Home ನಮ್ಮ ಜಿಲ್ಲೆ ಉಡುಪಿ ಉಡುಪಿ: ಆಡಿಯೋ ವೈರಲ್‌ ಮಾಡಿದ್ದಕ್ಕೆ ಸ್ನೇಹಿತನ ಕೊಲೆ

ಉಡುಪಿ: ಆಡಿಯೋ ವೈರಲ್‌ ಮಾಡಿದ್ದಕ್ಕೆ ಸ್ನೇಹಿತನ ಕೊಲೆ

0

ಉಡುಪಿ: ಉಡುಪಿ ಜಿಲ್ಲೆಯಲ್ಲಿ ವಿಚಿತ್ರ ಕಾರಣಕ್ಕೆ ಕೊಲೆಯೊಂದು ನಡೆದಿದೆ. ಆಡಿಯೋವನ್ನು ವೈರಲ್ ಮಾಡಿದ ಕಾರಣಕ್ಕಾಗಿ ಸ್ನೇಹಿತರೇ ಸೇರಿ ವ್ಯಕ್ತಿಯೊಬ್ಬನ ಮನೆಗೆ ನುಗ್ಗಿ ಬರ್ಬರವಾಗಿ ಕೊಲೆ‌ ಮಾಡಿದ ಘಟನೆ ಉಡುಪಿ ತಾಲೂಕು ಪುತ್ತೂರು ಗ್ರಾಮದ ಸುಬ್ರಹ್ಮಣ್ಯನಗರದಲ್ಲಿ ಆ. 12ರಂದು ರಾತ್ರಿ ನಡೆದಿದೆ.

ಸ್ಥಳೀಯ ನಿವಾಸಿ ವಿನಯ್ ದೇವಾಡಿಗ (40) ಕೊಲೆಯಾದ ವ್ಯಕ್ತಿ. ಆರೋಪಿಗಳಾದ ಬ್ರಹ್ಮಾವರ ಕೊಕ್ಕರ್ಣೆ ಗಾಂಧಿನಗರ ನಿವಾಸಿಗಳಾದ ಅಜಿತ್ (28), ಅಕ್ಷೇಂದ್ರ (34) ಹಾಗೂ ಬೆನಗಲ್ ನಿವಾಸಿ ಪ್ರದೀಪ್ ಆಚಾರ್ಯ ಪೊಲೀಸರಿಗೆ ಶರಣಾಗಿದ್ದು ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.

ಪೇಂಟಿಂಗ್ ಕೆಲಸ ಮಾಡಿಕೊಂಡಿರುವ ವಿನಯ್ ದೇವಾಡಿಗ ಆ. 12ರಂದು ಮಂಗಳವಾರ ವೈಯಕ್ತಿಕ ಕೆಲಸದ ನಿಮಿತ್ತ ಉಡುಪಿಗೆ ಹೋಗಿ ವಾಪಸ್ಸು ಸಂಜೆ 6 ಗಂಟೆ ವೇಳೆಗೆ ಮನೆಗೆ ಬಂದು ಕೋಣೆಯಲ್ಲಿ ಮಲಗಿದ್ದರು.

ಮನೆಗೆ ನುಗ್ಗಿ ಹತ್ಯೆ: ರಾತ್ರಿ ಮೂವರು ಆರೋಪಿಗಳು ಮನೆಯ ಒಳಗೆ ನುಗ್ಗಿ ಮನೆಯ ಎಲ್ಲಾ ಕಡೆಗಳಲ್ಲಿ ವಿನಯ್‌ಗಾಗಿ ಹುಡುಕಾಟ ನಡೆಸಿದ್ದರು. ಕೋಣೆಯಲ್ಲಿದ್ದ ವಿನಯ್, ಶಬ್ದದಿಂದ ಎಚ್ಚರಗೊಂಡಿದ್ದು, ಆರೋಪಿಗಳು ವಿನಯ್ ಬಳಿ ಇದ್ದ ಮೊಬೈಲ್‌ನ್ನು ಕಿತ್ತುಕೊಳ್ಳಲು ಯತ್ನಿಸಿದರು. ವಿನಯ್ ತಪ್ಪಿಸಿಕೊಳ್ಳದಂತೆ ಅಜಿತ್ ಗಟ್ಟಿಯಾಗಿ ಹಿಡಿದುಕೊಂಡಿದ್ದು, ಆಕ್ಷೇಂದ್ರ ಹಾಗೂ ಪ್ರದೀಪ್ ಮಚ್ಚು ಹಾಗೂ ಚಾಕುವಿನಿಂದ ವಿನಯ್ ದೇವಾಡಿಗ ತಲೆಗೆ ಹೊಡೆದು, ಕೊಲೆ ಮಾಡಿ ಸ್ಕೂಟರ್‌ನಲ್ಲಿ ಪರಾರಿಯಾದರು ಎಂದು ವಿನಯ್ ಪತ್ನಿ ಸೌಮ್ಯಶ್ರೀ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಬೈದಿದ್ದ ಆಡಿಯೋ ವೈರಲ್‌: ಅಕ್ಷೇಂದ್ರನಿಗೆ ಜೀವನ್ ಎಂಬಾತ ಬೈದಿರುವ ಆಡಿಯೋವನ್ನು ವಿನಯ್ ಬೇರೆಯವರಿಗೆ ಶೇರ್ ಮಾಡಿ ವೈರಲ್ ಮಾಡಿರುವುದೇ ಘಟನೆಗೆ ಕಾರಣ ಎನ್ನಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣದ ಆರೋಪಿಗಳ ಪೈಕಿ ಪ್ರದೀಪ್ ಆಚಾರ್ಯ ಬ್ರಹ್ಮಾವರ ಠಾಣಾ ವ್ಯಾಪ್ತಿಯ ಕೊಲೆಯೊಂದರ ಆರೋಪಿಯಾಗಿದ್ಧು ಖುಲಾಸೆಗೊಂಡಿದ್ದಾನೆ. ಕೊಲೆಯಾದ ವಿನಯ್ ದೇವಾಡಿಗ ಮಲ್ಪೆ ಠಾಣಾ ವ್ಯಾಪ್ತಿಯ ಕೊಲೆಯೊಂದರ ಆರೋಪಿಯಾಗಿದ್ದು ಜಾಮೀನು ಪಡೆದಿದ್ದಾನೆ. ಪ್ರಕರಣ ತನಿಖೆಯಲ್ಲಿದೆ ಎಂದು ಎಸ್‌ಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version