Home ಸುದ್ದಿ ವಿದೇಶ ಭಾರತಕ್ಕೆ ಶೇ. 5ರ ರಿಯಾಯಿತಿ ಅಡಿ ತೈಲ: ರಷ್ಯಾ ಘೋಷಣೆ

ಭಾರತಕ್ಕೆ ಶೇ. 5ರ ರಿಯಾಯಿತಿ ಅಡಿ ತೈಲ: ರಷ್ಯಾ ಘೋಷಣೆ

0

ಮಾಸ್ಕೋ: ಭಾರತ-ರಷ್ಯಾದ ಸಂಬಂಧವನ್ನು ಕಂಡು ಅಮೆರಿಕ ಅಧ್ಯಕ್ಷ ಟ್ರಂಪ್ ಉರಿದು ಬೀಳುತ್ತಿರುವ ಮಧ್ಯೆಯೇ ಅಲ್ಲಿನ ಪುಟಿನ್ ಆಡಳಿತ ಪ್ರಮುಖ ನಿರ್ಣಯವೊಂದನ್ನು ಕೈಗೊಂಡಿದ್ದು, ಭಾರತಕ್ಕೆ ಇನ್ನು ಮುಂದೆ ತೈಲವನ್ನು ಶೇ. 5ರಷ್ಟು ರಿಯಾಯಿತಿ ದರದಲ್ಲಿ ಕೊಡುವುದಾಗಿ ಘೋಷಿಸಿದೆ.

ವಿದೇಶಾಂಗ ಸಚಿವ ಎಸ್. ಜೈಶಂಕರ್ ರಷ್ಯಾ ಪ್ರವಾಸದಲ್ಲಿರುವಾಗಲೇ ಇಂಥದೊಂದು ನಿರ್ಣಯ ಹೊರಬಂದಿರುವುದು ಎರಡೂ ದೇಶಗಳ ನಡುವಿನ ಬಾಂಧವ್ಯದ ಗಟ್ಟಿತನವನ್ನು ಪ್ರದರ್ಶಿಸುತ್ತದೆ.

ಈ ಹೊಸ ತೀರ್ಮಾನದ ಬಗ್ಗೆ ಮಾಹಿತಿ ನೀಡಿರುವ ರಷ್ಯಾದ ಉಪ ವ್ಯಾಪಾರ ಪ್ರತಿನಿಧಿ ಎವ್ಗೆನಿ ಗ್ರಿವಾ, “ನಮ್ಮ ದೇಶದಿಂದ ಭಾರತ ಖರೀದಿಸುತ್ತಿರುವ ಕಚ್ಚಾ ತೈಲದ ಮೇಲೆ 5%ನಷ್ಟು ರಿಯಾಯಿತಿ ಕೊಡಲು ನಿರ್ಧರಿಸಲಾಗಿದೆ. ಅನೇಕ ರಾಜಕೀಯ ಪರಿಸ್ಥಿತಿಗಳು ಉದ್ಭವಿಸಿವೆಯಾದರೂ ಭಾರತ ಈ ಹಿಂದೆ ಎಷ್ಟು ಪ್ರಮಾಣದ ತೈಲವನ್ನು ಖರೀದಿಸುತ್ತಿತ್ತೋ ಅಷ್ಟೇ ತೈಲವನ್ನು ಇನ್ನು ಮುಂದೆಯೂ ರಷ್ಯಾದಿಂದ ಖರೀದಿ ಮಾಡಲಿದೆ. ಇದರಲ್ಲಿ ಯಾವುದೇ ವ್ಯತ್ಯಾಸ ಆಗುವುದಿಲ್ಲ” ಎಂದು ತಿಳಿಸಿದ್ದಾರೆ.

ರಷ್ಯಾದ ಉಪ ಮುಖ್ಯಸ್ಥ ರೋಮನ್ ಬಾಬುಷ್ಕಿನ್ ಮಾತನಾಡಿ, “ಇದು ಭಾರತಕ್ಕೆ ಸವಾಲಿನ ಪರಿಸ್ಥಿತಿ. ಆದರೆ ನಮಗೆ ಉಭಯ ದೇಶಗಳ ಸಂಬಂಧದ ಮೇಲೆ ನಂಬಿಕೆ ಇದೆ. ಹಾಗಾಗಿ ಬಾಹ್ಯ ಒತ್ತಡಗಳ ಹೊರತಾಗಿಯೂ ಭಾರತ-ರಷ್ಯಾದ ಇಂಧನ ಸಹಕಾರ ಮುಂದುವರಿಯುವ ವಿಶ್ವಾಸ ಇದೆ” ಎಂದು ಹೇಳಿದರು.

