ಅಮೆರಿಕದಿಂದ ತೈಲ ದಂಡ: ರಷ್ಯಾದಲ್ಲಿ ಜೈ ಶಂಕರ್ ಕಿಡಿ

0
29

ಮಾಸ್ಕೋ: ರಷ್ಯಾದಿಂದ ತೈಲ ಖರೀದಿಸುತ್ತಿರುವುದಕ್ಕಾಗಿ ಭಾರತ ಮೇಲೆ ಹೆಚ್ಚುವರಿ ಶೇ. 25 ಸುಂಕ ವಿಧಿಸಿರುವುದಕ್ಕೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಅಮೆರಿಕ ವಿರುದ್ಧ ಕಿಡಿಕಾರಿದ್ದಾರೆ.

ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ಅಧ್ಯಕ್ಷ ವ್ಲಾದಿಮೀರ್ ಪುಟಿನ್ ಅವರನ್ನು ಭೇಟಿಯಾಗಿ ದ್ವಿಪಕ್ಷೀಯ ವ್ಯಾಪಾರವನ್ನು ಹೆಚ್ಚಿಸುವ ಅವಶ್ಯಕತೆಯನ್ನು ಪ್ರತಿಪಾದಿಸಿದ ಜೈಶಂಕರ್, ಭಾರತಕ್ಕೆ ದಂಡ ವಿಚಾರದಲ್ಲಿ ಅಮೆರಿಕದ ತರ್ಕ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.

ಜಾಗತಿಕ ಇಂಧನ ಮಾರುಕಟ್ಟೆ ಸ್ಥಿರವಾಗಿರಲು ನಾವು ರಷ್ಯಾದಿಂದ ತೈಲ ಖರೀದಿಸಬೇಕು ಎಂದು ಅಮೆರಿಕನ್ನರೇ ಹೇಳಿದ್ದರು. ಅಮೆರಿಕದಿಂದಲೂ ನಾವು ತೈಲ ಖರೀದಿಸುತ್ತಿದ್ದು ಖರೀದಿ ಪ್ರಮಾಣ ನಿರಂತರವಾಗಿ ಹೆಚ್ಚಿದೆ. ಆದ್ದರಿಂದ ಅಮೆರಿಕನ್ನರ ವಾದ ಅರ್ಥವಾಗುತ್ತಿಲ್ಲ ಎಂದರು.

ಪ್ರಸ್ತುತ ಭಾರತವು ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವ ಎರಡನೇ ಅತಿದೊಡ್ಡ ದೇಶವಾಗಿದ್ದು ಚೀನಾವೇ ಅಗ್ರಸ್ಥಾನದಲ್ಲಿದೆ. ಎಲ್‌ಎನ್‌ಜಿ ಹೆಚ್ಚು ಖರೀದಿಸುತ್ತಿರುವುದು ಯೂರೋಪ್ ಒಕ್ಕೂಟ. ಆದರೂ ಚೀನಾ ಮೇಲೆ ಯಾವುದೇ ನಿರ್ಬಂಧಗಳನ್ನು ವಿಧಿಸುತ್ತಿಲ್ಲ. ಚೀನಾ ಮಾಡಿಕೊಂಡಷ್ಟು ತೈಲ ಆಮದು ಭಾರತದಿಂದ ನಡೆದಿಲ್ಲ ಎಂದೂ ವಿವರಿಸಿದರು.

“ಅಮೆರಿಕದ ಒತ್ತಡದ ಹೊರತಾಗಿಯೂ ಭಾರತ ಸ್ವತಂತ್ರ ವಿದೇಶಾಂಗ ನೀತಿ ಮುಂದುವರಿಸಿದೆ. ರಷ್ಯಾದೊಂದಿಗೆ ಬಲವಾದ ಸಂಬಂಧವನ್ನು ನಿರಂತರವಾಗಿ ಮುಂದುವರಿಸಿರುವ ಭಾರತ, ಚೀನಾದೊಂದಿಗೆ ಬಾಂಧವ್ಯವನ್ನೂ ಸಾಮಾನ್ಯಗೊಳಿಸುವ ಪ್ರಯತ್ನ ಮುಂದುವರಿಸಿದೆ” ಎಂದರು.

ದ್ವಿಪಕ್ಷೀಯ ವ್ಯಾಪಾರಕ್ಕೆ ಸಂಬಂಧಿಸಿದಂತೆ ವ್ಯಾಪಾರ ಸಮತೋಲನ ಹಾಗೂ ಕೃಷಿ, ಔಷಧ ಮತ್ತು ಜವಳಿ ಕ್ಷೇತ್ರಗಳಲ್ಲಿ ಭಾರತದ ರಫ್ತು ಹೆಚ್ಚಿಸುವ ಅವಶ್ಯಕತೆ ಇರುವುದನ್ನು ಜೈಶಂಕರ್ ಪ್ರತಿಪಾದಿಸಿದರು.

ಇಂಥ ಕ್ರಮಗಳಿಂದ ವ್ಯಾಪಾರ ಅಸಮತೋಲನ ನಿವಾರಣೆಯಾಗುತ್ತದೆ. ಇಂಧನ ಕ್ಷೇತ್ರದಲ್ಲಿ ಸಹಕಾರ ಬಗೆಗೂ ಚರ್ಚಿಸಿದ ಅವರು ಈ ಕ್ಷೇತ್ರದಲ್ಲಿ ವ್ಯಾಪಾರ ಹಾಗೂ ಹೂಡಿಕೆ ಕಾಪಾಡುವುದು ಉಭಯ ದೇಶಗಳಿಗೆ ಅತಿಮುಖ್ಯ ಎಂದರು.

ಉಕ್ರೇನ್, ಪಶ್ಚಿಮ ಏಷ್ಯಾ, ಮಧ್ಯಪ್ರಾಚ್ಯ ಹಾಗೂ ಅಪಘಾನಿಸ್ತಾನದ ಸಮಸ್ಯೆಗಳ ಬಗ್ಗೆಯೂ ಇಬ್ಬರೂ ನಾಯಕರು ಸಮಾಲೋಚನೆ ನಡೆಸಿದರು. ಸಂವಾದ ಹಾಗೂ ರಾಜತಾಂತ್ರಿಕತೆ ಮೂಲಕ ವಿವಾದಗಳನ್ನು ಬಗೆಹರಿಸಬೇಕೆಂಬ ಭಾರತದ ನಿಲುವನ್ನು ಜೈಶಂಕರ್ ಪುನರುಚ್ಚಿಸಿದರು.

Previous articleದಾವಣಗೆರೆ: ಶಾಲಾ ರಸ್ತೆ ದುರಸ್ತಿಗೆ ವಿದ್ಯಾರ್ಥಿನಿ ಏಕಾಂಗಿ ಹೋರಾಟ
Next articleAnushree: ಆ್ಯಂಕರ್ ಅನುಶ್ರೀ ಮದುವೆ ಆಮಂತ್ರಣ ರಿವೀಲ್!

LEAVE A REPLY

Please enter your comment!
Please enter your name here