ಬಾಗಲಕೋಟೆ: ದೇಶದಲ್ಲಿ ಹೆಚ್ಚಾಗಿ ಕೇರಳ ರಾಜ್ಯದಲ್ಲಿ ಕಂಡು ಬರುವ ನೀರು ಸೇಬು (ವಾಟರ್ ಆಪಲ್) ಬೆಳೆ ಇದೀಗ ಕಬ್ಬು ಬೆಳೆಯುವ ಪ್ರದೇಶಕ್ಕೆ ಬಂದಿದ್ದು, ಸದ್ದಿಲ್ಲದೆ ರೈತರ ಓಲೈಕೆಯಾಗುತ್ತಿರುವುದು ಗಮನಾರ್ಹ.
ಬಾಗಲಕೋಟೆ ಜಿಲ್ಲೆಯ ರಬಕವಿ – ಬನಹಟ್ಟಿ ತಾಲೂಕಿನಲ್ಲಿ ಇದೀಗ ನೂರಕ್ಕೂ ಅಧಿಕ ರೈತರು ನೀರು ಸೇಬು ಬೆಳೆಗೆ ಸೈ ಎಂದಿದ್ದಾರೆ. ಈಗಾಗಲೇ ಸ್ಯಾಂಪಲ್ ಎಂಬಂತೆ ಕೇವಲ ಎರಡೇ ಎರಡು ಮರಗಳನ್ನು ನೆಟ್ಟಿರುವ ಕುಲಹಳ್ಳಿ ಗ್ರಾಮದ ರೈತ ಶಿವಲಿಂಗ ಚಾಂಬಾರ ವರ್ಷಕ್ಕೆ 60 ರಿಂದ 80 ಸಾವಿರ ರೂ. ಗಳಷ್ಟು ಆದಾಯ ಮಾಡಿದ್ದಾರೆ.
ಹಾಗೇ ಸುಮ್ಮನೆ ಸಸಿ ನೆಟ್ಟು ಮನೆಗೆಂದು ಬಳಕೆಯಾದರೆ ಸಾಕು ಎನ್ನುವ ಹಂತದಲ್ಲಿದ್ದಾಗ ಮಾರುಕಟ್ಟೆಯ ಮಾಹಿತಿಯಿಲ್ಲದ ಕಾರಣ ನಿರ್ಲಕ್ಷ್ಯ ವಹಿಸಿದ್ದರು. ಇದೀಗ ಎಲ್ಲಿಲ್ಲದ ಬೇಡಿಕೆಯಿಂದ ಸಾವಿರಾರು ರೂ. ಗಳಷ್ಟು ಲಾಭ ಗಳಿಸುತ್ತಿರುವುದು ವಿಶೇಷ. ಅಲ್ಲಲ್ಲಿ ಕೃಷಿ ಮೇಳದಲ್ಲಿ ಪಾಲ್ಗೊಂಡು ತೋಟಗಾರಿಕೆ ಇಲಾಖೆಯಿಂದ ತಮ್ಮ ಜಮೀನಿನಲ್ಲಿ ಈಗಾಗಲೇ ಬೆಳೆದಿರುವ ಪೇರು, ಶ್ರೀಗಂಧ, ಅಡಿಕೆ, ರಕ್ತ ಚಂದನ ಹೀಗೆ ಹಲವಾರು ವಿಶೇಷ ಬೆಳೆಗಳಲ್ಲಿ ಇದನ್ನೂ ಸಹ ಬೆಳೆದಿದ್ದಾರೆ.
