಿವಾರ ಘೋಷಿಸಿವೆ. ಇದರಿಂದಾಗಿ ಈ ಕಂಪನಿಗಳ ಕಾರುಗಳ ಬೆಲೆಯಲ್ಲಿ 1.56 ಲಕ್ಷ ರೂ. ವರೆಗೂ ಇಳಿಕೆಯಾಗುತ್ತಿವೆ. ಟೊಯಾಟಾ, ಟಾಟಾ ಹಾಗೂ ರೆನಾಲ್ಟ್ ಕಂಪನಿಗಳ ಕಾರುಗಳ ಬೆಲೆ ಇಳಿಕೆ ಸೆಪ್ಟಂಬರ್ 22ರಿಂದ ಜಾರಿಗೆ ಬರಲಿದೆ. ಆದರೆ ಮಹೀಂದ್ರಾ ಎಂಡ್ ಮಹೀಂದ್ರ ಕಂಪನಿಗಳ ವಾಹನಗಳ ಬೆಲೆ ಸೆ. 6ರ ಶನಿವಾರದಿಂದಲೇ ಜಾರಿಗೆ ಬಂದಿದೆ.

ಇತ್ತೀಚೆಗೆ 56ನೇ ಜಿಎಸ್ಟಿ ಕೌನ್ಸಿಲ್ ಸೆಪ್ಟೆಂಬರ್ 22ರಿಂದ ಜಾರಿಗೆ ಬರುವಂತೆ ಸಣ್ಣ ಕಾರುಗಳು, 350 ಸಿಸಿವರೆಗಿನ ಬೈಕ್‌ಗಳು, ತ್ರಿಚಕ್ರ ವಾಹನಗಳು, ಬಸ್ ಹಾಗೂ ಆಂಬ್ಯುಲೆನ್ಸ್‌ಗಳ ಮೇಲಿನ ತೆರಿಗೆ ದರವನ್ನು ಶೇ. 28 ರಿಂದ ಶೇ. 18ಕ್ಕೆ ಇಳಿಸಿತ್ತು.

ಈ ಹಿನ್ನೆಲೆಯಲ್ಲಿ ಟಾಟಾ ಕಂಪನಿಯು ಪ್ರಯಾಣಿಕ ಕಾರುಗಳ ಬೆಲೆಯಲ್ಲಿ 65 ಸಾವಿರ ರೂ.ಗಳಿಂದ 1.55 ಲಕ್ಷ ರೂ. ವರೆಗೂ ಕಡಿತಗೊಳಿಸಿದೆ. ಟಿಯಾಗೊ ಕಾರಿನ ಬೆಲೆ 75 ಸಾವಿರ ರೂ. ಕಡಿತಗೊಂಡಿದೆ. ಟಿಗೊರ್ 80 ಸಾವಿರ, ಅಲ್ಟ್ರೋಜ್ 1,10,000 ರೂ. ಪಂಚ್ 85 ಸಾವಿರ ರೂ. ನೆಕ್ಸಾನ್ 1,55,000 ರೂ, ಹ್ಯಾರಿಯರ್ 1,40,000 ರೂ. ಹಾಗೂ ಸಫಾರಿ ಕಾರಿನಲ್ಲಿ 1,45,000 ರೂ. ಕಡಿತಗೊಳಿಸಲಾಗಿದೆ ಎಂದು ಕಂಪನಿ ತಿಳಿಸಿದೆ.

ಇದೇ ವೇಳೆ ಮಹಿಂದ್ರಾ ಎಂಡ್ ಮಹೀಂದ್ರಾ ಕಂಪನಿಯು ಶನಿವಾರದಿಂದಲೇ ಜಾರಿಗೆ ಬರುವಂತೆ ಕಾರುಗಳ ಮಾದರಿಗಳನುಸಾರವಾಗಿ 1.01 ಲಕ್ಷ ರೂ. ನಿಂದ ಆರಂಭಿಸಿ 1.56 ಲಕ್ಷ ರೂ. ವರೆಗೆ ಕಡಿತಗೊಳಿಸಿರುವುದಾಗಿ ಘೋಷಿಸಿದೆ. ಟಾಟಾ ಮತ್ತು ಮಹಿಂದ್ರಾ ಹೊರತು ಪಡಿಸಿ ರೆನಾಲ್ಟ್ ಕಂಪನಿಯೂ ತನ್ನ ಕಾರುಗಳ ಬೆಲೆಯಲ್ಲಿ 96,395 ರೂ. ವರೆಗೆ ಕಡಿತಗೊಳಿಸುವುದಾಗಿ ಪ್ರಕಟಿಸಿದೆ.

ಮಹೀಂದ್ರಾ-ಮಹೀಂದ್ರಾ – 1.01 ಲಕ್ಷದಿಂದ 1.56 ಲಕ್ಷ ರೂ. ಕಡಿತ
ಟಾಟಾ ಕಂಪನಿ – 65 ಸಾವಿರದಿಂದ 1.55 ಲಕ್ಷ ರೂ.ವರೆಗೆ ಕಡಿತ
ರೆನಾಲ್ಟ್ ಕಂಪನಿಯ ಕಾರುಗಳ ದರದಲ್ಲಿ 96,395 ರೂ. ಕಡಿತ

NO COMMENTS

LEAVE A REPLY

Please enter your comment!
Please enter your name here

Exit mobile version