ಬೆಂಗಳೂರು: ನಾಳೆ(ಮಂಗಳವಾರ)ಯಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸುವುದಾಗಿ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಅನಂತ ಸುಬ್ಬರಾವ್ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ನಾಳೆಯಿಂದ ಅನಿರ್ದಿಷ್ಟಾವಧಿಗೆ ಮುಷ್ಕರ ನಡೆಯಲಿದೆ. ಯಾವುದೇ ಕಾರಣಕ್ಕೂ ಮುಷ್ಕರ ಮುಂದೂಡಿಕೆಯಾಗಲ್ಲ, ನಾಳೆಯಿಂದ ಬಸ್‌ಗಳು ರಸ್ತೆಗೆ ಇಳಿಯಲ್ಲ ಎಂದು ಅವರು ತಿಳಿಸಿದ್ದಾರೆ.
ಇನ್ನು ಬೆಳಗ್ಗೆ 6 ಗಂಟೆಗೆ ಎಲ್ಲಾ ಬಸ್‌ಗಳನ್ನು ಡಿಪೋದಲ್ಲಿ ನಿಲ್ಲಿಸುತ್ತೇವೆ. ಯಾವುದೇ ನೌಕರರು ಬಸ್‌ಗಳನ್ನು ಓಡಿಸಲ್ಲ. ಸರ್ಕಾರದ ಬೆದರಿಕೆಗೆ ಹೆದರಬೇಡಿ, ಶಾಂತಿಯುತವಾಗಿ ಪ್ರತಿಭಟನೆ ನಡೆಸಿ ಎಂದು ಸಾರಿಗೆ ನೌಕರರಿಗೆ ಅವರು ಕಿವಿಮಾತು ಹೇಳಿದ್ದಾರೆ.
ಕೋರ್ಟ್ ಆದೇಶದ ಕುರಿತು ಮಾತನಾಡಿರುವ ಅವರು, ಆದೇಶ ನಮಗೆ ತಲುಪಿದೆ. ಆದರೆ, ಆದೇಶದಲ್ಲೇನಿದೆ ಎನ್ನುವುದು ಗೊತ್ತಿಲ್ಲ. ನಾಳೆ ಎಂದಿನಂತೆ ನಮ್ಮ ಮುಷ್ಕರ ಆರಂಭವಾಗುತ್ತದೆ. ವಕೀಲರ ಜತೆ ಚರ್ಚಿಸಿ ನಮ್ಮ ಜಂಟಿಕ್ರಿಯಾ ಸಮಿತಿ ಮುಂದಿನ ತೀರ್ಮಾನ ತೆಗದುಕೊಳ್ಳುತ್ತದೆ ಎಂದರು.
ನಾಳೆ ಆರಂಭವಾಗಲಿರುವ ಮುಷ್ಕರದ ಕುರಿತಂತೆ 22 ದಿನಗಳ ಹಿಂದೆಯೇ ನೋಟಿಸ್ ನೀಡಲಾಗಿತ್ತು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಸಭೆ ಕರೆದಿದ್ದರು. 38 ತಿಂಗಳ ಬಾಕಿ ಹಣ ಕೊಡಬೇಕು, ಶೇ. 15ರಷ್ಟು ವೇತನ ಹೆಚ್ಚಿಸಬೇಕು. ಬೇಕಿದ್ದರೆ ಕಂತಿನ ರೂಪದಲ್ಲಿ ಬಾಕಿ ಹಣ ಕೊಡಿ ಎಂದು ಮನವಿ ಮಾಡಲಾಗಿತ್ತು.
ನಾವು ಕೇಳಿದ್ದ 12 ಬೇಡಿಕೆಗಳ ಪೈಕಿ ಕನಿಷ್ಠ 2 ಪ್ರಮುಖ ಬೇಡಿಕೆಯನ್ನಾದರೂ ಈಡೇರಿಸಬೇಕಿತ್ತು. ಅದನ್ನೂ ಈಡೇರಿಸಲಿಲ್ಲ. ಅಧಿವೇಶನದವರೆಗೆ ಮುಷ್ಕರ ಮುಂದೂಡಿ ತಿಳಿಸಿದ್ದಾರೆ. ಆದರೆ, ನಾವು ಮುಂದೂಡಲು ಒಪ್ಪಿಗೆ ಸೂಚಿಸಿಲ್ಲ. ಹೀಗಾಗಿ ಮಂಗಳವಾರ ಬೆಳಗ್ಗೆ 6 ಗಂಟೆಯಿಂದ ಮುಷ್ಕರ ಆರಂಭಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಮುಷ್ಕರದಲ್ಲಿ ಭಾಗವಹಿಸದಿರಲು ಮನವಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಸಾರ್ವಜನಿಕ ಅಗತ್ಯ ಸೇವಾ ಸಂಸ್ಥೆಯಾಗಿರುವುದರಿಂದ ಸಾರಿಗೆ ಮುಷ್ಕರದಲ್ಲಿ ಸಂಸ್ಥೆಯ ನೌಕರರು ಪಾಲ್ಗೊಳ್ಳಬಾರದೆಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಪ್ರಿಯಾಂಗಾ. ಎಂ ಮನವಿ ಮಾಡಿದ್ದಾರೆ.