ತಮ್ಮ ಜಮೀನಿನಲ್ಲಿ 5 ವರ್ಷಗಳ ಹಿಂದೆಯೇ ವಾಟರ್ ಆಪಲ್ (ನೀರು ಸೇಬು) ಸಸಿ ನೆಟ್ಟು ಮೂರು ವರ್ಷಗಳ ನಂತರ ಫಸಲು ಬಂದಿದೆ. ವರ್ಷಕ್ಕೆ ಎರಡು ಬಾರಿ ಫಸಲು ಬಿಡುವ ಈ ವಾಟರ್ ಆಪಲ್ ಬೇಸಿಗೆಗೆ ಹಣ್ಣು ಬಿಡುವುದು ವಿಶೇಷ. ಇದನ್ನು ತಿನ್ನುವುದರಿಂದ ಹಲವು ಆರೋಗ್ಯಕರ ಲಾಭಗಳಿವೆ.
ಮೂತ್ರಪಿಂಡದಲ್ಲಿನ ಹರಳುಗಳು ಕರಗುತ್ತವೆ. ಮಧುಮೇಹ ಮತ್ತು ಅಧಿಕ ರಕ್ತದ ಒತ್ತಡವಿರುವವರು ತಿಂದರೆ ಆರೋಗ್ಯ ಸಮಸ್ಯೆ ದೂರ ಎನ್ನುತ್ತಾರೆ. ಅಲ್ಲದೇ ಸದ್ಯ ಎರಡು ಗಿಡಗಳಿಂದ ಕ್ವಿಂಟಲ್ ಫಸಲು ಬರುತ್ತಿದ್ದು ಕೆಜಿಗೆ ಇನ್ನೂರು ರೂಪಾಯಿಯಂತೆ ನೀರು ಸೇಬು ಮಾರಾಟವಾಗುತ್ತಿದೆ. ಸದ್ಯ ಈ ಹಣ್ಣಿಗಿರುವ ಬೇಡಿಕೆ ನೋಡಿ ಇನ್ನೂ 20 ಸಸಿ ನಾಟಿ ಮಾಡಿದ್ದೇನೆ ಎಂದು ಶಿವಲಿಂಗ ಚಾಂಬಾರ ತಿಳಿಸಿದ್ದಾರೆ.
ನೀರಿನ ಸೇಬು ಎಂದರೇನು?: ನೀರಿನ ಸೇಬು ಉಷ್ಣವಲಯದ ಪೇರಳೆ ಹಣ್ಣು. ಇದು ಚೆಂಡಿನ ಹಾಗೆ ಇದ್ದು ತಿಳಿ ಗುಲಾಬಿ ಬಣ್ಣದಲ್ಲಿ ಇರುತ್ತದೆ. ಸ್ವಲ್ಪ ಸಿಹಿ ರುಚಿ ಹೊಂದಿದ್ದು, ಹೆಚ್ಚಿನ ಪೋಷಕಾಂಶಗಳು ಇದರಲ್ಲಿ ಅಡಗಿವೆ. ಈ ಹಣ್ಣು ದೈನಂದಿನ ಆಹಾರಕ್ರಮಕ್ಕೆ ಪರಿಪೂರ್ಣ ಸೇರ್ಪಡೆಯಾಗಿದೆ. ಇದನ್ನು ಮಲಬಾರ್ ಪ್ಲಮ್, ಗುಲಾಬಿ ಸೇಬು, ನೀರಿನ ಗುಲಾಬಿ ಸೇಬು, ಪ್ಲಮ್ ಗುಲಾಬಿ ಮತ್ತು ಮೇಣದ ಸೇಬು ಎಂದಲೂ ಕರೆಯುತ್ತಾರೆ. ಉಷ್ಣವಲಯದ ಪ್ರದೇಶಗಳಲ್ಲಿ ಇರುವ ಜನರಿಗೆ ಇದು ಉತ್ತಮ ಆಯ್ಕೆ ಆಗಿದೆ. ಇಷ್ಟೇ ಅಲ್ಲದೇ ಸಾಂಪ್ರದಾಯಿಕವಾಗಿ ಭಾರತೀಯ ವೈದ್ಯಕೀಯ ಪದ್ಧತಿಯಲ್ಲಿ ಈ ಹಣ್ಣನ್ನು ಬಳಸಲಾಗುತ್ತದೆ.