Home ಸುದ್ದಿ ವಿದೇಶ ಬಾಂಬ್‌ ದಾಳಿಯ ದೃಶ್ಯಗಳನ್ನು ಬಿಡುಗಡೆ ಮಾಡಿದ ಇಸ್ರೇಲ್

ಬಾಂಬ್‌ ದಾಳಿಯ ದೃಶ್ಯಗಳನ್ನು ಬಿಡುಗಡೆ ಮಾಡಿದ ಇಸ್ರೇಲ್

0
ಬಾಂಬ್‌ ದಾಳಿಯ ದೃಶ್ಯಗಳನ್ನು ಬಿಡುಗಡೆ ಮಾಡಿದ ಇಸ್ರೇಲ್

ಮಧ್ಯಪ್ರಾಚ್ಯ ಮತ್ತೆ ಪ್ರಕ್ಷುಬ್ಧವಾಗಿದೆ, ಅಕ್ಷರಶಃ ಧಗಧಗಿಸುತ್ತಿದೆ. ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ನಡೆಸಿದ ದಾಳಿಯಲ್ಲಿ ಇಸ್ರೇಲಿ ರಕ್ಷಣಾ ಪಡೆಗಳು ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಮನೆಯ ಮೇಲೆ, ಕಚೇರಿಯ ಮೇಲೆಯೂ ಕ್ಷಿಪಣಿ ದಾಳಿ ಮಾಡಿದ್ದು, ಅವರು ಸಾವಿಗೀಡಾಗಿದ್ದಾರೆ. ಈ ಭೀಕರ ಬಾಂಬ್‌ ದಾಳಿಯ ದೃಶ್ಯಗಳನ್ನು ಇಸ್ರೇಲ್‌ ಬಿಡುಗಡೆ ಮಾಡಿದೆ.

‘ಆಪರೇಷನ್ ರೋರಿಂಗ್ ಲಯನ್’: ಇಸ್ರೇಲ್ ಈ ಕಾರ್ಯಾಚರಣೆಗೆ ‘ರೋರಿಂಗ್ ಲಯನ್’ ಎಂದು ಹೆಸರಿಟ್ಟಿದೆ. ತನ್ನ ಅಧಿಕೃತ ‘ಎಕ್ಸ್’ ಖಾತೆಯಲ್ಲಿ ವೀಡಿಯೊ ಹಂಚಿಕೊಂಡಿರುವ ಐಡಿಎಫ್, ತೆಹ್ರಾನ್‌ನ ಹೃದಯಭಾಗದಲ್ಲಿರುವ ಇರಾನಿನ ಆಡಳಿತ ಕೇಂದ್ರಗಳನ್ನು ಗುರಿಯಾಗಿಸಿ ದಾಳಿ ಮಾಡಿರುವುದಾಗಿ ಖಚಿತಪಡಿಸಿದೆ. ಈ ದಾಳಿಯಲ್ಲಿ ಖಮೇನಿ ಹತರಾಗಿದ್ದಾರೆ ಎಂದು ಹೇಳಲಾಗಿದೆ.

ಕೊಲ್ಲಿ ರಾಷ್ಟ್ರಗಳಲ್ಲಿ ಆತಂಕ: ಖಮೇನಿಯವರ ಸಾವಿನ ಸುದ್ದಿಯ ಬೆನ್ನಲ್ಲೇ ಇರಾನ್ ಕೆರಳಿದ್ದು, ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ಬಹಿರಂಗ ಯುದ್ಧ ಘೋಷಿಸಿದೆ. ಪ್ರತಿದಾಳಿಯಲ್ಲಿ ಕತಾರ್, ಕುವೈತ್, ಸೌದಿ ಅರೇಬಿಯಾ ಮತ್ತು ಬಹ್ರೇನ್‌ನಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳ ಮೇಲೆ ಇರಾನ್ ದಾಳಿ ನಡೆಸಿದೆ. ಯುನೈಟೆಡ್ ಅರಬ್ ಎಮಿರೇಟ್ಸ್‌ನ ಅಬುಧಾಬಿ ಮತ್ತು ದುಬೈನಂತಹ ಆರ್ಥಿಕ ಕೇಂದ್ರಗಳನ್ನೂ ಇರಾನ್ ಗುರಿಯಾಗಿಸಿಕೊಂಡಿದೆ.

ಇದನ್ನೂ ಓದಿ: ಇಸ್ರೇಲ್-ಇರಾನ್ ಯುದ್ಧದಿಂದಾಗಿ ವಿಮಾನ ರದ್ದು: ಪ್ರವಾಸಿಗರ ಪರದಾಟ

“ಇದು ವಿಶ್ವದಾದ್ಯಂತ ಇರುವ ಶಿಯಾ ಮುಸ್ಲಿಮರ ವಿರುದ್ಧ ಸಾರಿದ ಯುದ್ಧ,” ಎಂದು ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯನ್ ಆಕ್ರೋಶ ಹೊರಹಾಕಿದ್ದಾರೆ.

ಭುಗಿಲೆದ್ದ ಸಮರದ ಕಾರಣ ಮಧ್ಯಪ್ರಾಚ್ಯದ ಎಲ್ಲ ದೇಶಗಳೂ ತಮ್ಮ ಏರ್‌ಸ್ಪೇಸ್ ಅನ್ನು ಬಂದ್ ಮಾಡಿವೆ. ಜತೆಗೆ ಭಾರತ ಸೇರಿದಂತೆ ಜಗತ್ತಿನ ಎಲ್ಲ ದೇಶದ ನಾಗರಿಕ ವಿಮಾನಗಳೂ ಈಗ ಕೊಲ್ಲಿ ರಾಷ್ಟ್ರಗಳ ಕಡೆ ಪಯಣ ಬೆಳೆಸುತ್ತಿಲ್ಲ. ಇನ್ನು ಇರಾನ್ ಮೇಲಿನ ದಾಳಿಯನ್ನು ಸ್ವಾಗತಿಸಿರುವ ಇಸ್ರೇಲ್‌ನ ಕೆಲ ಜನ ಭಾರಿ ಹರ್ಷ ವ್ಯಕ್ತಪಡಿಸಿದ್ದಾರೆ.