ನ್ಯಾಯಾಲಯವು ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಮುಷ್ಕರಕ್ಕೆ ತಡೆಯಾಜ್ಞೆ ನೀಡಿರುವುದರಿಂದ, ನ್ಯಾಯಾಲಯದ ಆದೇಶವನ್ನು ಗೌರವಿಸಬೇಕು. ಹಾಗೂ ಈಗಾಗಲೇ ಮುಖ್ಯಮಂತ್ರಿಗಳು ಸಹ ಸಕಾರಾತ್ಮಕವಾಗಿ ಸ್ಪಂದಿಸಿರುವುದರಿಂದ, ಸಾರ್ವಜನಿಕ ಅಗತ್ಯ ಸೇವಾ ಸಂಸ್ಥೆಯಾಗಿರುವ ವಾಕರ ಸಾರಿಗೆ ಸಂಸ್ಥೆಯ ನೌಕರರು ನಾಳಿನ ಮುಷ್ಕರದಲ್ಲಿ ಪಾಲ್ಗೊಳ್ಳಬಾರದೆಂದು ಅವರು ಮನವಿ ಮಾಡಿದ್ದಾರೆ.
ಬಾಗಲಕೋಟೆ: ಸರ್ಕಾರದ ಪ್ರಯತ್ನ, ಹೈಕೋರ್ಟ್ ಛಾಟಿಯಿಂದಾಗಿ ಬಸ್‌ಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತವೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದರಾದರೂ ನೌಕರರು ಕರ್ತವ್ಯಕ್ಕೆ ಹಾಜರಾಗುವುದಿಲ್ಲ ಎಂದು ಕಾರ್ಮಿಕ ಸಂಘಟನೆಗಳು ಹೇಳಿವೆ. ಜಿಲ್ಲೆಯಲ್ಲಿ 8 ಡಿಪೋಗಳಿದ್ದು, 686 ಬಸ್‌ಗಳು ಸಂಚರಿಸುತ್ತವೆ. ಚಾಲಕರು, ನಿರ್ವಾಹಕರು ಸೇರಿ 2098 ನೌಕರರಿದ್ದು, 48 ಗಂಟೆಗಳ ಮುಂಚಿತವಾಗಿಯೇ ಅವರ ರಜೆಗಳನ್ನು ರದ್ದುಪಡಿಸುವುದರ ಜತೆಗೆ ಮುಷ್ಕರದಲ್ಲಿ ಪಾಲ್ಗೊಳ್ಳದೆ ನೌಕರಿಗೆ ಹಾಜರಾಗುವಂತೆ ಸೂಚಿಸಿ, ಸಹಿಯನ್ನೂ ಪಡೆಯಲಾಗಿದೆ. ಆದರೆ 38 ತಿಂಗಳ ಬಾಕಿ ವೇತನ, 2024ರ ಜನವರಿ ತಿಂಗಳಿನಿಂದ ಜಾರಿಗೆ ಬರುವಂತೆ ವೇತನ ಪರಿಷ್ಕರಣೆ ಹಾಗೂ ಕರ್ತವ್ಯದಿಂದ ವಜಾಗೊಳಿಸಿರುವವರನ್ನು ಮರಳಿ ಕೆಲಸಕ್ಕೆ ಪಡೆಯುವುದರ ಜತೆಗೆ ನ್ಯಾಯಯುತವಾದ ಬೇಡಿಕೆಗಳನ್ನು ಈಡೇರಿಸದಿದ್ದರೆ ಕರ್ತವ್ಯಕ್ಕೆ ಹಾಜರಾಗುವುದಿಲ್ಲ ಎಂದು ಜಂಟಿ ಕ್ರಿಯಾ ಸಮಿತಿ ಸಂಚಾಲ ಬಿ.ವಿ. ಕುಲಕರ್ಣಿ ಸ್ಪಷ್ಟಪಡಿಸಿದ್ದಾರೆ.