ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಎಸ್. ಮುರಳಿ ಮೋಹನ್ (57) ನಿಧನರಾದರು. ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಜೆಸಿ ರೋಡ್ ಟ್ರಸ್ಟ್ ವೆಲ್ ಆಸ್ಪತ್ರೆಯಲ್ಲಿ ಬುಧವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಮುರಳಿ ಮೋಹನ್ ಕೊನೆಯುಸಿರೆಳೆದಿದ್ದಾರೆ. ಕಳೆದ ಹಲವು ವರ್ಷಗಳಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಈ ಹಿಂದೆ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಿದ್ದು. ಅದಕ್ಕೆ ಅನುದಾನದ ಅವಶ್ಯಕತೆ ಇದೆ ಎಂದು ಅವರೇ ಹೇಳಿಕೊಂಡಿದ್ದರು. ಶಸ್ತ್ರಚಿಕಿತ್ಸೆಗಾಗಿ 30ರಿಂದ 35 ಲಕ್ಷ ರೂಪಾಯಿ ರೂಪಾಯಿ ಅವಶ್ಯವಾಗಿತ್ತು. ಈ ವೇಳೆ ನಟ ಸುದೀಪ್ ಮತ್ತು ಉಪೇಂದ್ರ ಧನಸಹಾಯ ಮಾಡಿದ್ದರು.
ಮೂರೂವರೆ ದಶಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಮುರಳಿ ಮೋಹನ್, ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್, ಕ್ರೇಜಿ ಸ್ಟಾರ್ ರವಿಚಂದ್ರನ್, ರಿಯಲ್ ಸ್ಟಾರ್ ಉಪೇಂದ್ರ ಸೇರಿದಂತೆ ಸ್ಟಾರ್ ನಟರಿಗೆ ನಿರ್ದೇಶನ ಮಾಡಿದ್ದರು. ನಟ, ನಿರ್ದೇಶಕ ಉಪೇಂದ್ರ ಅವರೊಂದಿಗೆ ಕಾಲೇಜು ದಿನಗಳಿಂದ ಸ್ನೇಹ ಹೊಂದಿದ್ದರು. ಓಂ, ಶ್ ಮತ್ತು ತರ್ಲೆ ನನ್ ಮಗ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಉಪೇಂದ್ರ ಜತೆ ಕೆಲಸವನ್ನೂ ಮಾಡಿದ್ದು, ಉಪೇಂದ್ರ ಅವರೊಂದಿಗೆ ಮುರಳಿ ಮೋಹನ್ ಆಪ್ತರಾಗಿದ್ದರು. .
ಬಹುಮುಖ ಪ್ರತಿಭೆ ಎಂದೆನಿಸಿಕೊಂಡಿದ್ದ ಮುರಳಿ ಮೋಹನ್ ನಿರ್ದೇಶಕರಾಗಿ, ನಟರಾಗಿ, ಸಂಭಾಷಣೆಕಾರರಾಗಿಯೂ ಸೈ ಎಂದೆನಿಸಿಕೊಂಡವರು. ಕನ್ನಡ ಚಿತ್ರರಂಗ ಇಂತಹ ಪ್ರತಿಭಾವಂತ ನಿರ್ದೇಶಕನನ್ನು ಕಳೆದುಕೊಂಡಿದ್ದು, ತುಂಬಲಾರದ ನಷ್ಟವಾಗಿದೆ ಎಂದು ಇಡೀ ಚಿತ್ರರಂಗವೇ ಕಂಬನಿ ಮಿಡಿಯುತ್ತಿದೆ.