ಏತನ್ಮಧ್ಯೆ, ರಷ್ಯಾ ತೈಲವನ್ನು ಖರೀದಿಸುವ ಮೂಲಕ ಉಕ್ರೇನ್‌ನಲ್ಲಿ ಯುದ್ಧಕ್ಕೆ ಭಾರತ ಹಣಕಾಸು ನೆರವು ಒದಗಿಸುತ್ತಿದೆ ಎಂದು ಅಮೆರಿಕ ಆರೋಪಿಸಿದೆ ಹಾಗೂ ರಷ್ಯಾದಿಂದ ತೈಲ ಖರೀದಿಸಿದ್ದಕ್ಕಾಗಿ ಭಾರತದ ಮೇಲೆ ಶೇ. 50ರಷ್ಟು ಸುಂಕವನ್ನು ವಿಧಿಸಿದೆ. `ಭಾರತವು ರಷ್ಯಾದ ತೈಲಕ್ಕೆ ಜಾಗತಿಕ ಕ್ಲಿಯರಿಂಗ್ ಹೌಸ್ ಆಗಿ ಕಾರ್ಯನಿರ್ವಹಿಸುತ್ತಿದೆ. ತೈಲವನ್ನು ಹೆಚ್ಚಿನ ಮೌಲ್ಯದ ರಫ್ತುಗಳಾಗಿ ಪರಿವರ್ತಿಸುತ್ತಿದೆ ಎಂದು ಶ್ವೇತಭವನ ಆರೋಪಿಸಿದೆ.

ರಷ್ಯಾದ ಮೇಲೆ ಒತ್ತಡ ತರಲು ಭಾರತಕ್ಕೆ ಸುಂಕ: “ಉಕ್ರೇನ್ ಯುದ್ಧ ತಡೆಯುವ ಉದ್ದೇಶದಿಂದ ಅಮೆರಿಕ ಅಧ್ಯಕ್ಷ ಡೊನಾಲ್ಟ್ ಟ್ರಂಪ್ ಭಾರತದ ಮೇಲೆ ಸುಂಕ ವಿಧಿಸಿದ್ದಾರೆ” ಎಂದು ವೈಟ್‌ಹೌಸ್ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ಹೇಳಿದ್ದಾರೆ.

ಶ್ವೇತಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಭಾರತದ ಮೇಲೆ 50% ಸುಂಕ ವಿಧಿಸುವುದರ ಹಿಂದಿನ ಉದ್ದೇಶ ರಷ್ಯಾದ ಮೇಲೆ ಒತ್ತಡ ತರುವುದಾಗಿದೆ. ರಷ್ಯಾ-ಉಕ್ರೇನ್ ಯುದ್ಧವನ್ನು ನಿಲ್ಲಿಸಲು ಟ್ರಂಪ್ ಮೇಲೆ ಸಾರ್ವಜನಿಕರಿಂದ ಭಾರಿ ಒತ್ತಡವಿದೆ. ಇದಕ್ಕೆ ಪೂರಕವಾಗಿರುವ ಹಲವಾರು ಕ್ರಮಗಳನ್ನು ಅಮೆರಿಕ ತೆಗೆದುಕೊಂಡಿದ್ದು, ಅವುಗಳ ಪೈಕಿ ಭಾರತದ ಮೇಲೆ 50% ಸುಂಕ ಹೇರಿದ್ದು ಕೂಡ ಒಂದು” ಎಂದು ಕ್ಯಾರೋಲಿನ್ ಹೇಳಿದ್ದಾರೆ.

“ಭಾರತ-ಪಾಕಿಸ್ತಾನ ಯುದ್ಧವನ್ನು ಕೊನೆಗೊಳಿಸಿದ್ದು ಟ್ರಂಪ್” ಎಂದು ಕ್ಯಾರೊಲಿನ್ ಪುನರುಚ್ಚರಿಸಿದ್ದಾರೆ. “ವ್ಯಾಪಾರದ ವಿಷಯವನ್ನು ಮುಂದಿಟ್ಟುಕೊಂಡು ಟ್ರಂಪ್ ಸಂಘರ್ಷವನ್ನು ಕೊನೆಗೊಳಿಸಿದ್ದಾರೆ” ಎಂದು ಹೇಳಿದ್ದಾರೆ.

ಯುದ್ಧ ನಿಲ್ಲಿಸಿ ಸ್ವರ್ಗಕ್ಕೆ ಹೋಗುವಾಸೆ: “ರಷ್ಯಾ-ಉಕ್ರೇನ್ ಯುದ್ಧ ನಿಲ್ಲಿಸಿದರೆ ಸ್ವರ್ಗಕ್ಕೆ ಹೋಗುವ ನನ್ನ ಅವಕಾಶಗಳು ಹೆಚ್ಚಾಗಬಹುದು. ಹಾಗಾಗಿ ಈ ನಿಟ್ಟಿನಲ್ಲಿ ಸಾಧ್ಯವಾದ ಎಲ್ಲ ಪ್ರಯತ್ನಗಳನ್ನು ಮಾಡಿ, ಸ್ವರ್ಗಕ್ಕೆ ಹೋಗುವ ಆಸೆ ಇದೆ” ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. “6 ಯುದ್ಧಗಳನ್ನು ನಿಲ್ಲಿಸಿರುವೆ. ಹಾಗಾಗಿ ನೊಬಲ್ ಶಾಂತಿ ಪುರಸ್ಕಾರಕ್ಕೆ ನಾನು ಅರ್ಹ” ಎಂದು ಕೆಲ ದಿನಗಳ ಹಿಂದಷ್ಟೇ ಟ್ರಂಪ್ ಹೇಳಿಕೊಂಡಿದ್ದರು. ಇದರ ಬೆನ್ನಲ್ಲೇ ಈಗ ಸ್ವರ್ಗಕ್ಕೆ ಹೋಗುವ ಆಸೆ ಹೊರಹಾಕಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version